ಕಲ್ಯಾಣ ಮಂಟಪ ಬುಕ್ ಮಾಡಲು ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ, ಮದುವೆಯಲ್ಲಿ ಜನರ ನಿಯಂತ್ರಿಸದಿದ್ದರೆ ಎಫ್ಐಆರ್: ರಾಜ್ಯ ಸರ್ಕಾರ
ಯಾವುದೇ ಕಾರ್ಯಕ್ರಮದ ಆಯೋಜಕರು ನಿಗದಿತ ಸಂಖ್ಯೆಯಲ್ಲಿ ಪಾಸ್ ವಿತರಿಸಬೇಕು. ಒಂದು ವೇಳೆ ಹೆಚ್ಚುವರಿ ಪಾಸ್ ಕೊಟ್ಟಿದ್ದು ಕಂಡುಬಂದ್ರೆ ಅಂತಹ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು.
ಬೆಂಗಳೂರು: ಕೊರೊನಾ ಮಹಾಮಾರಿ ಎರಡನೆಯ ಅಲೆ ಜೋರಾಗಿ ಅಪ್ಪಳಿಸಿರುವುದರಿಂದ ರಾಜ್ಯ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇಂದು ಮೂವರು ಸಚಿವರ ಸಭೆ ನಡೆದಿದ್ದು, ಸಭೆಯಲ್ಲಿ ಕಾನೂನು ಕ್ರಮದ ಬಗ್ಗೆ ಚರ್ಚೆ ನಡೆಸಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ ಮತ್ತು ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಚೀಫ್ ಸೆಕ್ರೆಟರಿ, ಹೆಲ್ತ್ ಸೆಕ್ರೆಟರಿ ಸೇರಿದಂತೆ ಬಹುತೇಕ ಉನ್ನತಾಧಿಕಾರಿಗಳು ಭಾಗವಹಿಸಿದ್ದರು. ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಳ ಹಿನ್ನೆಲೆ ವಿಧಾನಸೌಧ ಮತ್ತು ಬಹುಮಹಡಿ ಕಟ್ಟಡಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ಇದಲ್ಲದೆ, ಮುಖ್ಯಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದ್ದು, ವಿಡಿಯೋ ಕಾನ್ಫರೆನ್ಸ್ ನಡೆಸಲಾಗುವುದು. ಬೆಂಗಳೂರಿಗೆ ಸಂಬಂಧಿಸಿದ ಶಾಸಕರು ಮತ್ತು ಅಧಿಕಾರಿಗಳು ಸಿಎಂ ಜತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿಗೆ ಸಂಬಂಧಿಸಿದ ಕಠಿಣ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಕಲ್ಯಾಣ ಮಂಟಪ ಬುಕ್ ಮಾಡಲು ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ: ಕಲ್ಯಾಣ ಮಂಟಪವನ್ನು ಬುಕ್ ಮಾಡಲು ಆಯಾ ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಕಲ್ಯಾಣ ಮಂಟಪ ಬುಕಿಂಗ್ ಆಗಿದ್ರೆ ಸಮಸ್ಯೆ ಇಲ್ಲ. ಆದರೆ ಇಂದು ಸಂಜೆಯಿಂದ ಯಾರು ಛತ್ರ ಬುಕ್ ಮಾಡುತ್ತಾರೋ ಅಂತಹವರು ಜಿಲ್ಲಾಡಳಿತಗಳ ಅನುಮತಿ ಪಡೆದುಕೊಳ್ಳಬೇಕು. ಜನ ಪಾಲ್ಗೊಳ್ಳುವುದಕ್ಕೆ ನಿಗದಿತ ಸಂಖ್ಯೆಯ ಪಾಸ್ ವಿತರಣೆ ಮಾಡಲಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬರ್ತ್ಡೇ, ಧಾರ್ಮಿಕ ಕಾರ್ಯಕ್ರಮಗಳಿಗೂ ಇದು ಅನ್ವಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಕಂದಾಯ ಸಚಿವ ಆರ್ ಅಶೋಕ ಅವರು ಮಾತನಾಡಿ, ಮದುವೆ ಮನೆಗಳಲ್ಲಿ ಜನರನ್ನು ನಿಯಂತ್ರಿಸದೆ ಇದ್ದರೆ ಮದುವೆ ಮನೆಯವರ ವಿರುದ್ಧ FIR ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಎಲ್ಲರೂ ಕೊವಿಡ್ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ನಿಗದಿತ ಸಂಖ್ಯೆ ಜನರಿಗೆ ಮಾತ್ರ ಸಮಾರಂಭದಲ್ಲಿ ಅವಕಾಶ. ಆಯೋಜಕರು ನಿಗದಿತ ಸಂಖ್ಯೆಯಲ್ಲಿ ಪಾಸ್ ವಿತರಿಸಬೇಕು. ಒಂದು ವೇಳೆ ಹೆಚ್ಚುವರಿ ಪಾಸ್ ಕೊಟ್ಟಿದ್ದು ಕಂಡುಬಂದ್ರೆ ಅಂತಹ ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ ಸಚಿವ ಅಶೋಕ್ ಅವರು ಮದುವೆ ಮಾಡುವ ಕುಟುಂಬಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು.
