ಮುರುಘಾಮಠಕ್ಕೆ ಕೊನೆಗೂ ಪ್ರಭಾರ ಪೀಠಾಧ್ಯಕ್ಷರ ನೇಮಕ: ಕೋರ್ಟ್​ ಅನುಮತಿ ಪಡೆದು ಅಧಿಕೃತ ಪ್ರಕಟಣೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 16, 2022 | 2:35 PM

ಕಾನೂನು ಪ್ರಕ್ರಿಯೆ ಮೂಲಕ ಅಧಿಕೃತವಾಗಿ ಕೊನೆಗೂ ಮುರುಘಾಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕವಾಗಿದೆ.

ಮುರುಘಾಮಠಕ್ಕೆ ಕೊನೆಗೂ ಪ್ರಭಾರ ಪೀಠಾಧ್ಯಕ್ಷರ ನೇಮಕ: ಕೋರ್ಟ್​ ಅನುಮತಿ ಪಡೆದು ಅಧಿಕೃತ ಪ್ರಕಟಣೆ
ಮುರುಘಾ ಶ್ರೀಗಳ ಜೊತೆ ಬಸವಪ್ರಭುಶ್ರೀ
Follow us on

ಚಿತ್ರದುರ್ಗ: ಕೊನೆಗೂ ಚಿತ್ರದುರ್ಗದ  ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕವಾಗಿದೆ. ಹಲವರ ವಿರೋಧದ ನಡುವೆಯೂ ಕಾನೂನು ಪ್ರಕ್ರಿಯೆ ಮೂಲಕ ಅಧಿಕೃತವಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಿಸಲಾಗಿದೆ.

ಈ ಬಗ್ಗೆ ಹೈಕೋರ್ಟ್ ಅನುಮತಿ ಪಡೆದು ಬಸವಪ್ರಭುಶ್ರೀ ನೇಮಕ ಕುರಿತು ಮುರುಘಾಮಠ ಇಂದು(ಅಕ್ಟೋಬರ್ 16) ಅಧಿಕೃತ ಪ್ರಕಟಣೆ ಹೊರಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಧಾರ್ಮಿಕ, ಸೇವಾ, ಪೂಜಾ ಕಾರ್ಯಗಳು ಮಠದ ಪರಂಪರೆ ಮುಂದುವರೆಸಿಕೊಂಡು ಹೋಗಲು ಪ್ರಕಟಣೆಯಲ್ಲಿ ತಿಳಿಸಿದೆ.

ಮುರುಘಾಮಠದ ಪ್ರಭಾರ ಪೀಠಾಧ್ಯಕ್ಷರಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭುಶ್ರೀ ಹೆಸರು ಅಂತಿಮ; ಹಲವರಿಂದ ವಿರೋಧ 

ಬಸವಪ್ರಭು ಸ್ವಾಮೀಜಿ ಪ್ರತಿಕ್ರಿಯೆ

ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಬಸವಪ್ರಭು ಶ್ರೀ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪೂಜೆ, ದಾಸೋಹ,‌ ಮಠದ ಕೆಲಸ ನೋಡಿಕೊಳ್ಳಲು ಶಿವಮೂರ್ತಿ ಮುರುಘಾ ಶರಣರಿಂದ ಆದೇಶ ಸಿಕ್ಕಿದೆ. ನಿಷ್ಠೆಯಿಂದ ಭಕ್ತಿಯಿಂದ ಸೇವಾಕಾರ್ಯ ಮಾಡುತ್ತೇನೆ. ಮುರುಘೇಶ, ಗುರು ಬಸವೇಶನ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಮುರುಘಾಶ್ರೀ ಆಶೀರ್ವಾದ, ಮಾರ್ಗದರ್ಶನದಲ್ಲಿ ಎಲ್ಲಾ ಮಠದ ಶ್ರೀಗಳು, ಎಲ್ಲಾ ಭಕ್ತರ ಆಶಯದಂತೆ ಸೇವೆ ಮಾಡುತ್ತೇನೆ. ಭಕ್ತರು ಎಂದಿನಂತೆ ಸಹಕರಿಸವೇಕೆಂದು ಮನವಿ ಮಾಡಿದರು.

