ದಾವಣಗೆರೆ, ಫೆ.22: ಜಿಲ್ಲಾಡಳಿತ ದಿಟ್ಟ ನಿರ್ಧಾರಕ್ಕೆ ಮುಂದಾಗಿದೆ. ಕುಡಿಯುವ ನೀರಿಗಾಗಿ ಬಿಟ್ಟ ನೀರನ್ನು ಬೆಳೆಗೆ ಬಳಸದಂತೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂವಿ ಅವರು ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಲಂ 145ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿದ್ದಾರೆ. ವಿಜಯನಗರ ಜಿಲ್ಲೆಯ ಪುಣ್ಯಕ್ಷೇತ್ರ ಮೈಲಾರ ಜಾತ್ರೆಗೆ ನೀರು ಹಾಗೂ ಕೆಲ ನಗರ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿಗೆ ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು ಬಿಡಲಾಗಿದೆ. ಜೊತೆಗೆ ಭದ್ರಾ ಕಾಲುವೆಗೂ ನೀರು ಬಿಡಲಾಗಿದೆ. ತುಂಗಭದ್ರಾ ನದಿಯ ನೀರು ಪಂಪ್ ಸೆಟ್ ಮೂಲಕ ಎತ್ತುವಂತಿಲ್ಲ. ಜೊತೆಗೆ ಭದ್ರಾ ಕಾಲುವೆಯ ಕೊನೆ ಭಾಗದ ರೈತರ ಹಿತದೃಷ್ಠಿಯಿಂದ ಕಾಲುವೆಗೆ ಪಂಪ್ ಸೆಟ್ ಅಳವಡಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂವಿ ತಾಕೀತು ಮಾಡಿದ್ದಾರೆ.
ಭದ್ರಾ ಕಾಲುವೆಯ ಕೊನೆಯ ಭಾಗಕ್ಕೆ ನೀರು ತಲುಪುತಿಲ್ಲ. ಜೊತೆಗೆ ತುಂಗಭದ್ರಾ ನದಿಯ ಕುಡಿಯುವ ನೀರಿಗೆ ಮಾತ್ರ ಬಳಕೆ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ ಹೇಳಿದ್ದಾರೆ. ಇದರ ಜೊತೆಗೆ ಭದ್ರಾ ಕಾಲುವೆಯ ಕೊನೆ ಭಾಗಕ್ಕೆ ನೀರು ಪೂರೈಕೆ ಆಗಬೇಕು. ಹಾಳಾಗುತ್ತಿರುವ ಅಡಿಕೆ ತೋಟಗಳನ್ನ ಉಳಿಸಿಕೊಳ್ಳಲು ಕೊನೆಯ ಭಾಗದ ರೈತರಿಗೆ ನೀರು ತಲುವಂತೆ ಮಾಡಲು ಅಕ್ರಮ ಪಂಪ್ ಸೆಟ್ ತೆರವು ಕಾರ್ಯಾರಣೆ ಅರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: ಸಚಿವ ರಾಮಲಿಂಗಾರೆಡ್ಡಿ ಆಪ್ತನಿಂದ ಅರಣ್ಯ ಸಿಬ್ಬಂದಿಗೆ ಅವಾಜ್; ಕೋರ್ಟ್ ಆದೇಶದ ನಂತರ FIR ದಾಖಲು
ಇನ್ನು ಕಬ್ಬು ಬೆಳೆಗಾರರ ಸಂಘ ಕುಕ್ಕುವಾಡ ನೇತೃತ್ವದಲ್ಲಿ ಧರಣಿ ನಡೆಸುತ್ತಿದ್ದಾರೆ. ದಾವಣಗೆರೆ ಶಾಖನಾಲೆ ಎರಡನೇ ವಲಯಕ್ಕೆ ಒಂದು ಹನಿಯೂ ನೀರು ಹರಿಯದಿರುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಖಾಲಿ ಕಾಲುವೆಯಲ್ಲಿ ಕುಳಿತು ಧರಣಿ ನಡೆಸಲಾಗುತ್ತಿದೆ. ದಿನೇ ದಿನೇ ಬೆಳೆಗಳು ಒಣಗುತ್ತಿರುವುದು ಆತಂಕವನ್ನು ಹೆಚ್ಚಿಸುತ್ತಿದೆ. ರೈತರ ತಾಳ್ಮೆಯನ್ನು ಇನ್ನೂ ಪರೀಕ್ಷಿಸಬೇಡಿ ಮಕ್ಕಳನ್ನು ಸಾಕುವ ಹಾಗೆ ತೋಟಗಳನ್ನು ನೋಡಿಕೊಳ್ಳಲಾಗುತ್ತಿದೆ. ಸಾಲ ಮಾಡಿ ಕೊಳವೆಬಾವಿ ಕೊರಿಸಿದರೂ ನೀರು ಸಿಗುತ್ತಿಲ್ಲ. ಈ ಹಿಂದೆ ನೀರು ನೀಡುತ್ತಿದ್ದ ಕೊಳವೆ ಬಾವಿಗಳು ಖಾಲಿ ಆಗುತ್ತಿವೆ. ಸಮರ್ಪಕ ನೀರು ಹರಿದರೆ ಮಾತ್ರ ಈ ಎಲ್ಲ ಸಮಸ್ಯೆಗಳು ಕೊನೆಗಾಣಬಹುದು, ನೀರಿನ ಸಮಸ್ಯೆ ಎನ್ನುವುದು ಇದ್ದಕ್ಕಿದ್ದಿಂತೆ ಸೃಷ್ಟಿಯಾಗುವಂತದ್ದಲ್ಲ. ಭದ್ರಾ ಜಲಾಶಯದ ಸಂಗ್ರಹ ಅವಲಂಬನೆ ಲೆಕ್ಕಾಚಾರ ಮಾಡಿಯೇ ಮಳೆಗಾಲ ಮತ್ತು ಬೇಸಿಗೆಕಾಲದ ನೀರಿನ ವೇಳಾಪಟ್ಟಿಯನ್ನು ನಿಗದಿಪಡಿಸಬೇಕಾಗುತ್ತದೆ. ಐಸಿಸಿ ಸಭೆಯಲ್ಲಿ ನೀರಾವರಿ ಇಂಜಿನಿಯರ್ ಗಳ ದಿವ್ಯ ಮೌನ ರೈತರಿಗೆ ಸಂಕಷ್ಟವಾಗಿ ಪರಿಣಮಿಸಿದೆ. ನಾಳೆ ಟ್ರ್ಯಾಕ್ಟರ್ ಗಳ ಸಮೇತ ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದು ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರ ಪ್ರತಿಭಟನೆಗಳು ನಿರಂತರವಾಗಿ ನಡೆಯುವುದು ಆಡಳಿತದ ವೈಖರಿಯನ್ನು ಬಿಂಬಿಸುತ್ತದೆ. ಒಣಗುತ್ತಿರುವ ಬೆಳೆಗಳು ಆಡಳಿತಕ್ಕೆ ಕಾಣದೆ ಇರುವುದು ಆಕ್ರೋಶವನ್ನು ಹೆಚ್ಚಿಸುತ್ತಿದೆ ಎಂದು ಕಬ್ಬು ಬಳಗಾರ ಸಂಘದ ಉಪಾಧ್ಯಕ್ಷ ಕೆ.ಎನ್ ಮಂಜುನಾಥ್ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