ಮನೆಗೆ ನುಗ್ಗಿದ ಮಳೆ ನೀರು; ವಿಷಯ ಕೇಳಿ ಹೃದಯಾಘಾತದಿಂದ ಮನೆ ಯಜಮಾನ ಸಾವು
ರಾಜ್ಯಾದ್ಯಂತ ವರುಣಾರ್ಭಟ ಮುಂದುವರೆದಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯ ಅಮನ್ ನಗರದಲ್ಲಿ ಮಳೆ ನೀರು ಮನೆಗೆ ನುಗ್ಗಿ ವೃದ್ದೆಯೊಬ್ಬರು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮೊನ್ನೆಯಷ್ಟೇ ನಡೆದಿತ್ತು. ಇದು ಮಾಸುವ ಮುನ್ನವೇ ಗೋಕಾಕ್ ನಗರದ ಉಪ್ಪಾರ ಗಲ್ಲಿಯಲ್ಲಿ ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ಹೃದಯಾಘಾತದಿಂದ ಮನೆ ಯಜಮಾನ ಸಾವನ್ನಪ್ಪಿದ್ದಾರೆ.
ಬೆಳಗಾವಿ, ಜು.27: ರಾಜ್ಯಾದ್ಯಂತ ಆಗುತ್ತಿರುವ ಮಳೆ(Rain)ಗೆ ಅವಾಂತರಗಳು ಸೃಷ್ಟಿ ಆಗುತ್ತಿದ್ದು, ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಬೆಳಗಾವಿ(Belagavi) ಜಿಲ್ಲೆಯ ಗೋಕಾಕ್ ನಗರದ ಉಪ್ಪಾರ ಗಲ್ಲಿಯಲ್ಲಿ ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ಹೃದಯಾಘಾತದಿಂದ ಮನೆ ಯಜಮಾನ ಸಾವನ್ನಪ್ಪಿರುವ ಘಟನೆ ನಿನ್ನೆ(ಜು.26) ಸಂಜೆ ನಡೆದಿದೆ. ದಶರಥ ಬಂಡಿ(80) ಮೃತಪಟ್ಟ ಮನೆ ಯಜಮಾನ.
ಅಂತ್ಯಸಂಸ್ಕಾರ ಮಾಡಿ ಮನೆಗೆ ಹೋಗುವಷ್ಟರಲ್ಲಿ ಮುಳುಗಿದ ಮನೆ
ಇನ್ನು ಮನೆಗೆ ನೀರು ಬರುವ ವಿಚಾರ ತಿಳಿದು ಕೊನೆಯುಸಿರೆಳೆದ ದಶರಥ ಅವರನ್ನು ನಿನ್ನೆ ರಾತ್ರಿ ಅಂತ್ಯಸಂಸ್ಕಾರ ಮಾಡಿ ಮನೆಗೆ ಹೋಗುವಷ್ಟರಲ್ಲಿ ಮನೆ ಸಂಪೂರ್ಣ ಮುಳುಗಿದೆ. ರಾತ್ರೋರಾತ್ರಿ ಉಟ್ಟ ಬಟ್ಟೆಯಲ್ಲೇ ಹೊರ ಬಂದಿದ್ದೇವೆ ಎಂದು ಮೃತ ಕುಟುಂಬ ಅಳಲು ತೋಡಿಕೊಳ್ಳುತ್ತಿದೆ. ಕೂಡಲೇ ಮಕ್ಕಳು, ನಾಯಿ ಮರಿಗಳ ಜೊತೆಗೆ ಕಾಳಜಿ ಕೇಂದ್ರಕ್ಕೆ ಶಿಪ್ಟ್ ಮಾಡಲಾಗಿದೆ. ಮನೆಯ ಯಜಮಾನ ಕಳೆದುಕೊಂಡ ಕುಟುಂಬದ ಸ್ಥಿತಿ ಅಯೋಮಯವಾಗಿದೆ. ಮೃತಪಟ್ಟ ಬಳಿಕ ಕಾರ್ಯಗಳನ್ನೂ ಮಾಡಲಾಗದೇ ಕುಟುಂಬ ಪರದಾಟ ನಡೆಸಿದೆ. ಇನ್ನು ಈ ಮೂಲಕ ಹದಿನೇಳು ಜನರು ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ನದಿಗಳ ಅಬ್ಬರ: ನೀರಲ್ಲಿ ನಿಂತ ಮನೆ, ಬೆಳೆ, ಸೇತುವೆ ಮುಳುಗಡೆ; ಇಲ್ಲಿದೆ ಫೋಟೋಸ್
ಮನೆಗೆ ಮಳೆ ನೀರು ನುಗ್ಗಿ ಜಾರಿ ಬಿದ್ದ ವೃದ್ಧೆ, ಸ್ಥಳದಲ್ಲೇ ಸಾವು
ಇನ್ನು ಜು.25 ರಂದು ಬೆಳಗಾವಿಯ ಅಮನ್ ನಗರದಲ್ಲಿದಲ್ಲಿ ಮಳೆ ನೀರು ಮನೆಗೆ ನುಗ್ಗಿ ವೃದ್ದೆಯೊಬ್ಬರು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು. ಮಹಬೂಬಿ ಅದಂಸಾಹೇಬ್ ಮಕಾಂದಾರ್(79) ಮೃತ ದುರ್ದೈವಿ. ನಿರಂತರ ಮಳೆಯಿಂದ ಕಾಲೋನಿಗೆ ಡ್ರೈನೇಜ್ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಮೃತ ಮಹಬೂಬಿ ಅವರ ಶವ ಸಾಗಿಸಲು ಕಾಲೋನಿಯ ಜನರು ಪರದಾಡಿದ್ದರು. ಬಳಿಕ ಮೊಳಕಾಲುದ್ದ ನೀರಲ್ಲಿಯೇ ಶವ ಸಾಗಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಇದೀಗ ಮಳೆ ಅವಾಂತರ ಮತ್ತೊಂದು ಬಲಿ ಪಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