ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ರಣಮಳೆಯಾಗುತ್ತಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳಿಗೆ ಅಪರಾ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸಪ್ತ ನದಿಗಳ ಅಬ್ಬರಕ್ಕೆ ಜನರು ಕಂಗಾಲಾಗಿದ್ದಾರೆ. ಇದೀಗ ಕೋಯ್ನಾ ಜಲಾಶಯದಿಂದ ಕೃಷ್ಣ ನದಿಗೆ ನೀರು ಬಡಿತ್ತಿರುವುದರಿಂದ ಗೋಕಾಕ್, ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿದೆ.
ನದಿಗಳು ಅಪಯಾದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ 30 ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಗೋಕಾಕ್ನಲ್ಲಿ ಐದು ಸೇತುವೆಗಳು, ಮೂಡಲಗಿ ತಾಲೂಕಿನಲ್ಲಿ ಐದು ಸೇತುವೆ ಜಲಾವೃತಗೊಂಡಿವೆ. ಹುಕ್ಕೇರಿ ತಾಲೂಕಿನ ಐದು, ಚಿಕ್ಕೋಡಿ ತಾಲೂಕಿನ ನಾಲ್ಕು, ನಿಪ್ಪಾಣಿ ತಾಲೂಕಿನ ನಾಲ್ಕು, ರಾಯಬಾಗ ತಾಲೂಕಿನ ಮೂರು, ಖಾನಾಪುರ ಎರಡು, ಕಾಗವಾಡ ಒಂದು, ಅಥಣಿ ಒಂದು ಸೇತುವೆ ಜಲಾವೃತಗೊಂಡಿವೆ. ಇದರಿಂದ ಜಿಲ್ಲೆಯ 60 ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 87 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಬೆಳಗಾವಿ ವ್ಯಾಪ್ತಿಯಲ್ಲಿ 35 ಗ್ರಾಮಗಳಿಗೆ ಪ್ರವಾಹದ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 122 ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಎದುರಾಗಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 45 ಬೋಟ್ಗಳು ಸಿದ್ಧತೆಯಲ್ಲಿವೆ. ಈಗಾಗಲೇ ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡ ಬೀಡು ಬಿಟ್ಟಿದೆ.
ದೂದಗಂಗಾ ನದಿಯ ಅಬ್ಬರಕ್ಕೆ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಗ್ರಾಮದ ಕುರುಬರ ಗಲ್ಲಿಗೆ ನದಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜಾನುವಾರು, ಅಗತ್ಯ ಸಾಮಾಗ್ರಿಗಳ ಸಮೇತ ಜನ ಊರು ಖಾಲಿ ಮಾಡುತ್ತಿದ್ದಾರೆ.
ದೂದಗಂಗಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿರುವ ಬಂಗಾಲಿ ಬಾಬಾ ದರ್ಗಾ ಸಂಪೂರ್ಣ ಜಲಾವೃತಗೊಂಡಿದೆ. ದರ್ಗಾದಲ್ಲಿ ನಾಲ್ಕು ಅಡಿಗಳಷ್ಟು ನೀರು ಬಂದಿದೆ. ಗ್ರಾಮಸ್ಥರು ಊರು ತೊರೆಯುವಂತೆ ಸೂಚನೆ ನೀಡಲಾಗಿದೆ.
ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಗೋಕಾಕ್ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕೋಳಿ ಸೇತುವೆ ಬಿರುಕುಗೊಂಡಿದೆ.
ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಗೋಕಾಕ್ ನಗರದ ದನದ ಪೇಟೆಗೆ ನದಿ ನೀರು ನುಗ್ಗಿದೆ. ಕೆಲ ಶೆಡ್ಗಳು ಮನೆಯೊಳಗೆ ನುಗ್ಗಿದೆ. ದನದ ಪೇಟೆಯ ಪಟಗುಂದಿ ಹನುಮ ದೇವಸ್ಥಾನದ ಸುತ್ತ ನೀರು ನಿಂತಿದೆ.
ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ದೂದ್ಸಾಗರ್ ಮತ್ತು ಸೋನಾಲಿಯಂ ರೈಲು ನಿಲ್ದಾಣಗಳ ಮಧ್ಯೆ ರೈಲು ಹಳಿಗಳ ಮೇಲೆ ತಡರಾತ್ರಿ ಗುಡ್ಡ ಕುಸಿದಿದೆ. ಹಳಿಯ ಮೇಲೆ ಅಪಾರ ಪ್ರಮಾಣದ ಕಲ್ಲು ಹಾಗೂ ಮಣ್ಣು ಉರುಳಿ ಬಿದ್ದಿವೆ. ಹಳಿ ಮೇಲೆ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಲೋಂಡಾ ಮಾರ್ಗವಾಗಿ ಬೆಳಗಾವಿಗೆ ಬರುವ ರೈಲುಗಳು ತಡವಾಗಿ ಚಲಿಸುತ್ತಿವೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ರೈಲ್ವೆ ಇಲಾಖೆ ಬಸ್ ವ್ಯವಸ್ಥೆ ಮಾಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ ಪ್ರವಾಹ ಸಹಾಯವಾಣಿ ಆರಂಭಿಸಿದೆ. ಪ್ರವಾಹ ಸಹಾಯವಾಣಿ ಸಂಖ್ಯೆ 0831-2407290, ಪೊಲೀಸ್ ಸಹಾಯವಾಣಿ ಸಂಖ್ಯೆ 08321-2474054, ತುರ್ತು ನೆರವಿಗಾಗಿ 112 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
Published On - 8:40 am, Fri, 26 July 24