ನಾವು ನಮ್ಮ ಮಕ್ಕಳಿಗೆ ಏನು ಮಾಡಬೇಕು ಎಂದು ಹೇಳುತ್ತಿಲ್ಲ; ಏನು ಮಾಡಬಾರದು ಅಂತಾನೂ ಹೇಳುತ್ತಿಲ್ಲ-ಸಿಎಂ ಬೊಮ್ಮಾಯಿ ವಿಷಾದ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 23, 2022 | 5:51 PM

ಕಾರ್ಯಕ್ರಮದಲ್ಲಿ ಮಾತನಾಡಿದ ಪೀಠಾಧೀಶರಾದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ. ಕೆಲವರು ನನ್ನನ್ನು ಲಿಂಗಾಯತರನ್ನ ವಿಭಜಿಸಿದರು ಅಂತಾ ಹೇಳ್ತಾರೆ. ನಾನು ಲಿಂಗಾಯತ ಸಮಾಜವನ್ನು ಒಡೆದಿಲ್ಲ, ಜಾಗೃತಿಗೊಳಿಸಿದ್ದೇನೆ.

ನಾವು ನಮ್ಮ ಮಕ್ಕಳಿಗೆ ಏನು ಮಾಡಬೇಕು ಎಂದು ಹೇಳುತ್ತಿಲ್ಲ; ಏನು ಮಾಡಬಾರದು ಅಂತಾನೂ ಹೇಳುತ್ತಿಲ್ಲ-ಸಿಎಂ ಬೊಮ್ಮಾಯಿ ವಿಷಾದ
ಸಿಎಂ ಬಸವರಾಜ ಬೊಮ್ಮಾಯಿ
Follow us on

ದಾವಣಗೆರೆ: ನಾವು ನಮ್ಮ ಮಕ್ಕಳಿಗೆ (Childrens) ಏನು ಮಾಡಬೇಕು ಎಂದು ಹೇಳುತ್ತಿಲ್ಲ. ಏನು ಮಾಡಬಾರದು ಅಂತಾನೂ ಹೇಳುತ್ತಿಲ್ಲ. ಒಳ್ಳೆಯತನ ಗುರುತಿಸದಿದ್ದಾಗ ಕೆಟ್ಟದ್ದು ಒಳ್ಳೇದು ಒಂದೇ ಆಗುತ್ತೆ. ಒಳ್ಳೆಯತನ ಗುರುತಿಸುವ ಕೆಲಸ ಆಗಬೇಕೆಂದು ಜಿಲ್ಲೆ ಹರಿಹರ ತಾಲೂಕಿನ ವೀರಶೈಲ ಲಿಂಗಾಯತ ಪಂಚಮಸಾಲಿ ಗುರುಪೀಠ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಇಂದು ಎಲ್ಲೆಡೆ ಜಾಗತೀಕರಣ, ಉದಾರೀಕರಣ ಪ್ರಭಾವ ಹೆಚ್ಚಿದೆ. ಇದರಿಂದ ಮನುಷ್ಯನ ನಡುವಿನ ಸಂಬಂಧಗಳು ದೂರವಾಗುತ್ತಿವೆ. ಇದೀಗ ಅಂತಃಕರಣ ಬೆಸೆಯುವ ಕಾರ್ಯ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪೀಠಾಧೀಶರಾದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ. ಕೆಲವರು ನನ್ನನ್ನು ಲಿಂಗಾಯತರನ್ನ ವಿಭಜಿಸಿದರು ಅಂತಾ ಹೇಳ್ತಾರೆ. ನಾನು ಲಿಂಗಾಯತ ಸಮಾಜವನ್ನು ಒಡೆದಿಲ್ಲ, ಜಾಗೃತಿಗೊಳಿಸಿದ್ದೇನೆ. ಲಿಂಗಾಯತರಲ್ಲೇ ಬೇರೆ ಬೇರೆ ಮೀಸಲಾತಿಗಳನ್ನು ಪಡೆಯುತ್ತಾರೆ. ಹೀಗಾದ್ರೆ ಲಿಂಗಾಯತರು ಹೇಗೆ ಒಂದಾಗಲು ಸಾಧ್ಯ. ಲಿಂಗಾಯತರು ಒಂದಾಗಬೇಕಿದ್ರೆ ಸಮಪಾಲು ಸಮಬಾಳು ಆಗಬೇಕು. ಪಂಚಮಸಾಲಿ ಸಮಾಜ ಅಂದರೆ ಮಹಾರಾಷ್ಟ್ರದಲ್ಲಿ ಮರಾಠರಿದ್ದಂತೆ. ಗುಜರಾತ್​ನಲ್ಲಿ ಗುಜರಾತಿಗಳು, ರಾಜಸ್ಥಾನದಲ್ಲಿ ಗುಜ್ಜರ್ ಇದ್ದಂತೆ. ಕರ್ನಾಟಕದಲ್ಲಿ ಹೆಚ್ಚು ಪಂಚಮಸಾಲಿ ಸಮುದಾಯದವರಿದ್ದಾರೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದೇನೆ ಎಂದು ಹೇಳಿದರು. ನಾನು ಅತಿ ಹೆಚ್ಚು ಇಷ್ಟ ಪಡುವ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಮೊದಲಿಗರು ಸಿದ್ದರಾಮಯ್ಯ. ಈಗ ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ಆದರೆ ನಾನು ಯಾರಿಗೂ ಗೊತ್ತೇ ಇರದ ಕಾಲದಲ್ಲಿ ಸಿದ್ದರಾಮಯ್ಯ ನನ್ನನ್ನು ಗುರುತಿಸಿದ್ದರು. ಕರ್ನಾಟಕವನ್ನು ಯೋಗ ಯುಕ್ತ, ರೋಗ ಮುಕ್ತ ರಾಜ್ಯ ಮಾಡಲು ಹೇಳಿದ್ದರು ಎಂದು ನೆನಪಿಸಿಕೊಂಡರು.

