ಜಿಲ್ಲೆ ಜಿಲ್ಲೆಗಳಲ್ಲಿ ಬ್ಲ್ಯಾಕ್ ಫಂಗಸ್ ಆರ್ಭಟ, ಹೆಚ್ಚಾಗುತ್ತಿದೆ ಪ್ರಕರಣಗಳ ಸಂಖ್ಯೆ
ಕೊರೊನಾ ಕೊಡ್ತಾ ಇರೋ ಕಾಟವನ್ನ ಜನರಿಗೆ ತಡ್ಕೊಳ್ಳೋಕೆ ಆಗಿಲ್ಲ. ಇದರ ನಡುವೆ ಬ್ಲ್ಯಾಕ್ ಫಂಗಸ್ ಜನರಿಗೆ ನರಕ ತೋರಿಸುತ್ತಿದೆ. ಕೊರೊನಾ ಗುಣಮುಖವಾದವರನ್ನ ಟಾರ್ಗೆಟ್ ಮಾಡಿ ಅಟ್ಟಹಾಸ ಮರೆಯುತ್ತಿದೆ. ಈ ಬ್ಲಾಕ್ ಫಂಗಸ್ ಅಂದ್ರೆ ಏನು ಅನ್ನೋದು ಗೊತ್ತಾಗುವ ವೇಳೆ ವೈಟ್ ಫಂಗಸ್ ಕಾಟ ಶುರುವಾಗಿದೆ.
ಕೊರೊನಾ ಇಂಚಿಂಚೂ ಜೀವ ಹಿಂಡ್ತಿದೆ. ಕ್ಷಣ ಕ್ಷಣವೂ ಹಲವ್ರ ಉಸಿರು ನಿಲ್ಲಿಸ್ತಿದೆ. ಅದೆಷ್ಟೋ ಜನರನ್ನ ಅನಾಥವಾಗಿಸಿದೆ. ಅದೆಷ್ಟೋ ಕುಟುಂಬಗಳನ್ನ ಕಣ್ಣೀರ ಕಡಲಿಗೆ ತಳ್ಳಿದೆ. ಕೊರೊನಾದಿಂದ ಬಚಾವ್ ಆದವರು ಬದುಕಿ ಬಂದ್ವಿ ಅಂತಾ ನಿಟ್ಟುಸಿರೋ ಬಿಡೋದ್ರೊಳಗೆ ಬ್ಲ್ಯಾಕ್ ಫಂಗಸ್ ವಕ್ಕರಿಸಿಕೊಂಡಿತ್ತು. ಬ್ಲ್ಯಾಕ್ ಫಂಗಸ್ ಅಂದ್ರೆ ಏನು, ಹೇಗೆ ಬರುತ್ತೆ ಅನ್ನೋದೇ ಇನ್ನೂ ಜನರಿಗೆ ಸರಿಯಾಗಿ ಗೊತ್ತಿಲ್ಲ, ಇದ್ರ ಬೆನ್ನಲ್ಲೇ ವೈಟ್ ಫಂಗಸ್ ಕೂಡ ತನ್ನ ವಿಷಜಾಲವನ್ನೂ ಹರಡೋಕೆ ಶುರು ಮಾಡಿದೆ.
