ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂದಗಂಗಾ, ವೇದಗಂಗಾ, ಘಟಪ್ರಭಾ ನದಿ ಅಬ್ಬರ ಜೋರಾಗಿದ್ದು, ನದಿ ಪಾತ್ರದ ಜನರು ತತ್ತರಿಸಿ ಹೋಗಿದ್ದಾರೆ. ಘಟಪ್ರಭಾ ನದಿ ಪ್ರವಾಹದಿಂದ ಗೋಕಾಕ್ ನಗರದ ಬಳಿಯಿರುವ ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆ ಮುಳುಗಡೆಯಾಗಿದೆ. ಇದರಿಂದ ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಲೋಳಸೂರ ಸೇತುವೆ ಮೇಲೆ ನದಿ ನೀರು ರಭಸವಾಗಿ ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.
ಪ್ರವಾಹದಿಂದ ಶುಕ್ರವಾರ ಒಂದೇ ದಿನ ಬೆಳಗಾವಿ ಜಿಲ್ಲೆಯ 6 ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಈವರೆಗೆ ಒಟ್ಟು 36 ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ನದಿ ಪಾತ್ರದ ಸುಮಾರು 232 ಗ್ರಾಮಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 25 ಮಿ.ಮೀ ದಾಖಲೆಯ ಮಳೆಯಾಗಿದೆ. 427 ಕಡೆ ಕಾಳಜಿ ಕೇಂದ್ರ ಗುರುತಿಸಲಾಗಿದೆ. ಜಿಲ್ಲಾಡಳಿತ ಈಗಾಗಲೆ ಐದು ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆದಿದೆ. ಕಾಳಜಿ ಕೇಂದ್ರಗಳಲ್ಲಿ 200ಕ್ಕೂ ಹೆಚ್ಚು ಜನರಿಗೆ ಆಶ್ರಯ ವ್ಯವಸ್ಥೆ ಮಾಡಲಾಗಿದೆ.
ಪ್ರವಾಹ ಪರಿಸ್ಥಿತಿ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಸಿದ್ಧವಿದೆ. ಈಗಾಗಲೇ 427 ಕಡೆ ಕಾಳಜಿ ಕೇಂದ್ರ ತೆರೆಯಲು ಸ್ಥಳ ಗುರುತು ಮಾಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಆಗಿರುವ ಲೋಪದೋಷ ಸರಿಪಡಿಸುತ್ತೇವೆ. ಸಂತ್ರಸ್ತರಿಗೆ ಉತ್ತಮ ಆಹಾರ ನೀಡಲು ಕ್ರಮಕೈಗೊಳ್ಳಲಾಗುವುದು. ಇಂದಿನಿಂದ ಕಾಳಜಿ ಕೇಂದ್ರಗಳಲ್ಲಿ ಬ್ಲ್ಯಾಂಕೆಟ್ ನೀಡಲಾಗುವುದು. ಸಂತ್ರಸ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಕಾಳಜಿವಹಿಸಲಾಗುತ್ತೆ. ಮಹಾರಾಷ್ಟ್ರದ ಎರಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇದೆ. ನಾರಾಯಣಪುರ ಜಲಾಶಯದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಹೇಳಿದರು.
ಜಿಲ್ಲೆಯಲ್ಲಿ ಈವರೆಗು 36 ಸೇತುವೆ ಜಲಾವೃತವಾಗಿವೆ. ಮುಳುಗಡೆಯಾದ ಸೇತುವೆ ಎರಡು ಬದಿಯಲ್ಲಿ ಬ್ಯಾರಿಕೆಡ್ ಹಾಕಿ ಬಂದ್ ಮಾಡಿದ್ದೇವೆ. ಮಳೆ, ಗಾಳಿ ಎನ್ನದೆ ನಿರಂತರವಾಗಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಒಂದು ರಸ್ತೆ ಮಾತ್ರ ಶುರುವಿದೆ. ಅದಕ್ಕೂ ವೇದಗಂಗಾ ನದಿ ನೀರು ನುಗ್ಗುವ ಭೀತಿ ಇದೆ. ಪೊಲೀಸರು ನೀಡುವ ಸಲಹೆ ಸೂಚನೆಯನ್ನು ಸಾರ್ವಜನಿಕರು ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮನವಿ ಮಾಡಿದರು.
ಗೋಕಾಕ್ನ ನಗರದ ಮಟನ್ ಮಾರ್ಕೆಟ್, ಹಳೆ ದನದ ಪೇಟೆ, ಕುಂಬಾರ ಗಲ್ಲಿಗೆ ನೀರು ನುಗ್ಗಿದೆ. ಅಂಗಡಿಗಳ ಮಾಲೀಕರು ಕ್ರೂಸರ್, ಆಟೋದಲ್ಲಿ ಸಾಮಗ್ರಿಗಳನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ. ಘಟಪ್ರಭಾ ಒಳಹರಿವಿನ ಪ್ರಮಾಣ ಸದ್ಯ 80 ಸಾವಿರ ಕ್ಯೂಸೆಕ್ ತಲುಪಿದೆ.
ಕೃಷ್ಣಾ ನದಿ ತಟದಲ್ಲಿ ಪ್ರವಾಹದ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದೋಣಿಯಲ್ಲಿ ಜನರನ್ನು ಸ್ಥಳಾಂತರವಾಗುತ್ತಿದ್ದಾರೆ. ಕಾಗವಾಡ ತಾಲೂಕಿನ ಕಮತಾ ತೋಟದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಕೈ ದೋಣಿ ಮೊರೆ ಹೋಗಿದ್ದಾರೆ. ದೋಣಿಯಲ್ಲಿ ಬೈಕ್ ಹಾಗೂ ಎಮ್ಮೆಗಳನ್ನು ಹಾಕಿಕೊಂಡು ಜನ ತೆರಳುತ್ತಿದ್ದಾರೆ. ಚೂರು ಆಯ ತಪ್ಪಿದರೂ ಜನರು ಕೃಷ್ಣಾ ನದಿ ಪಾಲಾಗುವ ಸಾಧ್ಯತೆ ಇದೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಶಂಕರಲಿಂಗ ದೇವಸ್ಥಾನದ ಒಳಗೆ ಹಿರಣ್ಯಕೇಶಿ ನದಿ ನೀರು ನುಗ್ಗಿದೆ. ದೇವಸ್ಥಾನದ ಅರ್ಚಕರು ನದಿಯ ನೀರಿನಲ್ಲಿಯೇ ಪೂಜೆ ನೇರವೇರಿಸಿದರು. ಅಲ್ಲದೆ ದೇವಸ್ಥಾನದ ಸುತ್ತಮುತ್ತಲಿನ 40ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
Published On - 10:43 am, Sat, 27 July 24