ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಸರ್ಕಾರ ಮರೆತಿದೆ ಎಂದ ಜಯಮೃತ್ಯುಂಜಯ ಸ್ವಾಮೀಜಿ, ನೆನಪಿದೆ ಎಂದ ಮುರುಗೇಶ್ ನಿರಾಣಿ

ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಸರ್ಕಾರ ಮರೆತಿದೆ ಎಂದ ಜಯಮೃತ್ಯುಂಜಯ ಸ್ವಾಮೀಜಿ, ನೆನಪಿದೆ ಎಂದ ಮುರುಗೇಶ್ ನಿರಾಣಿ
ಸಚಿವ ಮುರುಗೇಶ್ ನಿರಾಣಿ ಮತ್ತು ಬಸವಜಯಮೃತ್ಯುಂಜಯ ಸ್ವಾಮೀಜಿ

ಕಿರುಕುಳವನ್ನು ನೀಡುತ್ತಿರುವವರ ಹೆಸರನ್ನು ಸ್ವಾಮೀಜಿ ಹೇಳಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ನಾನೇಕೆ ಹೆಗಲ ಮುಟ್ಟಿಕೊಂಡು ನೋಡಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಪ್ರಶ್ನಿಸಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 29, 2021 | 10:15 PM

ಬೆಂಗಳೂರು/ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರ ಬುಧವಾರ ಮತ್ತೆ ಮುನ್ನೆಲೆಗೆ ಬಂದಿದೆ. ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಮತ್ತು ಸಚಿವ ಮುರುಗೇಶ್ ನಿರಾಣಿ ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ಮತ್ತು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಸೆ.15ರ ಗಡುವು ಮರೆತಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರೆ, ನಮ್ಮ ಸರ್ಕಾರವು ಮೀಸಲಾತಿಯ ಪರವಾಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಸರ್ಕಾರವು ನಮ್ಮ ಸಮುದಾಯಕ್ಕೆ ಮಾತು ಕೊಟ್ಟಂತೆ ನಡೆದುಕೊಳ್ಳಲಿಲ್ಲ. ಸೆ.15ರ ಗಡುವನ್ನು ಮರೆತಿದೆ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯಶ್ರೀ ಹೇಳಿದ್ದಾರೆ. ರಾಜ್ಯ ಸರ್ಕಾರದ ಭರವಸೆ ಮೇರೆಗೆ ನಾವು ತಾತ್ಕಾಲಿಕವಾಗಿ‌ ಪ್ರತಿಭಟನೆ ವಾಪಸ್ ಪಡೆದಿದ್ದೆವು. ಮೀಸಲಾತಿ ಕುರಿತು ಸದನದಲ್ಲಿ ಬಸನಗೌಡ ಪಾಟೀಲ್​ ಯತ್ನಾಳ್ ಪ್ರಸ್ತಾಪಿಸಿದ್ದರು. ಸದನದಲ್ಲಿ ಮುಖ್ಯಮಂತ್ರಿ ಮತ್ತು ಸಚಿವ ಸಿ.ಸಿ.ಪಾಟೀಲ್​ ಕೂಡ ನಮಗೆ ಮೀಸಲಾತಿಯ ಭರವಸೆ ಕೊಟ್ಟಿದ್ದಾರೆ. ನಮಗೆ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ವಿಶ್ವಾಸವಿದೆ. ಆದರೆ ಅವರಿಂದ ಸ್ಪಷ್ಟ ನಿರ್ದೇಶನ ಹೊರಬರಬೇಕು. ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ನಮ್ಮ ಅಭಿಯಾನ ಮುಕ್ತಾಯವಾಗಲಿದೆ.

ನಮ್ಮ ಸಮುದಾಯಕ್ಕೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಬೇಕಿದೆ. ಮೀಸಲಾತಿ ಕುರಿತು ಮುಖ್ಯಮಂತ್ರಿ‌ ವರದಿ ಪಡೆದುಕೊಂಡಿದ್ದಾರೆ. ಅ.1ರ ಸಭೆಯಲ್ಲಿ ಮುಖ್ಯಮಂತ್ರಿ ಸಂಪೂರ್ಣ ಭರವಸೆ ಕೊಡಬೇಕು. ಭರವಸೆ ಕೊಡದಿದ್ದರೆ ಮತ್ತೆ ಸತ್ಯಾಗ್ರಹದ ಹಾದಿ ಅನಿವಾರ್ಯವಾಗುತ್ತದೆ ಎಂದು ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಸವ ಜಯಮೃತ್ಯುಂಜಯಶ್ರೀ ಎಚ್ಚರಿಕೆ ನೀಡಿದರು.