ರಾಯಚೂರಿನಲ್ಲಿ 6 ಮಂದಿಗೆ ವಕ್ಕರಿಸಿದ ಬಿಳಿ ಹೆಮ್ಮಾರಿ! ಅಂದ್ಹಾಗೇ, ಬ್ಲ್ಯಾಕ್ ಫಂಗಸ್ಗೆ ಔಷಧಿ ಸಿಗದೆಯೇ ಜನರು ವಿಲವಿಲ ಒದ್ದಾಡ್ತಿದ್ದಾರೆ. ತಮ್ಮವರನ್ನ ಉಳಿಸಿಕೊಳ್ಳೋಕೆ ಪರದಾಡ್ತಿದ್ದಾರೆ, ಹೇಗಾದ್ರೂ ಮಾಡಿ ಔಷಧಿ ತರಿಸಿಕೊಂಡಿ ಅಂತಾ ಕೈಮುಗಿದು ಕೇಳ್ತಿದ್ದಾರೆ. ಇದ್ರ ನಡ್ವೆ ವೈಟ್ ಫಂಗಸ್ ಸದ್ದಿಲ್ಲದೆ ಹಲವ್ರ ದೇಹ ಹೊಕ್ಕೇ ಬಿಟ್ಟಿದೆ. ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ 6 ಮಂದಿಗೆ ವೈಟ್ ಫಂಗಸ್ ಕಾಣಿಸಿಕೊಂಡಿದೆ. ಆದ್ರೆ ವೈದ್ಯರು ಮಾತ್ರ, ಆತಂಕಪಡೋ ಅಗತ್ಯವಿಲ್ಲ, 14 ದಿನ ಔಷಧ ನೀಡಿದ್ರೆ ಗುಣವಾಗ್ತಾರೆ. ವೈಟ್ ಫಂಗಸ್ ರಕ್ತಕ್ಕೆ ಸೇರಿದ್ರೆ ಮಾತ್ರ ಪ್ರಾಣಕ್ಕೆ ಅಪಾಯವಾಗುತ್ತೆ ಅಂತಿದ್ದಾರೆ.
ಜಿಲ್ಲೆ ಜಿಲ್ಲೆಗಳಲ್ಲಿ ಬ್ಲ್ಯಾಕ್ ಫಂಗಸ್ ಆರ್ಭಟ ವೈಟ್ ಫಂಗಸ್ ಆರ್ಭಟ ನಿಧಾನವಾಗಿ ಶುರುವಾಗುತ್ತಿದ್ದರೆ, ಬ್ಲ್ಯಾಕ್ ಫಂಗಸ್ ಜಿಲ್ಲೆ ಜಿಲ್ಲೆಗಳಲ್ಲೂ ರಣಕೇಕೆ ಹಾಕುತ್ತಿದೆ. ಹಾಗಿದ್ರೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಬ್ಲ್ಯಾಕ್ ಫಂಗಸ್ ಕೇಸ್ ಇದೆ ಅಂತ ನೋಡೋದಾದ್ರೆ.
ರಾಜಧಾನಿ ಬೆಂಗಳೂರಿನಲ್ಲಿ 72ರ ಮೇಲೆ ದಾಳಿ ಮಾಡಿದ ಬ್ಲ್ಯಾಕ್ ಫಂಗಸ್ 07 ಜನರನ್ನ ಬಲಿ ಪಡೆದಿದೆ. ಬಾಗಲಕೋಟೆಯಲ್ಲಿ ಹತ್ತು ಜನಕ್ಕೆ ಬ್ಲ್ಯಾಕ್ ಫಂಗಸ್ ವಕ್ಕರಿಸಿದ್ರೆ, ಬೀದರ್‌ನಲ್ಲಿ 5 ಜನ ಕರಿ ಮಾರಿ ಜಾಲಕ್ಕೆ ಬಿದ್ದಿದ್ದಾರೆ. ಹಾಗೇ ಬೆಳಗಾವಿಯಲ್ಲಿ 3 ಬ್ಲ್ಯಾಕ್ ಫಂಗಸ್ ಕೇಸ್‌ನಲ್ಲಿ ಒಂದು ಬಲಿಯಾಗಿದ್ರೆ, ಬಳ್ಳಾರಿಯಲ್ಲಿ 12 ಬ್ಲ್ಯಾಕ್ ಫಂಗಸ್ ಕೇಸ್‌ನಲ್ಲಿ ಎರಡು ಬಲಿಯಾಗಿದೆ. ಹಾಗೇ ಚಾಮರಾಜನಗರದಲ್ಲಿ 2, ಚಿತ್ರದುರ್ಗದಲ್ಲಿ 21, ಚಿಕ್ಕಮಗಳೂರಿನಲ್ಲಿ 04, ದಾವಣಗೆರೆಯಲ್ಲಿ 15, ಹುಬ್ಬಳ್ಳಿ- ಧಾರವಾಡದಲ್ಲಿ 78, ಗದಗ್‌ನಲ್ಲಿ 5 ಜನಕ್ಕೆ ಬ್ಲ್ಯಾಕ್ ಪಂಗಸ್ ತಗುಲಿದೆ. ಹಾಗೇ ಹಾಸನದಲ್ಲಿ 7 ಕೇಸ್‌ನಲ್ಲಿ ಒಂದು ಬಲಿಯಾಗಿದ್ರೆ,
