ಗಂಭೀರ ಸೋಂಕಿತರಿಗೆ ಬೆಡ್‌ ಒದಗಿಸುವ ಉದ್ದೇಶದಿಂದ ಸ್ಟೆಪ್​​ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ: ಡಾ.ಅಶ್ವತ್ಥನಾರಾಯಣ

|

Updated on: May 10, 2021 | 5:49 PM

ಸ್ಯಾಂಪಲ್‌ ಕಲೆಕ್ಟ್‌ ಮಾಡಿದ ಒಂದು ದಿನದೊಳಗೆ ವರದಿ ಕೊಡುವುದಕ್ಕೆ ಇರುವ ಅಡ್ಡಿಗಳನ್ನು ನಿವಾರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ. ತಡವಾಗಿ ರಿಸಲ್ಟ್ ಕೊಡುವ ಲ್ಯಾಬ್‌ಗಳಿಗೆ ಪ್ರತಿ ಟೆಸ್ಟ್‌ಗೆ 150 ರೂಪಾಯಿ ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಗಂಭೀರ ಸೋಂಕಿತರಿಗೆ ಬೆಡ್‌ ಒದಗಿಸುವ ಉದ್ದೇಶದಿಂದ ಸ್ಟೆಪ್​​ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ: ಡಾ.ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ
Follow us on

ಬೆಂಗಳೂರು: ಆಮ್ಲಜನಕ, ರೆಮಿಡಿಸಿವಿರ್ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿರುವ ಸರಕಾರಿ ಬೆಡ್‌ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್‌ (sast) ಪೋರ್ಟಲ್​ನಲ್ಲಿ ಸಿಗುವ ಹಾಗೆ ಮಾಡಲಾಗುವುದು ಎಂದು ರಾಜ್ಯ ಕೊವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಕೊವಿಡ್‌ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಆಮ್ಲಜನಕ ಮತ್ತು ರೆಮಿಡಿಸಿವಿರ್ ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಎಷ್ಟು ಪೂರೈಕೆ ಆಗುತ್ತಿದೆ? ಎಷ್ಟು ಬಳಕೆಯಾಗುತ್ತಿದೆ? ಯಾರಿಗೆ ಕೊಡಲಾಗಿದೆ? ಎಂಬ ಸಮಗ್ರ ಮಾಹಿತಿಯನ್ನು ಇದೇ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಈಗ ಪ್ರತೀದಿನ 35,000 ರೆಮಿಡಿಸಿವಿರ್ ಡೋಸ್‌ ಬೇಕಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಕ್ಸಿಜನ್‌ ಬೆಡ್‌ಗಳಿಗೆ ಭಾರೀ ಬೇಡಿಕೆ ಇದೆ. ಸರಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಸರಕಾರದ ಬೆಡ್‌ಗಳ ಮಾಹಿತಿಯನ್ನು ಕೂಡ ಈ ಪೋರ್ಟಲ್​ನಲ್ಲಿ ಹಾಕಲಾಗುವುದು. ಇದರಿಂದ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಬರುತ್ತದೆ. ಜತೆಗೆ ಸಾರ್ವಜನಿಕರಿಗೂ ವಾಸ್ತವ ಚಿತ್ರಣ ಸಿಗುವಂತಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ.

ಇನ್ನು ಎರಡು-ಮೂರು ದಿನಗಳಲ್ಲೇ ಸಾಸ್ಟ್ ಪೋರ್ಟ್‌ಲ್‌ಗೆ (http://arogya.karnataka.gov.in/) ಮೇಲೆ ತಿಳಿಸಿದ ಎಲ್ಲವನ್ನೂ ಲಿಂಕ್‌ ಮಾಡಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು.

24 ಗಂಟೆ ಒಳಗೇ ರಿಸಲ್ಟ್‌ ಮತ್ತು ಬಿಯು ನಂಬರ್:
ಬೆಂಗಳೂರಿನಲ್ಲಿ ಈಗ ಪರೀಕ್ಷೆಯಾದ 24 ಗಂಟೆ ಒಳಗೇ ಫಲಿತಾಂಶ ಬಂದು ಬಿಯು ನಂಬರ್‌ ಜನರೇಟ್‌ ಆಗುತ್ತದೆ. ರಾಜ್ಯದ ಉದ್ದಗಲಕ್ಕೂ ಹೀಗೆಯೇ ಆಗಬೇಕು. ರಾಜ್ಯದ ಸರಾಸರಿ ಪರಿಸ್ಥಿತಿ ನೋಡಿದರೆ ಫಲಿತಾಂಸ ಬರಲು ನಾಲ್ಕೂವರೆ ದಿನದಿಂದ ಎರಡು ದಿನವಾಗುತ್ತಿದೆ. ಫಲಿತಾಂಶ ವಿಳಂಬದಿಂದ ಸೋಂಕು ಉಲ್ಬಣಿಸಿ ಹೆಚ್ಚು ಪ್ರಾಣನಷ್ಟ ಆಗುತ್ತಿದೆ ಎಂದು ಡಿಸಿಎಂ ಕಳವಳ ವ್ಯಕ್ತಪಡಿಸಿದರು.

