ದಾವಣಗೆರೆ: ಸೂಳೆಕೆರೆ ಕೋಡಿ ಬಿದ್ದ ಹಿನ್ನೆಲೆ ಕೆಂಗಾಪುರ ಕಣಿವೆ ಬಿಳಚಿ ಮಧ್ಯೆ ಇರುವ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕೆರೆಗೆ ಕೋಡಿ ಬಿದ್ದ ಪರಿಣಾಮ ಹಳ್ಳ ಸಂಪೂರ್ಣ ಮುಳುಗಡೆಯಾಗಿದೆ. ದಾವಣಗೆರೆ, ಚನ್ನಗಿರಿಗೆ ಹೋಗುವುದಕ್ಕೆ ಜನರು ಹರಸಾಹಸ ಪಡುವಂತಾಗಿದೆ. ಇಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ದಶಕಗಳಿಂದ ಜನರ ಒತ್ತಾಯ ಇದೆ. ಆದರೆ ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತವಾಗಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಳೆಗೆರೆ ಕೋಡಿ ಬಿದ್ದ ಹಿನ್ನೆಲೆ ಹಳ್ಳಗಳು ತುಂಬಿ ಹರಿಯುತ್ತಿದೆ. ಚಿರಡೋಣಿ -ದೊಡ್ಡಘಟ್ಟ ಗ್ರಾಮಗಳ ನಡುವೆ ಸಂಪರ್ಕ ಕಡಿತವಾಗಿದೆ. ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯ ಹಿನ್ನೆಲೆ ಐತಿಹಾಸಿಕ ಏಷ್ಯಾದ ಎರಡನೇ ಅತಿ ದೊಡ್ಡದಾದ ಸೂಳೆಕೆರೆ ಭರ್ತಿ ಆಗಿದೆ. ಈ ಹಿನ್ನೆಲೆ ಬ್ಯಾರಿಕೇಡ್ ಹಾಕಿ ಪೊಲೀಸರು ರಸ್ತೆ ಸಂಚಾರ ಸ್ಥಗಿತ ಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ: ರಂಗಧಾಮ ಕೆರೆ ತುಂಬಿ ಕೋಡಿ ಹರಿವು
ಚಿಕ್ಕಬಳ್ಳಾಪುರ ನಗರದ ರಂಗಧಾಮ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕೆರೆ ಕೋಡಿ ನೀರು ಹರಿದು ವಸತಿ ಬಡಾವಣೆ ಹಾಗೂ ರಾಷ್ಟ್ರೀಯ ಹೆದ್ದಾರಿ 234 ಜಲಾವೃತ ಆಗಿದೆ. ಕೆರೆಯ ಕೋಡಿ ನೀರು ನೋಡಲು ಜನ ಮುಗಿಬಿದ್ದಿದ್ದಾರೆ. ಕಳೆದ 30 ವರ್ಷಗಳಿಂದ ಇದೇ ಪ್ರಥಮ ಬಾರಿಗೆ ಕೆರೆ ಕೋಡಿ ಹರಿಯುತ್ತಿದೆ. ಕೆರೆಯ ಕಾಲುವೆ ಒತ್ತುವರಿ ಹಿನ್ನಲೆ ಬಡಾವಣೆಗಳಿಗೆ ನೀರು ನುಗ್ಗಿದೆ. ಡಿವೈನ್ ಸಿಟಿ ಬಡಾವಣೆಗೆ ರಸ್ತೆ ಸಂಪರ್ಕ ಸ್ಥಗಿತವಾಗಿದೆ. ನಗರಕ್ಕೆ ಬರಲು ಬಡಾವಣೆ ನಿವಾಸಿಗಳು ಪರದಾಡಿದ್ದಾರೆ.
ಇದನ್ನೂ ಓದಿ: ಉಡುಪಿ: ಅಕಾಲಿಕ ಮಳೆಗೆ ಕಂಗಾಲಾದ ಭತ್ತ ಬೆಳೆಗಾರರು; ಹೆಚ್ಚುವರಿ ಕೃಷಿಗೆ ಹಾನಿ