ಧಾರವಾಡ ವಿಧಾನ ಪರಿಷತ್ ಚುನಾವಣೆ; ಸಿಎಂ ಬೊಮ್ಮಾಯಿಗೆ ರಾಜಕೀಯ ನೆಲೆ ಕಲ್ಪಿಸಿದ ಕ್ಷೇತ್ರ ಈ ಬಾರಿ ಯಾರ ಕೈ ಹಿಡಿಯುತ್ತೆ?

ಎರಡೂ ರಾಷ್ಟ್ರೀಯ ಪಕ್ಷಗಳ ತಲಾ ಒಬ್ಬೊಬ್ಬ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ ಅನ್ನುವುದು ಗೊತ್ತಿದ್ದರೂ ಹಾವೇರಿಯ ಪಕ್ಷೇತರ ಅಭ್ಯರ್ಥಿಯೊಬ್ಬರು ಸವಾಲಾಗಿ ಪರಿಣಮಿಸಿದ್ದಾರೆ. ಈ ಮುಂಚೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಇದೀಗ ಚುನಾವಣಾ ಕಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸವಾಲೊಡ್ಡಿದ್ದಾರೆ.

ಧಾರವಾಡ ವಿಧಾನ ಪರಿಷತ್ ಚುನಾವಣೆ; ಸಿಎಂ ಬೊಮ್ಮಾಯಿಗೆ ರಾಜಕೀಯ ನೆಲೆ ಕಲ್ಪಿಸಿದ ಕ್ಷೇತ್ರ ಈ ಬಾರಿ ಯಾರ ಕೈ ಹಿಡಿಯುತ್ತೆ?
ಮಲ್ಲಿಕಾರ್ಜುನ ಹಾವೇರಿ
Follow us
TV9 Web
| Updated By: ಆಯೇಷಾ ಬಾನು

Updated on:Nov 30, 2021 | 10:57 AM

ಧಾರವಾಡ: ರಾಜ್ಯದಲ್ಲಿ ಡಿಸೆಂಬರ್ 10 ಕ್ಕೆ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಸುವ ಹಾಗೂ ಹಿಂತೆಗೆದುಕೊಳ್ಳುವ ಕಾರ್ಯವೆಲ್ಲವೂ ಮುಕ್ತಾಯವಾಗಿದ್ದು, ಇದೀಗ ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಕಾಲಿಗೆ ಗಾಲಿ ಕಟ್ಟಿಕೊಂಡು ಮತಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ಧಾರವಾಡ ದ್ವಿಸದಸ್ಯ ಕ್ಷೇತ್ರ ಹೊರತಾಗಿಲ್ಲ. ಆದರೆ ಉಳಿದೆಲ್ಲಾ ಕ್ಷೇತ್ರಗಳಿಂದ ಇದು ಈ ಬಾರಿ ವಿಭಿನ್ನ. ಏಕೆಂದರೆ ಇದು ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಇರುವ ಕ್ಷೇತ್ರ.

ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿಯ ಧಾರವಾಡ ವಿಧಾನ ಪರಿಷತ್ ಕ್ಷೇತ್ರವಿದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯವಾಗಿ ನೆಲೆ ಕಲ್ಪಿಸಿದ್ದು ಕೂಡ ಇದೇ ಕ್ಷೇತ್ರ. ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡ ಇದೇ ಕ್ಷೇತ್ರದವರು. ಅಲ್ಲದೇ ಅವರ ಸಹೋದರ ಪ್ರದೀಪ್ ಶೆಟ್ಟರ್ ಅವರೇ ಬಿಜೆಪಿ ಅಭ್ಯರ್ಥಿ. ದ್ವಿಸದಸ್ಯ ಕ್ಷೇತ್ರವಾಗಿರುವ ಇಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆಯಿದ್ದರೂ ಉಭಯ ಪಕ್ಷಗಳು ತಲಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಗೆಲುವಿನ ಅಂತರಕ್ಕಷ್ಟೇ ಪೈಪೋಟಿ ಏರ್ಪಟ್ಟಂತಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಹಾವೇರಿ ಎಪಿಎಂಸಿ ಅಧ್ಯಕ್ಷರೊಬ್ಬರು ಸ್ಪರ್ಧಿಸಿದ್ದು, ಅವರು ಸೆಳೆಯುವ ಮತಗಳ ಲೆಕ್ಕಾಚಾರವೂ ಇಲ್ಲಿ ಪ್ರಮುಖವಾಗಿದೆ.

