ಉಡುಪಿ: ಅಕಾಲಿಕ ಮಳೆಗೆ ಕಂಗಾಲಾದ ಭತ್ತ ಬೆಳೆಗಾರರು; ಹೆಚ್ಚುವರಿ ಕೃಷಿಗೆ ಹಾನಿ
ಯಾವ ವರ್ಷದಲ್ಲಿ ಕೂಡ ನವರಾತ್ರಿಯ ಆಸುಪಾಸಿನ ದಿನಗಳಲ್ಲಿ ಈ ಪ್ರಮಾಣದ ಮಳೆ ಬಿದ್ದ ಉದಾಹರಣೆ ಇಲ್ಲ. ಆದರೆ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಎಲ್ಲೋ ಅಲರ್ಟ್ ಘೋಷಣೆಯಾಗಿದೆ.
ಉಡುಪಿ: ಕರಾವಳಿಯ ರೈತರನ್ನು ಅಕಾಲಿಕ ಮಳೆ ಕಂಗೆಡಿಸಿ ಬಿಟ್ಟಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಕಟಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆಗೆ ಅಪಾರ ಹಾನಿ ಮಾಡಿದೆ. ಯಾವತ್ತಿಗಿಂತಲೂ ಹೆಚ್ಚುವರಿ ಭೂಮಿಯಲ್ಲಿ ಈ ಬಾರಿ ಭತ್ತ ನಾಟಿ ಮಾಡಿದ್ದು , ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದರೂ ಮಳೆ ಮಾತ್ರ ಮುಗಿದಿಲ್ಲ. ಯಾವ ವರ್ಷದಲ್ಲಿ ಕೂಡ ನವರಾತ್ರಿಯ ಆಸುಪಾಸಿನ ದಿನಗಳಲ್ಲಿ ಈ ಪ್ರಮಾಣದ ಮಳೆ ಬಿದ್ದ ಉದಾಹರಣೆ ಇಲ್ಲ. ಆದರೆ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಎಲ್ಲೋ ಅಲರ್ಟ್ ಘೋಷಣೆಯಾಗಿದೆ.
ಈ ಅಕಾಲಿಕ ಮಳೆಯಿಂದ ಭತ್ತ ಬೆಳೆದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜೂನ್ ತಿಂಗಳಲ್ಲಿ ನಾಟಿ ಮಾಡಿದ್ದ ಭತ್ತದ ಪೈರು, ಈಗ ಕಟಾವಿಗೆ ಸಿದ್ಧವಾಗಿದ್ದು, ಮಳೆಯಿಂದಾಗಿ ಗದ್ದೆಗಳಲ್ಲಿ ನೀರು ನಿಂತಿದೆ. ನೀರು ನಿಂತ ಗದ್ದೆಗಳಲ್ಲಿ ಯಂತ್ರವನ್ನು ಬಳಸಿ ಕಟಾವು ಮಾಡುವುದು ಸಾಧ್ಯವೇ ಇಲ್ಲ. ಈಗಾಗಲೇ ನೂರಾರು ಕಟಾವು ಯಂತ್ರಗಳು ಉಡುಪಿ ಜಿಲ್ಲೆಗೆ ಬಂದಿವೆ. ಆದರೆ ಗದ್ದೆಗಳಲ್ಲಿ ನೀರು ಹರಿಯುತ್ತಿದ್ದು ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಭತ್ತದ ಪೈರು ನೀರಿನಲ್ಲಿ ಮುಳುಗಿ ತೆನೆ ಒಡೆಯುವಂತಾಗಿದೆ. ಹಗಲೆಲ್ಲ ಬಿಸಿಲು ಬಂದಾಗ ರೈತರ ಮುಖದಲ್ಲಿ ಹರ್ಷ ಮೂಡಿದರೆ, ರಾತ್ರಿಯಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿಯುತ್ತಿದೆ ಎಂದು ರೈತ ಉಮೇಶ್ ಹೇಳಿದ್ದಾರೆ.
ಉಡುಪಿ ಕ್ಷೇತ್ರದಲ್ಲಿ ಈ ಬಾರಿ ಕೃಷಿ ಕ್ರಾಂತಿಯೇ ನಡೆದಿತ್ತು. ಶಾಸಕ ರಘುಪತಿ ಭಟ್ ಅವರು ಕೇದಾರೋತ್ಥಾನ ಟ್ರಸ್ಟ್ ನ ಮೂಲಕ, 2000 ಎಕರೆಗಳಷ್ಟು ಹೆಚ್ಚುವರಿ ಕೃಷಿ ಭೂಮಿಯಲ್ಲಿ ಭತ್ತ ಬೆಳೆದಿದ್ದರು. ಬಹುತೇಕ ಜೂನ್ನಲ್ಲಿ ನಾಟಿಯಾದ ಈ ಬೆಳೆಗೆ ಶೇಕಡ 40ರಷ್ಟು ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಸುಮಾರು 36 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. ಹೆಚ್ಚುವರಿ ಕೃಷಿ ನಡೆದಿರುವುದರಿಂದ ನಷ್ಟದ ಪ್ರಮಾಣವೂ ಹೆಚ್ಚಾಗಿದೆ. ಮೊದಲು ಬಂಗಾಳಕೊಲ್ಲಿಯಲ್ಲಿ ನಂತರ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಯಿತು. ಈ ಪ್ರಾಕೃತಿಕ ವಿಕೋಪದ ಪರಿಣಾಮ ಕೇರಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರೋಕ್ಷ ಪರಿಣಾಮಗಳು ಕರಾವಳಿ ಜಿಲ್ಲೆ ಉಡುಪಿಯಲ್ಲಿ ಉಂಟಾಗಿದೆ. ಅಕಾಲಿಕ ಮಳೆಯಿಂದ ಕೃಷಿ ನಷ್ಟದ ಹಾದಿಯಲ್ಲಿದೆ.
ಕೊರೊನಾ ನಂತರ ಯುವಕರು ಭತ್ತದ ಕೃಷಿಯತ್ತ ಒಲವು ತೋರಿದ್ದರು. ಇದರಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ನಡೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಯುವಕರ ಉತ್ಸಾಹಕ್ಕೆ ಅಕಾಲಿಕ ಮಳೆ ತಣ್ಣೀರೆರಚಿದೆ ಎಂದು ರೈತ ಮಹಿಳೆ ವಿಶಾಲಾಕ್ಷಿ ಹೇಳಿದ್ದಾರೆ.
ವರದಿ: ಹರೀಶ್ ಪಾಲೆಚ್ಚಾರ್ ಇದನ್ನೂ ಓದಿ:
ಸಾವಯವ ಕೃಷಿಯಲ್ಲಿ ರೈತನ ಅಮೋಘ ಸಾಧನೆ, ಕೃಷಿ & ಉಪಕಸುಬಿನ ಮೂಲಕ ಲಕ್ಷ ಲಕ್ಷ ಗಳಿಕೆ
ಚಿಕ್ಕಬಳ್ಳಾಪುರ: ಭಾರಿ ಮಳೆಗೆ ಬಟ್ಲಹಳ್ಳಿ ಮುಖ್ಯ ರಸ್ತೆ ಬಂದ್; ಕೆರೆ ಕಟ್ಟೆ ಒಡೆದು ಅಪಾರ ಬೆಳೆ ಹಾನಿ