ದಾವಣಗೆರೆ: ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಗೆ ಆರ್ಎಸ್ಎಸ್ ಗಂಧಗಾಳಿ ಗೊತ್ತಿಲ್ಲ. ಯಾವುದೋ ಒಂದು ಪುಸ್ತಕ ಓದಿ ಅದೇ ಸತ್ಯವೆಂದು ಹೇಳ್ತಾರೆ ಎಂದು ಬಿಜೆಪಿ ನಾಯಕ ಹಾಗೂ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಕಂದಾಯ ಸಚಿವ ಅಶೋಕ್ ಇಂದು (ಅಕ್ಟೋಬರ್ 16) ಮಾತನಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕುಮಾರಸ್ವಾಮಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದರು. ಹಾಗೂ ತಾವು ಪುಸ್ತಕವನ್ನು ಓದಿರುವುದಾಗಿ ಉಲ್ಲೇಖಿಸಿದ್ದರು. ಈ ವಿಚಾರವಾಗಿ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ನಡುವೆ ಅಲ್ಪಸಂಖ್ಯಾತರ ಓಲೆಕೆಗೆ ಪೈಪೋಟಿ ಇದೆ. ಕೇಂದ್ರ ಕಾಂಗ್ರೆಸ್, ರಾಜ್ಯ ಕಾಂಗ್ರೆಸ್ನಲ್ಲಿ ಕಿತ್ತಾಟ ಶುರುವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಬಸವರಾಜ ಬೊಮ್ಮಾಯಿಯವರೇ ಒಂದೂವರೆ ವರ್ಷ ಸಿಎಂ ಆಗಿರ್ತಾರೆ. ಬಿಜೆಪಿ, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಿದೆ ಎಂದು ಸಚಿವ ಅಶೋಕ್ ಹೇಳಿಕೆ ನೀಡಿದ್ದಾರೆ.
ಆರ್ಎಸ್ಎಸ್ ಬಗ್ಗೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಆರ್ಎಸ್ಎಸ್ ಬಗ್ಗೆ ಹೆಚ್ಚು ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಸ್ಪರ್ಧೆ ನಡೆಯುತ್ತಿದೆ. ಅಲ್ಪಸಂಖ್ಯಾತ ಮತಗಳಿಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಹಲ್ಲು ಗಿಂಜುತ್ತಿದ್ದಾರೆ. ಆರ್ಎಸ್ಎಸ್ ಅನ್ನು ತೆಗಳುವುದರಿಂದ ಅಲ್ಪಸಂಖ್ಯಾತ ಮತಗಳನ್ನು ಯಾರು ಎಷ್ಟು ಪಡೆಯುತ್ತಾರೆ ಅಂತ ಸ್ಪರ್ಧೆ ಇದೆ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಇಲ್ದಿದ್ರೆ ಭಾರತ್ ಮಾತಾ ಕೀ ಜೈ ಅನ್ನೋಕೆ ಯಾರು ಇರ್ತಾ ಇದ್ರು?: ಸಿ.ಟಿ. ರವಿ
ಎಲ್ಲಾ ವಿವಿಗಳಲ್ಲಿ ಆರ್ಎಸ್ಎಸ್ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ಆರ್ಎಸ್ಎಸ್ ಏನು ಅನ್ನೋದನ್ನ ಕುಮಾರಸ್ವಾಮಿಯವರು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಸ್ವಯಂ ಸೇವಕರು ಆದಾಗ ಮಾತ್ರ ಆರ್ಎಸ್ಎಸ್ ಏನು ಅನ್ನೋದು ಅರ್ಥವಾಗುತ್ತೆ. ಅಲ್ಲಿ ಇರುವವರು ಸ್ವಯಂಸೇವಕರು, ಸದಸ್ಯತ್ವ ಕೊಡೋದಿಲ್ಲ. ಸದಸ್ಯತ್ವ ಇಲ್ಲ ಅಂದ್ಮೇಲೆ ಆರ್ಎಸ್ಎಸ್ ಸದಸ್ಯರು ವಿವಿಯ ಸಿಂಡಿಕೇಟ್ ಸದಸ್ಯರಾಗಲು ಹೇಗೆ ಸಾಧ್ಯ. ಈ ಹೇಳಿಕೆಯಲ್ಲೇ ಕುಮಾರಸ್ವಾಮಿಯವರ ಅಜ್ಞಾನ ತಿಳಿಯುತ್ತೆ. ಅಜ್ಞಾನದಿಂದ ಮಾತಾಡಿ ನಗೆಪಾಟಲಿಗೀಡಾಗಬೇಡಿ ಎಂದು ಸಿ.ಟಿ ರವಿ ಹೇಳಿದ್ದಾರೆ.
