ವಿಧಾನ ಪರಿಷತ್ ಚುನಾವಣೆಯಲ್ಲಿ ಹಣದ ದರ್ಬಾರ್; ಒಂದು ವೋಟಿಗೆ 1 ಲಕ್ಷ ರೂ.ವರೆಗೂ ಹಂಚಿಕೆ!

Karnataka MLC Elections: ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಹುತೇಕ ಶ್ರೀಮಂತ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಲಾಗಿದೆ. ಹೀಗಾಗಿ, ಅವರು ಚುನಾವಣಾ ವೆಚ್ಚಕ್ಕೆ ಪಕ್ಷದ ಮೊರೆ ಹೋಗದೆ ಹಣದ ಹೊಳೆ ಹರಿಸುತ್ತಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಹಣದ ದರ್ಬಾರ್; ಒಂದು ವೋಟಿಗೆ 1 ಲಕ್ಷ ರೂ.ವರೆಗೂ ಹಂಚಿಕೆ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಅಖಾಡ ಸಿದ್ಧವಾಗಿದ್ದು, ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿ ಹಣದ ದರ್ಬಾರ್ ನಡೆಯುತ್ತಿದ್ದು, ಒಂದು ಮತಕ್ಕೆ 25,000 ರೂ.ನಿಂದ 1 ಲಕ್ಷ ರೂ.ವರೆಗೆ ಹಣ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಜಯ ಸಾಧಿಸಲೇಬೇಕೆಂದು ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಹುತೇಕ ಶ್ರೀಮಂತ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಲಾಗಿದೆ. ಹೀಗಾಗಿ, ಅವರು ಚುನಾವಣಾ ವೆಚ್ಚಕ್ಕೆ ಪಕ್ಷದ ಮೊರೆ ಹೋಗದೆ ಹಣದ ಹೊಳೆ ಹರಿಸುತ್ತಿದ್ದಾರೆ. ಈ ಬಾರಿಯ ಅಭ್ಯರ್ಥಿಗಳಲ್ಲಿ ಬಹುತೇಕರು 30 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಹೊಂದಿದವರಾಗಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಅಭ್ಯರ್ಥಿ 1,753 ಕೋಟಿ ರೂ. ಆಸ್ತಿ ಘೋಷಿಸುವ ಮೂಲಕ ಅತ್ಯಂತ ಶ್ರೀಮಂತ ಚುನಾವಣಾ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯರ ಪ್ರಕಾರ, ಆಯಾ ಚುನಾವಣಾ ಕ್ಷೇತ್ರಗಳಲ್ಲಿ ಇರುವ ಮತದಾರರಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಮೊತ್ತವನ್ನು ನಿಗದಿ ಮಾಡಲಾಗಿದೆ. ಉತ್ತರ ಕರ್ನಾಟಕದ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳು ಒಂದು ವೋಟ್​ಗೆ 25ರಿಂದ 60 ಸಾವಿರ ರೂ. ನೀಡುತ್ತಿದ್ದಾರೆ. ಆ ಕ್ಷೇತ್ರದಲ್ಲಿ ಇಬ್ಬರು ಪ್ರಭಾವಿ ಅಭ್ಯರ್ಥಿಗಳು ಎದುರಾಳಿಗಳಾಗಿ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ, ಈ ಚುನಾವಣೆ ಅವರಿಗೆ ಪ್ರತಿಷ್ಠೆಯ ವಿಷಯವಾಗಿರುವುದರಿಂದ ಹಣ ನೀಡಿ ಮತಗಳನ್ನು ಖರೀದಿಸುತ್ತಿದ್ದಾರೆ. ಒಂದು ಮತಕ್ಕೆ 1 ಲಕ್ಷ ರೂ.ವರೆಗೂ ಆಫರ್ ಮಾಡಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.

ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾತ್ರ ಮತ ಚಲಾಯಿಸುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಕಡಿಮೆ ಇರುವುದರಿಂದ ಹೆಚ್ಚು ಹಣ ನೀಡಿ ಅವರ ಮತಗಳನ್ನು ಖರೀದಿಸಲು ಅಭ್ಯರ್ಥಿಗಳು ನಿರ್ಧರಿಸಿದ್ದಾರೆ. ಒಂದೊಂದು ಚುನಾವಣಾ ಕ್ಷೇತ್ರದಲ್ಲಿ 4ರಿಂದ 9 ಸಾವಿರ ಮತದಾರರು ಮಾತ್ರ ಇರುವುದರಿಂದ ಹಣ ಹಂಚಿಕೆ ಕಾರ್ಯ ಶುರುವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಅಲ್ಲದೆ, ಚುನಾವಣಾ ಅಭ್ಯರ್ಥಿಗಳು ತಡರಾತ್ರಿ ಪಾರ್ಟಿಗಳನ್ನು ಆಯೋಜಿಸಿ, ಹಣ, ಹೆಂಡದ ಮೂಲಕ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಕಳೆದ ವರ್ಷ ಒಂದು ಮತಕ್ಕೆ 5ರಿಂದ 15 ಸಾವಿರ ರೂ. ನೀಡಲಾಗಿತ್ತು. ಆದರೆ, ಈ ವರ್ಷ ಆ ಮೊತ್ತ ಮೂರು ಪಟ್ಟು ಹೆಚ್ಚಾಗಿದ್ದು, 60 ಸಾವಿರದಿಂದ 1 ಲಕ್ಷ ರೂ.ವರೆಗೆ ಹಣ ನೀಡಲಾಗುತ್ತಿದೆ ಎಂದು ಬೆಳಗಾವಿಯ ಕಾಂಗ್ರೆಸ್​ ವಿಭಾಗ ಆರೋಪಿಸಿದೆ.

ಇನ್ನು, ಕೋಲಾರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲೂ ಹಣದ ಆಮಿಷವೊಡ್ಡಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಅಭ್ಯರ್ಥಿಗಳು ಮತದಾರರಿಗೆ 50,000 ರೂ. ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಂಗೇರಿದ ವಿಧಾನ ಪರಿಷತ್ ಚುನಾವಣೆ ಪ್ರಚಾರ: ಇಂದಿನಿಂದ 3 ದಿನ ಜಿಲ್ಲಾ ಪ್ರವಾಸ ಕೈಗೊಂಡ ಸಿಎಂ ಬಸವರಾಜ ಬೊಮ್ಮಾಯಿ

ಕಾವೇರಿದ ಪರಿಷತ್ ಚುನಾವಣೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಶಾಸಕರ ಮಧ್ಯೆ ಗಲಾಟೆ

Published On - 1:34 pm, Mon, 6 December 21

Click on your DTH Provider to Add TV9 Kannada