ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ತನಿಖೆ ಮುಂದುವರಿಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಎಸ್ಐಟಿ ಕಾನೂನುಬದ್ಧತೆಯನ್ನೇ ಅರ್ಜಿದಾರರ ಪರ ವಕೀಲರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಎ.ಎಸ್.ಒಕಾ ಅವರು ನೀವು ಆರೋಪಿಗಳ ಪರವಾಗಿ ವಾದಿಸುತ್ತಿದ್ದೀರಾ? ಮೂರು ದೂರುಗಳನ್ನು ಆಧರಿಸಿ ತನಿಖೆ ನಡೆಯುತ್ತಿದೆ. ಒಳ್ಳೆಯ ತನಿಖೆ ನಡೆಯುವುದು ನಿಮಗೆ ಬೇಕಿಲ್ಲವೇ? ಎಂದು ಅರ್ಜಿದಾರ ವಕೀಲರನ್ನು ಹೈಕೋರ್ಟ್ ಪ್ರಶ್ನಿಸಿತು.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್ಐಟಿ ಹೈಕೋರ್ಟ್ ಗೆ ತನಿಖಾ ಪ್ರಗತಿ ವರದಿ ಸಲ್ಲಿಸಿದೆ. ಎಸ್ಐಟಿ ಯ ಕಾನೂನು ವ್ಯಾಪ್ತಿ ಪ್ರಶ್ನಿಸಿ ಗೀತಾ ಮಿಶ್ರಾ, ಸಿಬಿಐ ತನಿಖೆ ಕೋರಿ ವಕೀಲ ಉಮೇಶ್ ಪಿಐಎಲ್ ಸಲ್ಲಿಸಿದ್ದರು. ಹೈಕೋರ್ಟ್ ಗೆ ಸಲ್ಲಿಕೆಯಾದ ತನಿಖಾ ಪ್ರಗತಿ ವರದಿಯನ್ನು ಪರಿಶೀಲಿಸಿದ ವಿಭಾಗೀಯ ಪೀಠ ಅದನ್ನು ಮತ್ತೆ ಸೀಲ್ ಮಾಡಿಸಲು ಸೂಚಿಸಿದೆ.
ರಮೇಶ್ ಜಾರಕಿಹೊಳಿ ಪತ್ರ ಆಧರಿಸಿ ಎಸ್ಐಟಿ ರಚಿಸಲಾಗಿದೆ. ಕೇವಲ ವರದಿ ನೀಡಲು ಎಸ್ಐಟಿ ರಚಿಸಲಾಗಿದೆ. ಹೀಗಾಗಿ ಎಸ್ಐಟಿ ಕಾನೂನುಬದ್ಧತೆಯನ್ನೇ ಅರ್ಜಿದಾರರ ಪರ ವಕೀಲರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಎ.ಎಸ್.ಒಕಾ ಅವರು ನೀವು ಆರೋಪಿಗಳ ಪರವಾಗಿ ವಾದಿಸುತ್ತಿದ್ದೀರಾ? ಮೂರು ದೂರುಗಳನ್ನು ಆಧರಿಸಿ ತನಿಖೆ ನಡೆಯುತ್ತಿದೆ. ಒಳ್ಳೆಯ ತನಿಖೆ ನಡೆಯುವುದು ನಿಮಗೆ ಬೇಕಿಲ್ಲವೇ? ಎಂದು ಅರ್ಜಿದಾರ ಗೀತಾ ಮಿಶ್ರಾ ಪರ ವಕೀಲರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಜಿ.ಆರ್.ಮೋಹನ್, ಕೋರ್ಟ್ ನಿಗಾದಲ್ಲಿ ತನಿಖೆ ನಡೆದರೆ ಎಸ್ಐಟಿ ಬಗ್ಗೆ ಆಕ್ಷೇಪವಿಲ್ಲ. ಆದರೆ ಆರೋಪಿ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಕರೆದಿಲ್ಲವೆಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ತನಿಖೆ ಪೂರ್ಣಗೊಳ್ಳುವ ಮೊದಲೇ ನೀವು ನಿರ್ಣಯಿಸುವುದು ಸರಿಯಲ್ಲ. ಎಸ್ಐಟಿ ತನಿಖೆ ಮುಂದುವರಿಸಲಿ ಎಂದ ನ್ಯಾಯ ಪೀಠವು ಮೇ 31 ಕ್ಕೆ ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಿದೆ.
ಅಲ್ಲದೇ ಎಸ್ಐಟಿ ವರದಿಯನ್ನು ಮತ್ತೆ ಸೀಲ್ ಮಾಡಿಡುವಂತೆಯೂ ಸೂಚನೆ ನೀಡಿದೆ. ಈ ವೇಳೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಅರ್ಜಿದಾರರ ಮನವಿಗೆ ಪ್ರತಿಕ್ರಿಯಿಸಿದ ಹೈಕೋರ್ಟ್ ಕಾನೂನಿನ ಯಾವ ಅಂಶಗಳನ್ನು ಉಲ್ಲಂಘಿಸಲಾಗಿದೆ. ಖಾಸಗಿ ಚಾನಲ್ ಗಳಿಗೆ ಈ ಬಗ್ಗೆ ನಿರ್ದೇಶಿಸಲು ಸಾಧ್ಯವೇ? ಎಂಬ ಬಗ್ಗೆ ಕಾನೂನಿನ ಉಲ್ಲೇಖಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
(Ramesh jarkiholi cd case karnataka high court asks sit team to continue the investigation)
Published On - 1:50 pm, Sat, 17 April 21