ದಾವಣಗೆರೆ: ವಿಧಾನ ಪರಿಷತ್ನಲ್ಲಿಯೂ ಬಿಜೆಪಿ ಬಹುಮತ ಪಡೆಯಬೇಕು. ಯಾರ ಮೇಲೆಯೂ ಅವಲಂಬಿತರಾಗಿಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಾನು ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ಪುತ್ರ ಬಿ.ವೈ.ವಿಜಯೇಂದ್ರಗೆ ಸಚಿವ ಸ್ಥಾನ ಕೇಳುವ ಪ್ರಶ್ನೆಯೇ ಇಲ್ಲ. ಎಲ್ಲವೂ ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರ. ಸಂಪುಟ ವಿಸ್ತರಣೆ ಬಗ್ಗೆ ನಾನು ಯಾವುದೇ ಸಲಹೆ ಕೊಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ 15 ಕ್ಷೇತ್ರಗಳನ್ನು ಗೆದ್ದೇಗೆಲ್ಲುತ್ತೇವೆ. ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಬೇಕು ಎಂಬುದು ನಮ್ಮ ಉದ್ದೇಶ. ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಮುಂದೆ ಏನಾಗುತ್ತೋ ನೋಡೋಣ ಎಂದರು. ನೀವು ಸ್ಪರ್ಧಿಸದ ಕಡೆ ನಮಗೆ ಬೆಂಬಲ ಕೊಡಿ ಎಂದು ಜೆಡಿಎಸ್ ನಾಯಕರನ್ನು ಕೋರಿದ್ದೇವೆ. ಇಂದು ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ. ಏನು ನಿರ್ಧಾರ ಮಾಡುತ್ತಾರೋ ನೋಡಬೇಕು ಎಂದರು.
ಮಾಜಿ ಸಚಿವ ಚಿಮ್ಮನಕಟ್ಟಿ ಕಣ್ಣೀರು ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲಾ ಮಾಧ್ಯಮಗಳಲ್ಲಿ ಘಟನೆ ಕುರಿತು ಮಾಹಿತಿ ಪ್ರಸಾರವಾಗುತ್ತಿದೆ. ನಾನು ಈ ಬಗ್ಗೆ ಏನೂ ಹೇಳುವುದಿಲ್ಲ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಯಾವುದೇ ಮಾತು ಆಡಲಿಲ್ಲ.
ಭರವಸೆ ಇರಿಸಿಕೊಳ್ಳಬೇಕಷ್ಟೇ: ರಾಘವೇಂದ್ರ
ತಮ್ಮ ಸೋದರ ಬಿ.ವೈ.ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ, ಸರ್ಕಾರದ ಮಟ್ಟದಲ್ಲಿ ಏನು ಚರ್ಚೆಯಾಗಿದೆಯೋ ಗೊತ್ತಿಲ್ಲ. ಆದರೆ ರಾಜಕಾರಣದಲ್ಲಿ ನಾವು ಭರವಸೆ ಇರಿಸಿಕೊಳ್ಳಲೇಬೇಕಾಗುತ್ತದೆ. ಸಚಿವ ಸ್ಥಾನ ಸಿಗದಿದ್ದರೆ ವಿಜಯೇಂದ್ರ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರೆ ಎಂದರು.
ಕರ್ನಾಟಕದ ಎಲ್ಲ ಬಿಜೆಪಿ ನಾಯಕರು ಮತ್ತು ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಶೇ 45ಕ್ಕಿಂತಲೂ ಹೆಚ್ಚು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಇದ್ದಾರೆ. ಚುನಾವಣೆ ನಡೆಯುತ್ತಿರುವ 20 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಹಣದ ದರ್ಬಾರ್; ಒಂದು ವೋಟಿಗೆ 1 ಲಕ್ಷ ರೂ.ವರೆಗೂ ಹಂಚಿಕೆ!
ಇದನ್ನೂ ಓದಿ: ಧಾರವಾಡ ವಿಧಾನ ಪರಿಷತ್ ಚುನಾವಣೆ; ಸಿಎಂ ಬೊಮ್ಮಾಯಿಗೆ ರಾಜಕೀಯ ನೆಲೆ ಕಲ್ಪಿಸಿದ ಕ್ಷೇತ್ರ ಈ ಬಾರಿ ಯಾರ ಕೈ ಹಿಡಿಯುತ್ತೆ?