ಇನ್ಮುಂದೆ ಜಾತ್ರೆಗಳು ನಡೆದರೆ ಅದಕ್ಕೆ ಡಿಸಿಗಳೇ ಹೊಣೆ ಇನ್ಮುಂದೆ ಜಾತ್ರೆಗಳು ನಡೆದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ. ಒಂದು ತಿಂಗಳು ಮೊದಲೇ ಸ್ಥಳ ಪರಿಶೀಲಿಸಿ ನಿರ್ಬಂಧಿಸಬೇಕು. ಸಂಬಂಧಪಟ್ಟ ವ್ಯಾಪ್ತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಭೆಯ ಬಳಿಕ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ.
ಕೆಲ ದೇಶಗಳಲ್ಲಿ ಈಗಾಗಲೇ 3ನೇ ಅಲೆ ಬಂದಿದೆ. ನಮ್ಮಲ್ಲಿ ವಿಕೋಪಕ್ಕೆ ಹೋಗದಂತೆ ತಡೆಯುವುದು ಅನಿವಾರ್ಯ. ಟೆಸ್ಟ್ ಮಾಡುವುದು, ಲಸಿಕೆ ಹಾಕುವ ಮೂಲಕ ನಿಯಂತ್ರಣ ಮಾಡಿಕೊಳ್ಳಬೇಕು. ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಕೊರೊನಾ ಪೀಡಿತರ ಚಿಕಿತ್ಸೆಗಾಗಿ ಹೆಚ್ಚುವರಿ ಬೆಡ್ಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಿದ ಸಚಿವ ಅಶೋಕ್, ಡಾಟಾ ಆಪರೇಟರ್ಗಳ ಕೊರತೆ ಆಗಬಾರದು. ಈಗಲೇ ನೇಮಕ ಮಾಡಿಕೊಳ್ಳುವಂತೆ ಡಿಸಿಗಳಿಗೆ ಹೇಳಿದ್ದೇವೆ. ಕೊವಿಡ್ ನಿರ್ವಹಣೆಗೆ ಏಪ್ರಿಲ್ 20ರಂದು ಜಿಲ್ಲೆಗಳಿಗೆ ಹಣ ರಿಲೀಸ್ ಮಾಡಲಾಗುವುದು. ಕೊವಿಡ್ನಿಂದ ಮೃತಪಟ್ಟರೆ ಗೌರವಯುತವಾಗಿ ಶವಸಂಸ್ಕಾರ ನಡೆಸಬೇಕು ಎಂದೂ ಸೂಚಿಸಿದ್ದಾರೆ.
7,500 ಆಕ್ಸಿಜನ್ ಸಿಲಿಂಡರ್ ಪೂರೈಕೆಗೆ ಕೇಂದ್ರಕ್ಕೆ ಬೇಡಿಕೆ: -ಡಾ.ಸುಧಾಕರ್
ಕೊರೊನಾ ಪೀಡಿತರ ಸುಸೂತ್ರ ಚಿಕಿತ್ಸೆಗಾಗಿ 7,500 ಆಕ್ಸಿಜನ್ ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರದ ಮುಂದೆ ನಾವು ಬೇಡಿಕೆ ಸಲ್ಲಿಸಿದ್ದೇವೆ. ಜಂಬೋ ಆಕ್ಸಿಜನ್ಗೆ ಬೇಡಿಕೆ ಇಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಎಚ್ಚೆತ್ತುಕೊಂಡ ರಾಜ್ಯ ಸರ್ಕಾರದಿಂದ ಇಲಾಖಾ ಸಭೆಗಳಿಗೆ ಕಡಿವಾಣ:
ತೀವ್ರಗೊಂಡ ಕೊರೊನಾ 2ನೇ ಅಲೆಯಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರದಿಂದ ಇಲಾಖಾ ಸಭೆಗಳಿಗೆ ಕಡಿವಾಣ ಹಾಕಲಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಅಧಿಕೃತ ಆದೇಶ ಹೊರಬಿದ್ದಿದೆ. ವಿವಿಧ ಇಲಾಖೆಗಳು 2 ತಿಂಗಳು ಸಭೆ ನಡೆಸದಂತೆ ಸೂಚಿಸಲಾಗಿದೆ. ಭೌತಿಕ ಸಭೆ ನಡೆಸದಂತೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೂಚನೆ ನೀಡಿದ್ದಾರೆ.
ಅಗತ್ಯವಿದ್ದರೆ ಮಾತ್ರ ದೈಹಿಕ ಅಂತರ ಕಾಪಾಡಿಕೊಂಡು ಸಭೆ ನಡೆಸಬೇಕು. ಇಲ್ಲವಾದರೆ ಎರಡು ತಿಂಗಳವರೆಗೆ ವಿಡಿಯೋ ಕಾನ್ಫರೆನ್ಸ್ ಮಾತ್ರ ನಡೆಯಲಿ. ವರ್ಚುವಲ್ ಮೂಲಕ ಸಭೆ ನಡೆಸುವಂತೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. (Dc permission must to book choultry Karnataka government announces Covid 19 containment norms)
Published On - 2:52 pm, Sat, 17 April 21