ಉನ್ನತ ಶಿಕ್ಷಣ ಸಚಿವ ಡಾ‌.ಅಶ್ವತ್ಥ್​ ನಾರಾಯಣ ಮಾತನಾಡಿದ್ದು, ರಾಜ್ಯದ ಪ್ರತಿ ಜಿಲ್ಲೆಗೊಂದು ವಿವಿ ಸ್ಥಾಪನೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಾಗಲೇ 5 ವಿವಿಗಳನ್ನು ಹೊಸದಾಗಿ ಸ್ಥಾಪನೆ ಮಾಡಲಾಗಿದೆ‌. ಇನ್ನೂ ಮೂರು ತಿಂಗಳಲ್ಲಿ 7 ಹೊಸ ವಿವಿ ಆರಂಭಿಸುತ್ತೇವೆ. ರಾಜ್ಯದಲ್ಲಿ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿವೆ‌. ಐಐಟಿ ಮಾದರಿಯಲ್ಲಿ 7 ಕಾಲೇಜು ಮೇಲ್ದರ್ಜೆಗೆ ಏರಿಸುತ್ತೇವೆ ಎಂದರು.

ಅವಧಿಗೆ ಮೊದಲು ಚುನಾವಣೆಯಿಲ್ಲ: ಸಿದ್ದರಾಮಯ್ಯ

ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿ 150 ಸ್ಥಾನ ಗೆಲ್ಲಬೇಕೆಂದು ರಾಹುಲ್ ಗಾಂಧಿ ಟಾರ್ಗೆಟ್​ ನೀಡಿದ್ದಾರೆ. ಚುನಾವಣೆಗೆ 6 ತಿಂಗಳು ಮೊದಲೇ ಟಿಕೆಟ್ ಘೋಷಣೆಗೆ ಚಿಂತನೆ ನಡೆದಿದೆ. ಸಿಎಂ ಅಭ್ಯರ್ಥಿ ಬಗ್ಗೆ ಹೈಕಮಾಂಡ್, ಶಾಸಕರು ನಿರ್ಧರಿಸುತ್ತಾರೆ ಎಂದರು. ಪ್ರಚೋದನಕಾರಿ ವಾಟ್ಸಾಪ್​​​ ಸ್ಟೇಟಸ್​​ನಿಂದ ಹುಬ್ಬಳ್ಳಿಯಲ್ಲಿ ಗಲಾಟೆ ನಡೆದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಹುಬ್ಬಳ್ಳಿ ಗಲಭೆಗೆ ಬಿಜೆಪಿಯವರೇ ಕಾರಣ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡೋದು ಸರ್ಕಾರದ ಹೊಣೆ. ಕರ್ನಾಟಕದಲ್ಲೂ ಬುಲ್ಡೋಜರ್​ ಮಾದರಿ ಜಾರಿಗೆ ತರುವ ವಿಚಾರ ಕುರಿತು ಪ್ರಸ್ತಾಪಿಸಿದ ಅವರು, ಶ್ರೀರಾಮಸೇನೆಗೆ ಬುಲ್ಡೋಜರ್​ ಹರಿಸಬೇಕು ಎಂದು ಹರಿಹಾಯ್ದರು.

ಹರಿಹರ ತಾಲ್ಲೂಕಿನ ಹಗನವಾಡಿ ಬಳಿಯ ವೀರಶೈಲ ಲಿಂಗಾಯತ ಪಂಚಮಸಾಲಿ‌ ಗುರುಪೀಠದಲ್ಲಿ ಎರಡು ದಿನಗಳ ಕಾಲ ನಡೆಯುವ ಹರ ಜಾತ್ರೆಗೆ ಶನಿವಾರ ಸಂಭ್ರಮದ ಚಾಲನೆ ಸಿಕ್ಕಿತು. ಮೊದಲ ದಿನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವವಾಗಿ ಆಚರಿಸಲಾಗುವುದು ಘೋಷಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಮುರುಗೇಶ್ ನಿರಾಣಿ, ಡಾ.ಅಶ್ವತ್ಥ್ ನಾರಾಯಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ‌ ಸಮಾರಂಬದ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ:

Yes Bank Scam: ರಾಣಾ ಕಪೂರ್, ಡಿಎಚ್​ಎಫ್​ಎಲ್ ಪ್ರವರ್ತಕರ ವಿರುದ್ಧ 5050 ಕೋಟಿ ವಂಚನೆಯ ಆರೋಪ ಪಟ್ಟಿ