ದಾವಣಗೆರೆ, ಜುಲೈ 27: ಕೋಮು ಸೌಹಾರ್ದತೆ ಬಲಪಡಿಸುವ ಪ್ರಯತ್ನಗಳ ಫಲವಾಗಿ ಹರಿಹರದ ಜನ ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜಿಸಿ ಗಮನ ಸೆಳೆದಿದ್ದಾರೆ. ಅದುವೇ ‘ನಮ್ಮೂರ ಮಸೀದಿ ನೋಡಬನ್ನಿ’ ಎಂಬ ಮಸೀದಿ ದರ್ಶನ ಕಾರ್ಯಕ್ರಮ. ದಾವಣಗೆರೆ ಜಿಲ್ಲೆಯ ಹರಿಹರದ ಪ್ರಶಾಂತ್ ನಗರದಲ್ಲಿರುವ ‘ಆಲಿ’ ಮಸೀದಿಗೆ ಅನ್ಯ ಧರ್ಮೀಯರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ‘ಜಮಾಯತ್ ಏ ಇಸ್ಲಾಮಿಯಾ ಹಿಂದ್’ ಸಂಸ್ಥೆ ವತಿಯಿಂದ ಮಸೀದಿ ದರ್ಶನ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹರಿಹರದ ಸಾಕಷ್ಟು ಹಿಂದೂಗಳು, ಕ್ರೈಸ್ತರು, ಮಹಿಳೆಯರು ಮಸೀದಿಗೆ ಸೌಹಾರ್ದಯುತವಾಗಿ ಭೇಟಿ ನೀಡಿದರು. ಮಸೀದಿಯಲ್ಲಿ ಯಾವ ರೀತಿ ಪ್ರಾರ್ಥನೆ ನಡೆಯುತ್ತದೆ ಎಂಬುದನ್ನು ಕಣ್ತುಂಬಿಕೊಂಡರು. ಅಲ್ಲದೆ ಉರ್ದು ಬದಲಿಗೆ ಕನ್ನಡದಲ್ಲೇ ನಡೆದ ಪ್ರವಚನ ಕೇಳಿದರು.
ಮಸೀದಿ ಎಂದರೆ ಏನು? ಅಲ್ಲಿ ಯಾವ ರೀತಿ ಪ್ರಾರ್ಥನೆ ಮಾಡಲಾಗುತ್ತದೆ? ನಮಾಜ್ ಎಂದರೆ ಏನು, ಮಸೀದಿಯಲ್ಲಿ ದಿನ ನಿತ್ಯ ಹೇಗೆ ಐದು ಹೊತ್ತು ನಮಾಜ್ (ಪ್ರಾರ್ಥನೆ)ಮಾಡುತ್ತಾರೆ ಎಂದು ಅನ್ಯಧರ್ಮಿಯರು ತಿಳಿದುಕೊಳ್ಳಲು ಮಸೀದಿ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ವಿನೂತನ ಕಾರ್ಯಕ್ರಮದಡಿ ಹರಿಹರದ ಪ್ರಶಾಂತ್ ನಗರದಲ್ಲಿರುವ ‘ಆಲಿ’ ಮಸೀದಿಗೆ 300ಕ್ಕೂ ಹೆಚ್ಚು ಜನ ಭೇಟಿ ನೀಡಿದರು.
ಇತರ ಧರ್ಮೀಯರ ಮಸೀದಿ ಭೇಟಿ ಅಂಗವಾಗಿ ಶುಕ್ರವಾರ ಉರ್ದು ಬದಲಿಗೆ ಕನ್ನಡದಲ್ಲೇ ವಿಶೇಷ ಪ್ರವಚನವನ್ನು ಆಯೋಜನೆ ಮಾಡಲಾಗಿತ್ತು. ಕನ್ನಡದ ಕಂಪು ಮಸೀದಿಯಲ್ಲಿ ಝೇಂಕರಿಸುತ್ತಿತ್ತು.
ಪ್ರೀತಿ ಹಂಚುವ, ಸುಖ ಕಷ್ಟಗಳಿಗೆ ಧ್ವನಿ ಆಗುವಂತಹ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ಈ ಮಸೀದಿ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದು ಕಾರ್ಯಕ್ರಮದ ಆಯೋಜಕರಾದ ಅಕ್ಬರ್ ಅಲಿ ತಿಳಿಸಿದ್ದಾರೆ.
ಹರಿಹರದ ಅನೇಕ ಹಿಂದುಗಳು ಮಸೀದಿಯ ದರ್ಶನ ಮಾಡಿದರು. ಹಿಂದುಗಳು ಮೊದಲಿಗೆ ಕೈಕಾಲು ತೊಳೆದುಕೊಂಡು ಮಸೀದಿಯ ಒಳಗೆ ಪ್ರವೇಶ ಮಾಡಿದ್ದು ವಿಶೇಷವಾಗಿತ್ತು. ಬಳಿಕ ನಾಲ್ಕು ಗೋಡೆ ಮಧ್ಯೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಕೆ ಮಾಡುವುದನ್ನು ಕಣ್ತುಂಬಿಕೊಂಡರು. ಕನ್ನಡದಲ್ಲೇ ಕೇಳಿಬರುತ್ತಿದ್ದ ಪ್ರವಚನ ಕೇಳಿ ಇಸ್ಲಾಂನ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡರು. ಮುಸ್ಲಿಮರು ಮಸೀದಿ ಪ್ರವೇಶಕ್ಕು ಮುನ್ನ ಕೈಕಾಲು ಯಾವ ರೀತಿ ತೊಳೆದುಕೊಳ್ಳುತ್ತಾರೆ (ವಝು) ಎಂದು ಮಸೀದಿಯವರು ತಿಳಿಸಿಕೊಟ್ಟರು.
ಹಿಂದೂ ಮಹಿಳೆಯರಿಗೂ ಮಸೀದಿಗೆ ಪ್ರವೇಶ ಅವಕಾಶ ನೀಡಲಾಗಿತ್ತು. ಮೊದಲ ಬಾರಿಗೆ ಮಸೀದಿಯ ಪ್ರಾಣಂಗಣಕ್ಕೆ ಆಗಮಿಸಿದ್ದ ಹಿಂದು ಮಹಿಳೆಯರ ಸಂತಸಕ್ಕೆ ಪಾರವೇ ಇರಲಿಲ್ಲ.
ಇದನ್ನೂ ಓದಿ: ಮನೆಗೆ ನುಗ್ಗಿದ ಮಳೆ ನೀರು; ವಿಷಯ ಕೇಳಿ ಹೃದಯಾಘಾತದಿಂದ ಮನೆ ಯಜಮಾನ ಸಾವು
ನಾವೆಲ್ಲರು ಮಾನವರು, ದೇಶದಲ್ಲಿ ದ್ವೇಷ ಹಂಚುವ ಬದಲು ಈ ರೀತಿಯ ಪ್ರೀತಿ ಹಂಚಬೇಕೆಂದು ಮಸೀದಿಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟಿದ್ದೇನೆ. ನಾವು ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇಲ್ಲಿ ನಾಲ್ಕು ಗೋಡೆ ಮಧ್ಯೆ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ವೀರಶೈವ ಸಮಾಜ ಮುಖಂಡ ಮುರಗೇಶಪ್ಪ ಅಭಿಪ್ರಾಯಪಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Sat, 27 July 24