ಮೀಸಲಾತಿಗಾಗಿ ಪ್ರಾಮಾಣಿಕ ಪ್ರಯತ್ನ: ಮುರುಗೇಶ್ ನಿರಾಣಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದಾಗ ಪಾಲ್ಗೊಂಡು, ಅದರ ಲಾಭ ಪಡೆದು ಮಂತ್ರಿಗಿರಿ ಪಡೆದಿದ್ದಾರೆ ಎಂಬ ಜಯಮೃತ್ಯುಂಜಯಶ್ರೀ ಆರೋಪದ ಬಗ್ಗೆ ಬೆಳಗಾವಿಯಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದರು. ಸ್ವಾಮೀಜಿ ಯಾರ ಬಗ್ಗೆ ಆರೋಪಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಪಂಚಮಸಾಲಿ ಪೀಠದ ಏಳ್ಗೆಗಾಗಿ 10 ವರ್ಷಗಳಿಂದ ಶ್ರಮಿಸಿದ್ದೇನೆ. 2ಎ ಮೀಸಲಾತಿ ಕೊಡಿಸಲು ಸಚಿವನಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಉಳಿದವರಂತೆ ನಾನು ರಸ್ತೆಯಲ್ಲಿ ನಿಂತು ಹೋರಾಟ ಮಾಡಲು, ಎಲ್ಲಾ ಕಡೆಗೆ ಹೋಗಿ ಪಾದಯಾತ್ರೆ ಮಾಡಲು ಆಗುವುದಿಲ್ಲ. ಮಂತ್ರಿ ಆಗಿ ನನಗೆ ನನ್ನದೇ ಆದ ಚೌಕಟ್ಟುಗಳಿವೆ ಎಂದು ಹೇಳಿದರು.

2ಎ ಮೀಸಲಾತಿಗಾಗಿ ನಾನು ನಿರಂತರ ಹೋರಾಟ ಮಾಡಿದ್ದೇನೆ. ವೀರಶೈವ ಲಿಂಗಾಯತ ಸಮುದಾಯವು ಈ ಮೊದಲು ಜಾತಿ ಕಾಲಂನಲ್ಲಿ ಇರಲಿಲ್ಲ. 2010ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಾತಿ ಕಾಲಂನಲ್ಲಿ ಸೇರ್ಪಡೆಯಾಯಿತು. ಬಸವಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಗುರುಗಳು. ಅವರನ್ನು ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಮಾಡಿದ್ದೇ ನಾವು. ಸ್ವಾಮೀಜಿಗೆ ಮಾನಸಿಕ ಕಿರುಕುಳ ಕೊಡ್ತಿರುವವರು ಯಾರು ಎಂಬುದು ಗೊತ್ತಿಲ್ಲ. ಕಿರುಕುಳವನ್ನು ನೀಡುತ್ತಿರುವವರ ಹೆಸರನ್ನು ಸ್ವಾಮೀಜಿ ಹೇಳಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ನಾನೇಕೆ ಹೆಗಲ ಮುಟ್ಟಿಕೊಂಡು ನೋಡಬೇಕು ಎಂದು ಪ್ರಶ್ನಿಸಿದರು.

ಜಮಖಂಡಿಯಲ್ಲಿ ಹೋರಾಟ ಮಾಡಿದರೆ ಕಲ್ಲು ಹೊಡೆಯುತ್ತೇವೆ ಎಂಬ ಕಾಶಪ್ಪನವರ್ ಆರೋಪದ ಪ್ರತಿಕ್ರಿಯಿಸಿದ ಅವರು, ನಾನು 20 ಕಾರ್ಖಾನೆಗಳ ಮಾಲೀಕ, 70 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇನೆ. ಸಣ್ಣತನದ ವ್ಯಕ್ತಿತ್ವ ನನ್ನದಲ್ಲ, ನಮ್ಮವರು ನನ್ನ ಬಗ್ಗೆ ಮಾತನಾಡಲಿ ಬಿಡಿ. ಅವರು ಮಾಡುತ್ತಿರುವ ಪಂಚಮಸಾಲಿ ಸಂಘಟನೆ ಕಾರ್ಯಕ್ಕೆ ನನ್ನ ಬೆಂಬಲವಿದೆ. ಕಲ್ಲು ಎಸೆಯುವ, ತತ್ತಿ ಒಗೆಯುವ ಜಾಯಮಾನ ನನ್ನದಲ್ಲ. ನನ್ನ ಕಾರ್ಖಾನೆ ಮುಂದೆ 20 ವರ್ಷ ಪ್ರತಿಭಟನೆ ನಡೆದರೂ ನಾನು ಅವರಿಗೆ ಏನೂ ಅಂದಿಲ್ಲ. ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ಹೇಳುವ ಕುಟುಂಬ ನಮ್ಮದು. ಸ್ವಾಮೀಜಿ ಹಾಗೂ ಹೋರಾಟಗಾರರು ನನ್ನ ಜೊತೆ ಮಾತನಾಡಿಲ್ಲ ಎಂದು ಹೇಳಿದರು.