ಬಸವರಾಜ ಬೊಮ್ಮಾಯಿ ಎರಡು ಬಾರಿ ಗೆದ್ದ ಕ್ಷೇತ್ರವಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದೇ ಕ್ಷೇತ್ರ ರಾಜಕೀಯ ನೆಲೆ ಕಲ್ಪಿಸಿದೆ. ಇದೇ ಕ್ಷೇತ್ರದಿಂದ ಅವರು 2 ಬಾರಿ ಜನತಾದಳದಿಂದ ಪ್ರತಿನಿಧಿಸಿ ಗೆಲುವು ಸಾಧಿಸಿದ್ದರು. ಆದರೆ ಬಳಿಕ ಬೊಮ್ಮಾಯಿ 2008 ರ ಚುನಾವಣೆಯಲ್ಲಿ ಬಿಜೆಪಿ ಸೇರಿ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಧಾರವಾಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಮೊದಲಿನಿಂದಲೂ ಬೊಮ್ಮಾಯಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಅವರ ನಂತರ ಬಿಜೆಪಿಯಿಂದ 2009 ರಲ್ಲಿ ಶಿವರಾಜ ಸಜ್ಜನರ ಆಯ್ಕೆಯಾಗಿದ್ದರು. 2013 ರಲ್ಲಿ ಕೆಜೆಪಿ ಸೇರಿದ ಸಜ್ಜನರ ರಾಜೀನಾಮೆ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾಗರಾಜ ಛಬ್ಬಿ ಗೆದ್ದಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಪ್ರದೀಪ ಶೆಟ್ಟರ್ ಸೋಲು ಕಂಡಿದ್ದರು. ಮತ್ತೆ 2015 ರ ಚುನಾವಣೆಯಲ್ಲಿ ಎರಡೂ ಪಕ್ಷಗಳು ತಲಾ ಒಬ್ಬರೇ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ, ಬಿಜೆಪಿಯಿಂದ ಪ್ರದೀಪ ಶೆಟ್ಟರ್ ಸುಲಭ ಗೆಲುವು ಸಾಧಿಸಿದರು. ಅದೇ ತಂತ್ರಗಾರಿಕೆಯನ್ನು ಈ ಬಾರಿಯೂ ಎರಡೂ ಪಕ್ಷಗಳು ಅನುಸರಿಸಿವೆ.

ಬಿಜೆಪಿಯಿಂದ ಪ್ರದೀಪ್ ಶೆಟ್ಟರ್, ಕಾಂಗ್ರೆಸ್ ನಿಂದ ಸಲೀಂ ಅಹ್ಮದ್ ಬಿಜೆಪಿಯಿಂದ ಹಾಲಿ ಸದಸ್ಯ ಪ್ರದೀಪ ಶೆಟ್ಟರ್, ಕಾಂಗ್ರೆಸ್‌ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಈ ಬಾರಿ ಅಖಾಡಕ್ಕಿಳಿದಿದ್ದಾರೆ. ಇಬ್ಬರೂ ಸಲೀಸಾಗಿ ಗೆಲುವಿನ ದಡ ಸೇರುವುದು ಖಚಿತವಾಗಿದೆ. ಈ ಕ್ಷೇತ್ರ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಂತಹ ಘಟಾನುಘಟಿಗಳು ಹಾಗೂ ಮೂವರು ಸಚಿವರಿದ್ದಾರೆ. ಒಟ್ಟು 17 ಶಾಸಕರಲ್ಲಿ ಬಿಜೆಪಿ 13 ಶಾಸಕರ ಬಲ ಹೊಂದಿದೆ. ಪ್ರದೀಪ ಶೆಟ್ಟರ್, ಜಗದೀಶ ಶೆಟ್ಟರ್ ಸಹೋದರ ಎನ್ನುವುದು ಗಮನಾರ್ಹ. ಹೀಗಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ಪಡೆದು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ.