ಕೋಲಾರದಲ್ಲಿ 8, ಕೊಪ್ಪಳದಲ್ಲಿ 1, ಕಲಬುರಗಿಯಲ್ಲಿ 20 ಕೇಸ್ ಪತ್ತೆಯಾಗಿದೆ, ಹಾಗೇ ಮಂಗಳೂರಿನಲ್ಲಿ 7 ಜನಕ್ಕೆ ಕರಿ ಮಾರಿ ಅಟ್ಯಾಕ್ ಮಾಡಿ ಎರಡು ಬಲಿ ಪಡೆದ್ರೆ, ಮೈಸೂರಿನಲ್ಲಿ 20ರಲ್ಲಿ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಹಾಗೇ ರಾಯಚೂರಿನಲ್ಲಿ 05, ರಾಮನಗರದಲ್ಲಿ 05, ಶಿವಮೊಗ್ಗದಲ್ಲಿ ಜನಕ್ಕೆ ಕರಿ ಮಾರಿ ಅಟ್ಯಾಕ್ ಮಾಡಿದೆ. ಶಿವಮೊಗ್ಗದಲ್ಲಿ ಒಂದು ಬಲಿ ಪಡೆದಿದೆ. ತುಮಕೂರಿನಲ್ಲಿ 6 ಕೇಸ್‌ನಲ್ಲಿ ಒಂದು ಬಲಿಯಾದ್ರೆ, ಉಡುಪಿಯಲ್ಲಿ 9 ಜನಕ್ಕೆ ತಗುಲಿ ಒಂದು ಬಲಿ ಪಡೆದಿದೆ. ವಿಜಯಪುರದಲ್ಲಿ 50 ಜನಕ್ಕೆ ಬ್ಲ್ಯಾಕ್ ಫಂಗಸ್ ತಗುಲಿದ್ರೆ, ಬೆಂಗಳೂರು ಗ್ರಾಮಾಂತರದಲ್ಲಿ ಇಬ್ಬರಿಗೆ ಕರಿ ಮಾರಿ ಅಟ್ಯಾಕ್ ಮಾಡಿದೆ. ಒಟ್ಟು ರಾಜ್ಯದಲ್ಲಿ 366 ಜನಕ್ಕೆ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಮಾಡಿ 18 ಬಲಿ ಪಡೆದಿದೆ.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ 78 ಬ್ಲ್ಯಾಕ್ ಪಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡ 18, ಬೆಳಗಾವಿ 16, ಬಾಗಲಕೋಟೆ 16, ಗದಗ 05, ಕೊಪ್ಪಳ 05, ರಾಯಚೂರು 04, ಹಾವೇರಿ 4, ವಿಜಯಪುರ 4, ಬಳ್ಳಾರಿ 02, ಉತ್ತರ ಕನ್ನಡ 01, ತುಮಕೂರು 1, ಚಿತ್ರದುರ್ಗ 01 ಸೇರಿದಂತೆ 78 ಬ್ಲ್ಯಾಕ್ ಪಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ನಲ್ಲಿ ಕೊರೊನಾ, ಬ್ಲ್ಯಾಕ್ ಫಂಗಸ್ ಮತ್ತೆ ವೈಟ್ ಫಂಗಸ್ ಹೊಡೆತಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಯಾವಾಗಪ್ಪ ಇದೆಲ್ಲದರಿಂದ ಮುಕ್ತಿ ಸಿಗುತ್ತೆ ಅಂತಾ ಕಾಯ್ತಿದ್ದಾರೆ.
ಇದನ್ನೂ ಓದಿ: ದೇಶದಲ್ಲೇ ಅತಿಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಗುಜರಾತ್ನಲ್ಲಿ ಪತ್ತೆಯಾಗಿವೆ