ಆರ್ಎಸ್ಎಸ್ ಇಲ್ದಿದ್ರೆ ಭಾರತ್ ಮಾತಾ ಕೀ ಜೈ ಅನ್ನೋಕೆ ಯಾರು ಇರ್ತಾ ಇದ್ರು? ಜೆಡಿಎಸ್ನಲ್ಲಿ ದೇವೇಗೌಡ್ರಿಗೆ ಜೈ, ಕುಮಾರಣ್ಣನಿಗೆ ಜೈ, ನಿಖಿಲ್ ಅಣ್ಣನಿಗೆ ಜೈ. ಕಾಂಗ್ರೆಸ್ನಲ್ಲಿ ಸೋನಿಯಾ ಗಾಂಧಿಗೆ ಜೈ, ರಾಹುಲ್ ಗಾಂಧಿಗೆ ಜೈ, ಪ್ರಿಯಾಂಕ ಗಾಂಧಿಗೆ ಜೈ. ಭಾರತ ಮಾತಾ ಕಿ ಜೈ ಅನ್ನೋದು ಅವರ ದೃಷ್ಟಿಯಲ್ಲಿ ಅಪರಾಧ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿಟಿ ರವಿ ಹೇಳಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಆರ್ಎಸ್ಎಸ್ ವಿರುದ್ಧ ಇತ್ತೀಚೆಗೆ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿರುವ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಹೊಸ ಬಾಂಬ್ ಸಿಡಿಸಿದ್ದರು. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆರ್ಎಸ್ಎಸ್ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಆರ್ಎಸ್ಎಸ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದರು. ಇವತ್ತು ಈ ಸರ್ಕಾರದಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಆರ್ಎಸ್ಎಸ್ನ ಕಾರ್ಯಕರ್ತರನ್ನ ಸಿಂಡಿಕೇಟ್ ಮೆಂಬರ್ ಮಾಡಿಕೊಂಡಿದ್ದಾರೆ. ಕೆಲಸ ಆಗಲು ಒಂದು ಎರಡು ಲಕ್ಷ ರೂಪಾಯಿ ಡಿಮ್ಯಾಂಡ್ ಇಟ್ಟಿದ್ದಾರೆ. 40 ವರ್ಷದ ಹಿಂದಿನ ಆರ್ಎಸ್ಎಸ್ ಬೇರೆ, ಈಗಿನ ಆರ್ಎಸ್ಎಸ್ ಬೇರೆ ಎಂದು ಅವರು ವ್ಯಾಖ್ಯಾನಿಸಿದ್ದರು.
ಇದನ್ನೂ ಓದಿ: ಮಹಾತ್ಮ ಗಾಂಧಿ ಕಂಡ ರಾಮರಾಜ್ಯ ಮಾಡಬೇಕು; ಗ್ರಾಮಸ್ವರಾಜ್ಯ ನಮ್ಮ ಸರ್ಕಾರದ ಸಂಕಲ್ಪ: ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: RSS ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ: ಎಲ್ಲ ವಿವಿಗಳಲ್ಲಿ ಆರ್ಎಸ್ಎಸ್ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ!
Published On - 2:59 pm, Sat, 16 October 21