ಸಲೀಂ ಅಹ್ಮದ್ ಬೆಂಗಳೂರು ಮೂಲದವರಾದರೂ ಹಾವೇರಿ ಜಿಲ್ಲೆಯೊಂದಿಗೆ ಅವರು ವಿಶೇಷ ನಂಟು ಹೊಂದಿದ್ದಾರೆ. 2009 ಹಾಗೂ 2014 ರಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಲೀಂ ಅಹ್ಮದ್ ಸೋಲು ಕಂಡಿದ್ದಾರೆ. ಆದರೂ ಹಾವೇರಿ ಜಿಲ್ಲೆಯ ನಂಟನ್ನು ಅವರು ಬಿಟ್ಟಿಲ್ಲ. ಇತ್ತೀಚಿಗೆ ನಡೆದ ಹಾನಗಲ್ ಉಪ ಚುನಾವಣೆಯಲ್ಲಿ ಅವರು ಕ್ಷೇತ್ರದಲ್ಲಿಯೇ ಉಳಿದು, ಶ್ರೀನಿವಾಸ ಮಾನೆ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ಸರಕಾರದ ಇಡೀ ಮಂತ್ರಿ ಮಂಡಲವೇ ಮುಕ್ಕಾಂ ಹೂಡಿ ಕ್ಷೇತ್ರದಲ್ಲಿ ಗೆಲ್ಲಲು ಯತ್ನಿಸಿತ್ತಾದರೂ ಸಾಧ್ಯವಾಗಿರಲಿಲ್ಲ. ಇದರ ಹಿಂದೆ ಶ್ರೀನಿವಾಸ ಮಾನೆ ಅವರ ಕೆಲಸಗಳ ಜತೆಗೆ ಸಲೀಂ ಅಹ್ಮದ್ ಅವರ ರಾಜಕೀಯ ತಂತ್ರಗಾರಿಕೆಯೂ ಇತ್ತು. ಹೀಗಾಗಿ ತಾವು ಸೋಲುಂಡ ನೆಲದಲ್ಲಿಯೇ ಗೆಲುವು ಹುಡುಕುವ ಹೊಸ ಹಾದಿಯಲ್ಲಿ ಸಲೀಂ ಅಹ್ಮದ್ ಸಾಗಿದ್ದಾರೆ. ಈ ಚುನಾವಣೆಯಲ್ಲಿ ಅವರು ಗೆದ್ದರೆ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಶತಾಯ ಗತಾಯ ಗೆಲ್ಲಲು ಪ್ರಯತ್ನ ನಡೆಸಿದ್ದಾರೆ.

ಕಡಿಮೆ ಶಾಸಕರಿದ್ದರೂ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ ಧಾರವಾಡ ವಿಧಾನ ಪರಿಷತ್ ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಕೆಪಿಸಿಸಿಯಲ್ಲಿ ಮಹತ್ವದ ಹುದ್ದೆಯಲ್ಲಿರುವ ಸಲೀಂ ಗೆಲ್ಲಿಸಲು ಹಾಲಿ, ಮಾಜಿ ಶಾಸಕರು ಪಣತೊಟ್ಟು ನಿಂತಿದ್ದಾರೆ. ಪಕ್ಷಗಳ ಚಿನ್ನೆಯಡಿ ಗೆದ್ದು ಬರುತ್ತಿದ್ದ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ಗಳ ಸದಸ್ಯರು ಈಗಿಲ್ಲ. ಇನ್ನು ಮೂರೂ ಜಿಲ್ಲೆಗಳಲ್ಲಿನ ಕೆಲ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ಗಳಲ್ಲಿ ಸದಸ್ಯರು ಇಲ್ಲ. ಹೀಗಾಗಿ ಪಕ್ಷ ಬೆಂಬಲಿತ ನೂರಾರು ಸದಸ್ಯರು ಮತದಾನದಿಂದ ಹೊರಗುಳಿಯುವಂತಾಗಿದೆ. ಪಕ್ಷಾತೀತವಾಗಿ ಆಯ್ಕೆಯಾಗಿರುವ ಗ್ರಾ.ಪಂ ಸದಸ್ಯರೇ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದಾರೆ.