ತಾತ್ಕಾಲಿಕ ಆದೇಶ, ಮುಂದಿನ ಆದೇಶದವರೆಗೆ ಬಸವಣ್ಣನ ಆಶೀರ್ವಾದ , ಗುರುವಿನ ಆಶೀರ್ವಾದ, ಮುರುಘಾಶ್ರೀ ಆಶೀರ್ವಾದ ಶಕ್ತಿಯಿಂದ ಜವಬ್ದಾರಿ‌ ನಿರ್ವಹಿಸುತ್ತೇನೆ ಎಂದು ಹೇಳಿದರು.

ಮಠದ ಆಡಳಿತ ಮಂಡಳಿ ಸದಸ್ಯರು, ಮುಖಂಡರು ಸಭೆ ನಡೆಸಿ ಬಸವಪ್ರಭು ನೇಮಕ ಮಾಡುವುದಕ್ಕೆ ತೀರ್ಮಾನಿಸಿದ್ದರು. ಇನ್ನು ಮತ್ತೊಂದು ಕಡೆ ಬಸವಪ್ರಭು ಶ್ರೀಗೆ ಪ್ರಭಾರ ಪೀಠಾದ್ಯಕ್ಷರಾಗಿ ನೇಮಕಕ್ಕೆ ಅಪಸ್ವರ ಕೇಳಿ ಬಂದಿತ್ತು. ವಿವಿಧ ಮಠಾಧೀಶರು, ಸಮಾಜದ ಮುಖಂಡರು ಅಪಸ್ವರ ಎತ್ತಿದ್ದರು.

ಮುರುಘಾಶ್ರೀ ರಕ್ಷಣೆಗಾಗಿ ಬಸವಪ್ರಭು ಶ್ರೀ ನೇಮಕ ಎಂದು ಕಿಡಿ ಕಾರಿದ್ದರೆ. ಬಸವಪ್ರಭು ಶ್ರೀ ನೇಮಕ ನ್ಯಾಯಸಮ್ಮತವಲ್ಲ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಮಠದಲ್ಲಿ ದೀಕ್ಷೆ ಪಡೆದ ಕೆಲ ಮಠಾಧೀಶರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಆದ್ರೆ, ಇದೀಗ ಅಂತಿಮವಾಗಿ ಬಸವಪ್ರಭುಗಳನ್ನೇ ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರುಘಾ ಮಠದ ಪೀಠಾಧ್ಯಕ್ಷ ಶರಣರು ಜೈಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುರುಘಾಮಠದ ಪೂಜಾ ಕೈಂಕರ್ಯ ಮಾಡಲು ಈ ಹಿಂದೆ ಹೆಬ್ಬಾಳ ಮಠದ ಮಹಾಂತ ರುದ್ರೇಶ್ವರ ಶ್ರೀಗೆ ಮೌಖಿಕವಾಗಿ ಸೂಚಿಸಲಾಗಿತ್ತು. ಆದ್ರೆ, ಇದೀಗ ಮುರುಘಾಮಠದ ಪೂಜಾ ಕೈಂಕರ್ಯಕ್ಕೆ ಬಸವಪ್ರಭು ಶ್ರೀ ನೇಮಕ ಮಾಡಲಾಗಿದೆ.

ಇನ್ನು ಮಠದ ಎಸ್​.ಜೆ.ಎಮ್​ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಿವೃತ್ತ ನ್ಯಾಯಾಧೀಶ ಎಸ್.ಬಿ.ವಸ್ತ್ರದಮಠ ಅವರಿಗೆ ಪವರ್ ಆಫ್ ಅಟರ್ನಿ ನೀಡಲಾಗಿದೆ. ಅದರಂತೆ ಎಸ್​.ಜೆ.ಎಮ್​ ವಿದ್ಯಾಸಂಸ್ಥೆಯ ಹಣಕಾಸು ವ್ಯವಹಾರ ಸೇರಿದಂತೆ ಚೆಕ್​ಗೆ ಸಹಿ ಮಾಡಲು ವಸ್ತ್ರದಮಠ ಅವರಿಗೆ ಮುರುಘಾ ಶ್ರೀಗಳು ನೀಡಿದ್ದಾರೆ. ಇದಕ್ಕೆ ಕೋರ್ಟ್​ ಸಹ ಅನುಮತಿ ನೀಡಿತ್ತು.

Published On - 2:22 pm, Sun, 16 October 22