ಶಾಸಕನಾಗಿದ್ದುಕೊಂಡು ಹೋರಾಟ ಮಾಡುವುದು ಬೇರೆ. ಸಚಿವನಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದು ಬೇರೆ. 2ಎ ಮೀಸಲಾತಿ ಸಮಸ್ತ ವೀರಶೈವ ಲಿಂಗಾಯತರಿಗೆ ಸಿಗಬೇಕು. ವೀರಶೈವ ಲಿಂಗಾಯತ ಸಮುದಾಯದ 17 ಶಾಸಕರಿದ್ದೇವೆ. ಎಲ್ಲರೂ ಒಗ್ಗೂಡಿದರೆ ಹೋರಾಟ ಮಾಡಲು ಶಕ್ತಿ ಬರುತ್ತದೆ. ಸಮುದಾಯದ ಕೆಲ ಉಪಪಂಗಡಗಳಲ್ಲಿ ಶಾಸಕರಿಲ್ಲ, ಅವರ ಪರ ಧ್ವನಿ ಎತ್ತುವವಱರು ಎಂದು ಪ್ರಶ್ನಿಸಿದರು.

ಮೀಸಲಾತಿ ವಿಷಯವನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇವೆ. 2ಎ ಮೀಸಲಾತಿ ನೀಡಲು ಮುಖ್ಯಮಂತ್ರಿಗೂ ಒಲವಿದೆ. ನಾನು 2ಎ ಮೀಸಲಾತಿ ಹೋರಾಟದಿಂದ ಮಂತ್ರಿಸ್ಥಾನ ಪಡೆದಿಲ್ಲ. ಪಂಚಮಸಾಲಿ ಪೀಠ ಹುಟ್ಟುವ ಮೊದಲೇ ನಾನು ಮಂತ್ರಿಯಾಗಿದ್ದೆ. ಜಯಮೃತ್ಯುಂಜಯಶ್ರೀ ದೊಡ್ಡ ವ್ಯಕ್ತಿ, ನನ್ನ ಮೇಲೆ ಅವರಿಗೆ ಪ್ರೀತಿಯಿದೆ. ರಾಜಕೀಯದ ಜತೆ ಉದ್ಯಮದಲ್ಲೂ ಬೆಳೆದಿದ್ದೇನೆಂದು ನನ್ನನ್ನು ವಿರೋಧಿಸುವ ಹಲವರಿಗೆ ನನ್ನ ಬಗ್ಗೆ ಪ್ರೀತಿಯಿದೆ. ನನ್ನನ್ನು ಯಾರೂ ಟಾರ್ಗೆಟ್ ಮಾಡುತ್ತಿಲ್ಲ. ಎಲ್ಲರ ಜೊತೆಗೂ ನನಗೆ ಒಳ್ಳೆಯ ಸಂಬಂಧವಿದೆ. ಸರ್ಕಾರದ ಭಾಗವಾಗಿ ಮೀಸಲಾತಿ ಕಲ್ಪಿಸಲು ಯತ್ನಿಸುತ್ತಿದ್ದೇನೆ ಎಂದು ಹೇಳಿದರು.

(Panchamasali Reservation issue Jaya Mruthyunjaya Swamiji Murugesh Responds)

ಇದನ್ನೂ ಓದಿ: ಪಂಚಮಸಾಲಿ ಸೇರಿ 10 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಸದ್ಯದಲ್ಲೇ ಸರ್ಕಾರಕ್ಕೆ ಶಿಫಾರಸು

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ: ಅಕ್ಟೋಬರ್ 1ರಿಂದ ಸತ್ಯಾಗ್ರಹ ನಡೆಸಲು ತೀರ್ಮಾನ- ಬಸವ ಜಯಮೃತ್ಯುಂಜಯಶ್ರೀ

Follow us on

Related Stories

Most Read Stories

Click on your DTH Provider to Add TV9 Kannada