ಉಭಯ ಪಕ್ಷಗಳಿಗೆ ಮಲ್ಲಿಕಾರ್ಜುನ ಹಾವೇರಿ ರೆಬೆಲ್ ಎರಡೂ ರಾಷ್ಟ್ರೀಯ ಪಕ್ಷಗಳ ತಲಾ ಒಬ್ಬೊಬ್ಬ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ ಅನ್ನುವುದು ಗೊತ್ತಿದ್ದರೂ ಹಾವೇರಿಯ ಪಕ್ಷೇತರ ಅಭ್ಯರ್ಥಿಯೊಬ್ಬರು ಸವಾಲಾಗಿ ಪರಿಣಮಿಸಿದ್ದಾರೆ. ಈ ಮುಂಚೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಇದೀಗ ಚುನಾವಣಾ ಕಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸವಾಲೊಡ್ಡಿದ್ದಾರೆ. ಅವರನ್ನು ಸೇರಿಸಿ ಒಟ್ಟು 8 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯೇ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಈ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳಿದ್ದು, ಅದನ್ನೇ ಮಲ್ಲಿಕಾರ್ಜುನ ಬಳಸಿಕೊಳ್ಳುವ ತಂತ್ರ ಹೆಣೆದಿದ್ದಾರೆ. ಏಕೆಂದರೆ ಪ್ರದೀಪ ಶೆಟ್ಟರ್ ಹುಬ್ಬಳ್ಳಿ ಮೂಲದವರಾಗಿದ್ದು, ಸಲೀಂ ಅಹ್ಮದ್ ಬೆಂಗಳೂರು ಮೂಲದವರು ಅಂತಾ ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸಿ ಅಂತಾ ತಮ್ಮದೇ ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಹಾವೇರಿ ಮತ ಯಾಚನೆಗೆ ತೊಡಗಿದ್ದಾರೆ.

ಕಳೆದ ಬಾರಿಯ ಫಲಿತಾಂಶ ಹೇಗಿತ್ತು? ಕಳೆದ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಬ್ಬೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದವು. 2015 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರದೀಪ ಶೆಟ್ಟರ್ ಹಾಗೂ ಕಾಂಗ್ರೆಸ್ ನಿಂದ ಶ್ರೀನಿವಾಸ ಮಾನೆ ಸ್ಪರ್ಧಿಸಿದ್ದರು. ಬಿಜೆಪಿಯ ಪ್ರದೀಪ ಶೆಟ್ಟರ್ 3,254 ಮತ ಹಾಗೂ ಶ್ರೀನಿವಾಸ ಮಾನೆ 3,607 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇನ್ನು ಜೆಡಿಎಸ್ ನಿಂದ ಸ್ಪರ್ಧಿಸಿದ್ದ ವಾಗೀಶ ಪ್ರಸಾದ್ ಕೇವಲ 224 ಮತಗಳಿಗೆ ತೃಪ್ತಿಪಡಬೇಕಾಗಿತ್ತು. ಈ ಬಾರಿಯೂ ಬಿಜೆಪಿಯ ಪ್ರದೀಪ ಶೆಟ್ಟರ್ ಹಾಗೂ ಕಾಂಗ್ರೆಸ್ ನ ಸಲೀಂ ಅಹ್ಮದ್ ಗೆಲುವಿನ ಓಟ ಖಚಿತವಾಗಿದ್ದರೂ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಹಾವೇರಿ ಕೊಂಚ ಬ್ರೇಕ್ ಹಾಕಲು ಯತ್ನಿಸುತ್ತಿರುವುದು ಮಾತ್ರ ಸುಳ್ಳಲ್ಲ.

ಮತದಾರರ ವಿವರ ಹೀಗಿದೆ ಒಟ್ಟು ಮತದಾರರ ಸಂಖ್ಯೆ : 7503 ಪುರುಷ ಮತದಾರರು : 3659 ಮಹಿಳಾ ಮತದಾರರು : 3844

ಜಿಲ್ಲಾವಾರು ಮತದಾರರ ವಿವಿರ ಧಾರವಾಡ : 2165 ಗದಗ್ : 1869 ಹಾವೇರಿ : 3369

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ

ಇದನ್ನೂ ಓದಿ: ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್​ ನಾಯಕ ಸಿಆರ್ ಮನೋಹರ್​ ರಾಜೀನಾಮೆ

Published On - 10:52 am, Tue, 30 November 21