ಸ್ಯಾಂಪಲ್‌ ಕಲೆಕ್ಟ್‌ ಮಾಡಿದ ಒಂದು ದಿನದೊಳಗೆ ವರದಿ ಕೊಡುವುದಕ್ಕೆ ಇರುವ ಅಡ್ಡಿಗಳನ್ನು ನಿವಾರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ. ತಡವಾಗಿ ರಿಸಲ್ಟ್ ಕೊಡುವ ಲ್ಯಾಬ್‌ಗಳಿಗೆ ಪ್ರತಿ ಟೆಸ್ಟ್‌ಗೆ 150 ರೂಪಾಯಿ ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಬೆಡ್‌ಗೆ ಬೇಡಿಕೆ ಹೆಚ್ಚಾಗಿದೆ:
ಬೆಂಗಳೂರಿನಲ್ಲಿ ಈಗ ಬೆಡ್ ಖಾಲಿ ಆಗುತ್ತಿರುವುದು ದಿನಕ್ಕೆ 950 ಮಾತ್ರ. ಆದರೆ 7000 ದಿಂದ 8000 ಬೆಡ್‌ಗಳಿಗೆ ಬೇಡಿಕೆ ಬರುತ್ತಿದೆ. ಇಷ್ಟು ಸೋಂಕಿತರಲ್ಲಿ ಟ್ರಾಯಾಜ್ (ವೈದ್ಯರ ಪರಿಶೀಲನೆ) ಆದ ಮೇಲೆ ಆಸ್ಪತ್ರೆಗೆ ಸೇರಬೇಕಾದವರೇ 2000ಕ್ಕೂ ಹೆಚ್ಚು ಜನ ಇದ್ದಾರೆಂದು ಡಿಸಿಎಂ ಮಾಹಿತಿ ನೀಡಿದರು.

ಬೆಡ್‌ ಬೇಡಿಕೆ ನಿಭಾಯಿಸಲು ಸಮರ್ಪಕ ಟ್ರಾಯಾಜಿಂಗ್ ಮಾಡಬೇಕು. ಬೆಂಗಳೂರಿನಲ್ಲಿ ಎಲ್ಲಾ ವಾರ್ಡ್ ಮಟ್ಟದಲ್ಲಿಯೂ ಟ್ರಾಯಾಜಿಂಗ್ ಮಾಡಿ ಅರ್ಹರಿಗಷ್ಟೇ ಆಸ್ಪತ್ರೆಗೆ ಸೇರಿಸುವ ಅವಕಾಶ ಕಲ್ಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೆಲ ಕಡೆ ವೈಯಕ್ತಿಕ ಟ್ರಾಯಾಜಿಂಗ್ ಆರಂಭವಾಗಿದೆ. ಒಂದೊಂದು ಕಡೆಯೂ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಗಂಭೀರ ಸೋಂಕಿತರಿಗೆ ಬೆಡ್‌ ಒದಗಿಸುವ ಉದ್ದೇಶದಿಂದ ಸ್ಟೆಪ್​​ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸ್ಟೆಪ್​​ಡೌನ್ ಆಸ್ಪತ್ರೆ ಮತ್ತು ಕೊವಿಡ್‌ ಕೇರ್‌ ಕೇಂದ್ರಗಳಲ್ಲಿ ಟ್ರಾಯಾಜಿಂಗ್, ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಗಂಭೀರವಲ್ಲದ ಸೋಂಕಿತರಿಗೆ ಇಲ್ಲಿಯೇ ಚಿಕಿತ್ಸೆ ಕೋಡಲಾಗುವುದು ಎಂದು ಡಿಸಿಎಂ ತಿಳಿಸಿದರು.

