ಬಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ಆಗರ; ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಡಿಸಿಎಂ ಸವದಿ
ಬಿಮ್ಸ್ನ ಕೊವಿಡ್ ವಾರ್ಡ್ ಸ್ಥಿತಿ ಕಂಡು ಡಿಸಿಎಂ ಲಕ್ಷ್ಮಣ ಸವದಿ ದಿಗ್ಬ್ರಾಂತರಾಗಿದ್ದಾರೆ. ಇದೇನು ಆಸ್ಪತ್ರೆಯೇ? ಎಂದು ಬಿಮ್ಸ್ ನಿರ್ದೇಶಕರಿಗೆ ಪ್ರಶ್ನಿಸಿದ್ದಾರೆ. ದನದ ಕೊಟ್ಟಿಗೆ ಇದಕ್ಕಿಂತಲೂ ಚೆನ್ನಾಗಿರುತ್ತೆ ಎಂದು ಗರಂ ಆಗಿದ್ದಾರೆ.
ಬೆಳಗಾವಿ: ಜಿಲ್ಲೆಯ ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಬಿಮ್ಸ್ ಆಸ್ಪತ್ರೆ ಅಧಿಕಾರಿಗಳ ನಡುವೆ ಹೊಂದಾಣಿಕೆಯೇ ಕಂಡು ಬರುತ್ತಿಲ್ಲ. ಅಧಿಕಾರಿಗಳ ಆಂತರಿಕ ಕಿತ್ತಾಟದಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ, ರೋಗಿಗಳನ್ನು ಕೇಳೋರೇ ಇಲ್ಲದಂತಾಗಿದೆ. ಸದ್ಯ ಬಿಮ್ಸ್ ಆಸ್ಪತ್ರೆಗೆ ಡಿಸಿಎಂ ಲಕ್ಷ್ಮಣ ಸವದಿ ಭೇಟಿ ನೀಡಿದ್ದು ಅಲ್ಲಿನ ಪರಿಸ್ಥಿತಿ ಗಮನಿಸಿ ಬಿಮ್ಸ್ ಆಸ್ಪತ್ರೆಯ ವಿವಿಧ ಭಾಗಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಬಿಮ್ಸ್ನ ಕೊವಿಡ್ ವಾರ್ಡ್ ಸ್ಥಿತಿ ಕಂಡು ಡಿಸಿಎಂ ಲಕ್ಷ್ಮಣ ಸವದಿ ದಿಗ್ಬ್ರಾಂತರಾಗಿದ್ದಾರೆ. ಇದೇನು ಆಸ್ಪತ್ರೆಯೇ? ಎಂದು ಬಿಮ್ಸ್ ನಿರ್ದೇಶಕರಿಗೆ ಪ್ರಶ್ನಿಸಿದ್ದಾರೆ. ದನದ ಕೊಟ್ಟಿಗೆ ಇದಕ್ಕಿಂತಲೂ ಚೆನ್ನಾಗಿರುತ್ತೆ ಎಂದು ಗರಂ ಆಗಿದ್ದಾರೆ. ದನದ ಕೊಟ್ಟಿಗೆಗಿಂತಲೂ ಈ ಕೊವಿಡ್ ವಾರ್ಡ್ ಕೆಟ್ಟದಾಗಿದೆ ಎಂದು ಡಿಸಿಎಂ ಕಿಡಿಕಾರಿದ್ದಾರೆ. ಬಿಮ್ಸ್ ಆಸ್ಪತ್ರೆಯ ಕೊವಿಡ್ ವಾರ್ಡ್ ಸ್ಥಿತಿ ಕಂಡು ಬಿಮ್ಸ್ ನಿರ್ದೇಶಕ ವಿನಯ್ ದಾಸ್ತಿಕೊಪ್ಪಗೆ ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಾದ ಬಳಿಕ ಅಧಿಕಾರಿಗಳ ಜೊತೆ ಸವದಿ ಸಭೆ ನಡೆಸಿದ್ರು. ಸಭೆಯಲ್ಲಿ ಡಿಸಿಎಂ ಮುಂದೆ ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಅಳಲು ತೋಡಿಕೊಂಡಿದ್ದಾರೆ. ಹಿರಿಯ ವೈದ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರ ಅಸಹಕಾರ ಬಗ್ಗೆ ಮಾಹಿತಿ ನೀಡಿದ್ದಾರೆ. ಮೂವರು ವೈದ್ಯರು ಬಿಟ್ಟರೆ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಯಾವ ವೈದ್ಯರೂ ಹೋಗುವುದಿಲ್ಲ. ಯಾವ ವೈದ್ಯರೂ ಸಹಕಾರ ನೀಡುವುದಿಲ್ಲ. ನೀವು ನನ್ನನ್ನು ಸಸ್ಪೆಂಡ್ ಮಾಡ್ತೀರಾ, ವರ್ಗಾವಣೆ ಮಾಡ್ತೀರಾ ಮಾಡಿ ಸಾರ್ ಎಂದು ಅಳಲು ತೋಡಿಕೊಂಡಿದ್ದಾರೆ.
ಬಳಿಕ ಎಲ್ಲ ವೈದ್ಯರಿಗೆ ಡಿಸಿಎಂ ಸವದಿ ಸೂಚನೆ ನೀಡಿದ್ರು. ಸಸ್ಪೆಂಡ್, ವರ್ಗಾವಣೆಯಿಂದ ಪ್ರಯೋಜನವಿರುವುದಿಲ್ಲ. ಸಮಸ್ಯೆ ಬಗೆ ಹರಿಯುವುದಿಲ್ಲ. ಎಲ್ಲರೂ 3 ಪಾಳಿಯಲ್ಲಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದ್ರು. ಇದೇ ವೇಳೆ ಬಿಮ್ಸ್‌ನ ವಿವಿಧ ಭಾಗಗಳ ಮುಖ್ಯಸ್ಥರಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ‘ವೈದ್ಯಕೀಯ ಮನೋಧರ್ಮ ಮರೆಯಬೇಡಿ’ ಎಂದು ಕೈ ಮುಗಿದು ಮನವಿ ಮಾಡಿಕೊಂಡ್ರು.
ಇನ್ನು ಸವದಿ ಎಲ್ಲಾ ವಾರ್ಡ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕ್ರಮ ಕೈಗೊಳ್ಳಲು ಡಿಸಿಗೆ ಸೂಚನೆ ನೀಡಿದ್ದಾರೆ. ಈ ಹಿಂದೆ ಬಿಮ್ಸ್ ಅವ್ಯವಸ್ಥೆ ಬಗ್ಗೆ ಬೆಳಗಾವಿ ಜಿಲ್ಲೆಯ ಹಲವು ಜನಪ್ರತಿನಿಧಿಗಳು ದೂರು ನೀಡಿದ್ದರು. ಹಾಗೂ ಬಿಮ್ಸ್‌ನಲ್ಲಿ ಮೂರು ಗುಂಪುಗಳಿವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ ಮಾಡಿದ್ದರು.
ಇದನ್ನೂ ಓದಿ: ಒಂದೇ ಆ್ಯಂಬುಲೆನ್ಸ್ನಲ್ಲಿ 12 ಸೋಕಿಂತರ ಸ್ಥಳಾಂತರ; ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಜನರ ಆಕ್ರೋಶ