Siddaramotsava: ಜನರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ, ಶಕ್ತಿ ಇರುವವರೆಗೂ ಮಾಡುತ್ತಲೇ ಇರುತ್ತೇನೆ -ಸಿದ್ದರಾಮಯ್ಯ

ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ರಾಹುಲ್‌ಗೆ ಕೋಟಿ ಕೋಟಿ ನಮನ. ನನ್ನ ಮೇಲೆ ರಾಹುಲ್‌ ಗಾಂಧಿ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ನಾನು ಕಾಂಗ್ರೆಸ್‌ ಸೇರಿದಾಗಿನಿಂದಲೂ, ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದಿದ್ದರೂ ನನ್ನ ಬಗ್ಗೆ ವಿಶೇಷ ಪ್ರೀತಿ ಇದೆ.

Siddaramotsava: ಜನರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ, ಶಕ್ತಿ ಇರುವವರೆಗೂ ಮಾಡುತ್ತಲೇ ಇರುತ್ತೇನೆ -ಸಿದ್ದರಾಮಯ್ಯ
ಸಿದ್ದರಾಮಯ್ಯ
Updated By: ಆಯೇಷಾ ಬಾನು

Updated on: Aug 03, 2022 | 4:43 PM

ದಾವಣಗೆರೆ: ದಾವಣಗೆರೆಯಲ್ಲಿ ಬರೋಬ್ಬರಿ 50 ಎಕರೆ ಮೈದಾನದಲ್ಲಿ ಬೃಹತ್ ವೇದಿಕೆಯಲ್ಲಿ ಸಿದ್ದರಾಮೋತ್ಸವ(Siddaramotsava) ಕಾರ್ಯಕ್ರಮ ನಡೆಯುತ್ತಿದೆ. ಸಿದ್ದರಾಮಯ್ಯ(Siddaramaiah) ತಮ್ಮ 75ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ(Rahul Gandhi), ಡಿಕೆ ಶಿವಕುಮಾರ್(DK Shivakumar) ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಿದ್ದು ವೇದಿಕೆಯಲ್ಲಿ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಕಾರ್ಯ ವೈಕರಿ, ಸೇವೆಯನ್ನು ಕೊಂಡಾಡಿದ್ದಾರೆ. ಹಾಗೂ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗೂ ಸನ್ಮಾನ ಮಾಡಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡಿದ್ದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾರ್ಯಕ್ರಮಕ್ಕೆ ಆಗಮಿಸಿದ ರಾಹುಲ್‌ಗಾಂಧಿಗೆ ಧನ್ಯವಾದಗಳು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ನಾಯಕರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಡೀ ದೇಶದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸ್ತಿದ್ದೇವೆ. ನಿಮಗೆಲ್ಲರಿಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯ. ನನಗೆ ಇಂದಿಗೆ 75 ವರ್ಷ ತುಂಬಿದೆ. ನಾನು ಈ ಹಿಂದೆ ಎಂದೂ ಹುಟ್ಟುಹಬ್ಬ ಆಚರಿಸಿರಲಿಲ್ಲ. ಹಿತೈಷಿಗಳ ಒತ್ತಾಯದಂತೆ 75ನೇ ಹುಟ್ಟುಹಬ್ಬ ಆಚರಣೆಗೆ ಒಪ್ಪಿದೆ. ಸ್ನೇಹಿತರು, ಹಿತೈಷಿಗಳ ಒತ್ತಾಯಕ್ಕೆ ಮಣಿದು ಬರ್ತ್‌ಡೇ ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದರು.

ನನ್ನ ಮೇಲೆ ರಾಹುಲ್‌ ಗಾಂಧಿ ವಿಶೇಷ ಪ್ರೀತಿ

ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ರಾಹುಲ್‌ಗೆ ಕೋಟಿ ಕೋಟಿ ನಮನ. ನನ್ನ ಮೇಲೆ ರಾಹುಲ್‌ ಗಾಂಧಿ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ನಾನು ಕಾಂಗ್ರೆಸ್‌ ಸೇರಿದಾಗಿನಿಂದಲೂ, ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದಿದ್ದರೂ ನನ್ನ ಬಗ್ಗೆ ವಿಶೇಷ ಪ್ರೀತಿ ಇದೆ. ನಾನು ಸಿಎಂ ಆಗಲು ರಾಹುಲ್ ಗಾಂಧಿರವರೇ ಕಾರಣಕರ್ತರು. ನನಗೆ ಸೋನಿಯಾ, ರಾಹುಲ್‌ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ರಾಹುಲ್, ಸೋನಿಯಾರನ್ನು ಹೊಗಳಿದರು.

ಜನರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಶಕ್ತಿಯೇ ಪ್ರಮುಖವಾದುದು. ಜನರ ಆಶೀರ್ವಾದ ಇದ್ದಾಗ ಮಾತ್ರ, ಜನರ ಸೇವೆ ಮಾಡಲು ಆಗುವುದು. ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಕರ್ನಾಟಕದ ಎಲ್ಲಾ ಜನತೆಗೆ ಧನ್ಯವಾದಗಳು. ನನಗೆ ಶಕ್ತಿ ಇರುವವರೆಗೂ ಜನರ ಸೇವೆಯನ್ನು ಮಾಡುತ್ತೇನೆ ಎಂದರು.

ನಾನು, ಡಿಕೆಶಿ ಒಗ್ಗಟ್ಟಾಗಿದ್ದೇವೆ

ಡಿಕೆಶಿ, ನನ್ನ ಮಧ್ಯೆ ಬಿರುಕು ಇದೆ ಎಂದು ಬಿಂಬಿಸುತ್ತಿದ್ದಾರೆ. ಹುಟ್ಟುಹಬ್ಬ ಆಚರಣೆಗೆ ವಿರೋಧವಿದೆ ಎಂದು ಬಿಂಬಿಸುತ್ತಿದ್ದಾರೆ. ಇದು ವಿರೋಧಿಗಳ ಪಿತೂರಿ. ನಾನು, ಡಿಕೆಶಿ ಒಗ್ಗಟ್ಟಾಗಿದ್ದೇವೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ. ಕೋಮುವಾದಿ, ಭ್ರಷ್ಟ ಸರ್ಕಾರವನ್ನು ನನ್ನ ಜೀವನದಲ್ಲೇ ನೋಡಿಲ್ಲ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನೀವು ಪಣ ತೊಡಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದೇ ಬಿಜೆಪಿಯ ಗುರಿ

ಮೋದಿ ಪ್ರಧಾನಿಯಾದ ಬಳಿಕ ದೇಶ ಸಾಕಷ್ಟು ಸಂಕಷ್ಟದಲ್ಲಿದೆ. ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದೇ ಬಿಜೆಪಿಯ ಗುರಿ. ಪ್ರಧಾನಿ ಮೋದಿ, ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿ ಹೇಳ್ತಿದ್ದೇನೆ. ಕಾಂಗ್ರೆಸ್‌ ಮುಗಿಸುವ ನಿಮ್ಮ ಕನಸು ನನಸಾಗಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಆಶಾಕಿರಣ. ಬಡವರು, ದಲಿತರು ಏಳಿಗೆಗೆ ಶ್ರಮಿಸುವವರು ಚುಕ್ಕಾಣಿ ಹಿಡಿಯಲಿ. ಇದಕ್ಕೆ ರಾಹುಲ್ ಗಾಂಧಿರವರು ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Published On - 4:33 pm, Wed, 3 August 22