20,000 ಬೆಡ್‌ ಹೆಚ್ಚಳ:
ರಾಜ್ಯಾದ್ಯಂತ ಐಸಿಯು ಮತ್ತು ಆಕ್ಸಿಜನ್‌ ಬೆಡ್‌ಗಳನ್ನು ಹೆಚ್ಚಿಸಲಾಗುತ್ತಿದೆ. ಬೆಂಗಳೂರಿನಲ್ಲಿ 4000 ಬೆಡ್‌ಗಳು ಸೇರಿದಂತೆ ರಾಜ್ಯದ ಉದ್ದಗಲಕ್ಕೂ 20,000 ಬೆಡ್‌ಗಳನ್ನು ಹೆಚ್ಚಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ರಾಜ್ಯಕ್ಕೆ 1200 ಮೆ.ಟನ್‌ ಆಮ್ಲಜನಕ ಹಂಚಿಕೆಯಾದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಡಾ.ಅಶ್ವತ್ಥನಾರಾಯಣ ವಿವರಿಸಿದರು.

ಹೆಚ್ಚು ದರ ಸುಲಿಗೆ ಮಾಡಿದರೆ ಕ್ರಮ:
ಹೋಮ್‌ ಐಸೋಲೇಷನ್‌ ಪ್ರಮಾಣ ಹೆಚ್ಚುತ್ತಿರುವುದರಿಂದ ಪಲ್ಸಾಸ್ಕೋಮೀಟರ್‌ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಲಾಗುತ್ತಿದೆ ಎಂಬ ಮಾಹಿತಿ ಸರಕಾರಕ್ಕೆ ಬಂದಿದೆ. ಮೆಡಿಕಲ್‌ ಸ್ಟೋರ್‌ಗಳು ಆಗಿರಲಿ ಅಥವಾ ಇನ್ನು ಯಾರೆ ಆಗಿರಲಿ ಎಂಆರ್‌ಪಿಗಿಂತ ಹೆಚ್ಚು ಬೆಲೆಗೆ ಮಾರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದು ಪ್ರತಿ ರೆಮಿಡಿಸಿವರ್‌ ಸೇರಿ ಪ್ರತಿಯೊಂದು ಔಷಧಕ್ಕೂ ಅನ್ವಯ ಆಗುತ್ತದೆ. ಜನರು 112 ಹೆಲ್ಪ್‌ಲೈನ್‌ ಕರೆ ಮಾಡಿದರೆ ಅಂಥ ತಪ್ಪಿತಸ್ಥರನ್ನೂ ಕೂಡಲೇ ಬಂಧಿಸಲಾಗುವುದು. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಶಿಕ್ಷೆಗೊಳಪಡಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಸರಕಾರವು ದೊಡ್ಡ ಪ್ರಮಾಣದಲ್ಲಿ ಪಲ್ಸಾಸ್ಕೋಮೀಟರ್‌ಗಳನ್ನು ಖರೀದಿ ಮಾಡುತ್ತಿದೆ. ಪ್ರತೀ ಒಂದನ್ನು 350 ರೂಪಾಯಿಯಂತೆ ಕೊಡಲಾಗುತ್ತಿದೆ. ಹೀಗಿದ್ದರೂ ಜನರ ಅಗತ್ಯಕ್ಕಾಗಿ ಸರಕಾರ ಹೆಚ್ಚು ಪ್ರಮಾಣದಲ್ಲಿ ಕೊಳ್ಳುತ್ತಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಡಿಸಿಎಂ ವಾರ್‌ ರೂಂಗೆ ಭೇಟಿ ನೀಡಿದ ವೇಳೆ ಮುಖ್ಯಮಂತ್ರಿಗಳ ಕಾರ್ಯನೀತಿ ಸಲಹೆಗಾರ ಪ್ರಶಾಂತ್‌ ಪ್ರಕಾಶ್‌,
ಹಿರಿಯ ಐಎಎಸ್ ಅಧಿಕಾರಿಗಳಾದ ಪೊನ್ನುರಾಜ್‌, ಮೌನಿಷ್‌ ಮುದ್ಗಲ್‌, ಪ್ರದೀಪ್, ಅರುಂಧತಿ ಚಂದ್ರಶೇಖರ್‌, ಗಿರಿಗೌಡ, ಸಾಸ್ಟ್ ಪೋರ್ಟ್‌ಲ್‌ ಕಾರ್ಯನಿರ್ವಾಹಕ ನಿರ್ದೇಶಕಿ ಎನ್.ಟಿ. ಅಬ್ರು, ಕೆಎಎಸ್ ಅಧಿಕಾರಿ ರಾಜೇಂದ್ರ ಕುಮಾರ ಮತ್ತಿತರರು ಜತೆಗೆ ಇದ್ದರು.

ಇದನ್ನೂ ಓದಿ:

ಅತಿ ಹೆಚ್ಚು ರೆಮ್​ಡೆಸಿವಿರ್ ಔಷಧ ಸಿಗುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ; ಡಿಸಿಎಂ ಅಶ್ವತ್ಥ ನಾರಾಯಣ

Published On - 5:31 pm, Mon, 10 May 21