Vande Bharat Express: ದಾವಣಗೆರೆಯಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್​ ರೈಲಿಗೆ ಕಲ್ಲು

ನಾಲ್ಕು ದಿನದ ಹಿಂದೆ ಆರಂಭವಾದ ಹೊಸ ಹೈಸ್ಪೀಡ್ ವಂದೇಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿರುವ ಘಟನೆ ದಾವಣಗೆರೆ ನಗರದ ಹೊರವಲಯದ ಜಿಎಂಐಟಿ ಹಿಂಭಾಗದಲ್ಲಿ ನಡೆದಿದೆ.

Vande Bharat Express: ದಾವಣಗೆರೆಯಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್​ ರೈಲಿಗೆ ಕಲ್ಲು
ಗ್ಲಾಸ್ ಬಿರುಕು (ಎಡಚಿತ್ರ) ವಂದೇ ಭಾರತ್​ ರೈಲು (ಬಲಚಿತ್ರ)
Updated By: ವಿವೇಕ ಬಿರಾದಾರ

Updated on: Jul 02, 2023 | 12:28 PM

ದಾವಣಗೆರೆ: ನಾಲ್ಕು ದಿನದ ಹಿಂದೆ ಆರಂಭವಾದ ಧಾರವಾಡ-ಬೆಂಗಳೂರು ವಂದೇ ಭಾರತ್ (Dharwad-Bengaluru Vande Bharat Express) ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿರುವ ಘಟನೆ ದಾವಣಗೆರೆ (Davangere) ನಗರದ ಹೊರವಲಯದ ಜಿಎಂಐಟಿ ಹಿಂಭಾಗದಲ್ಲಿ ನಡೆದಿದೆ. ಧಾರವಾಡದಿಂದ ನಿನ್ನೆ (ಜು.01) ರಂದು ಮಧ್ಯಾಹ್ನ ಬೆಂಗಳೂರಿಗೆ ತೆರಳುತ್ತಿರುವಾಗ ಕೃತ್ಯ ಸಂಭವಿಸಿದೆ. ಇದರಿಂದ ಸಿ-4 ಕೋಚ್‌ನ ಕಿಟಕಿಗೆ ಕಲ್ಲು ಬಡಿದಿದ್ದು, ಗ್ಲಾಸ್ ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು-ಚನ್ನೈ ವಂದೇ ಭಾರತ ಎಕ್ಸಪ್ರೆಸ್ ಮೇಲು ಕಲ್ಲು ತೂರಾಟ

ರಾಜ್ಯದ ಮೊದಲ ವಂದೇ ಭಾರತ್​ ಎಕ್ಸಪ್ರೆಸ್​ ರೈಲು ಮೈಸೂರು-ಚೆನ್ನೈ ರೈಲಿಗೂ ಕಿಡಿಗೇಡಿಗಳು ಕಲ್ಲು ಎಸೆದಿದ್ದ ಘಟನೆ ಕೆ ಆರ್​ ಪುರಂ ಮತ್ತು ಬೆಂಗಳೂರು ಕಂಟೋನ್​​ಮೆಂಟ್​​ ರೇಲ್ವೆ ನಿಲ್ದಾಣದ ಮಧ್ಯೆ ನಡೆದಿತ್ತು. ಘಟನೆಯಲ್ಲಿ ರೈಲಿನ 2 ಗಾಜಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ನೈಋತ್ಯ ರೈಲ್ವೆ  ಇಲಾಖೆ ತಿಳಿಸಿತ್ತು.

ಇದನ್ನೂ ಓದಿ: ​​​ರೈಲು 180 ಕಿಮೀ ವೇಗದಲ್ಲಿ ಚಲಿಸಿದರೂ ಗ್ಲಾಸಿನಲ್ಲಿದ್ದ ನೀರು ತುಳುಕುವುದಿಲ್ಲ: ಪ್ರಹ್ಲಾದ್​ ಜೋಶಿ

ಕಿಡಿಗೇಡಿಗಳಿಗಾಗಿ ರೇಲ್ವೆ ಪೊಲೀಸರು ಬಲೆ ಬೀಸಿದ್ದರು. ಈ ಬಗ್ಗೆ ರೇಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿತ್ತು. ಈ ಬಗ್ಗೆ ಬೆಂಗಳೂರು ರೇಲ್ವೆ ವಿಭಾಗೀಯ ಕಚೇರಿ ಇಲಾಖೆಗೆ ಸಂಬಂಧದಿಸಿದ ವಸ್ತುಗಳಿಗೆ ಹಾನಿಯುಂಟು ಮಾಡಿದರೆ, ಅಂತವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಇನ್ನು ಜನವರಿ ಮತ್ತು ಫೆಬ್ರವರಿಯಲ್ಲಿ ಒಟ್ಟು 21 ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ವಿಭಾಗದಲ್ಲಿ ಇನ್ನೂ 13 ಪ್ರಕರಣಗಳು ದಾಖಲಾಗಿದ್ದವು ಎಂದು ನೈರುತ್ಯ ರೇಲ್ವೆ ಇಲಾಖೆ ಮಾಹಿತಿ ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Sun, 2 July 23