ಕಲುಷಿತ ನೀರು ಸೇವಿಸಿ ಮೃತಪಟ್ಟ ಪ್ರಕರಣ: ವಿಶೇಷ ತಂಡ ರಚಿಸಿದ ಸರ್ಕಾರ
ರಾಜ್ಯದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿರುವ ಹಿನ್ನಲೆ ಪ್ರಕರಣಗಳ ತನಿಖೆ ನಡೆಸಲು ಮೂವರ ಅಧಿಕಾರಗಳ ತಂಡ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಕಲುಷಿತ ನೀರು (Contaminated water) ಸೇವಿಸಿ ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿರುವ ಹಿನ್ನಲೆ ಪ್ರಕರಣಗಳ ತನಿಖೆ ನಡೆಸಲು ಮೂವರ ಅಧಿಕಾರಿಗಳ ತಂಡ ರಚಿಸಿ ಸರ್ಕಾರ (Government) ಆದೇಶ ಹೊರಡಿಸಿದೆ. ಕೊಪ್ಪಳದ ಬಸರಿಹಾಳ, ಕುಷ್ಠಗಿಯ ಬಿಜಕಲ್ ಗ್ರಾಮದ ವಾಂತಿ ಭೇದಿ ಪ್ರಕರಣ ಮತ್ತು ದೇವದುರ್ಗದ ರೇಕಲಮಡಿಯಲ್ಲಿ ಕಲುಷಿತ ನೀರು ಸೇವಿಸಿ ಮಗು ಸಾವನ್ನಪ್ಪಿತ್ತು. ಐಎಎಸ್ ಅಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆಯುಕ್ತರು ಪಂಚಾಯತ್ ರಾಜ್ ಇಲಾಖೆ ಆಯುಕ್ತಾಲಯ, ಚಂದ್ರಹಾಸ್ ಅಧೀಕ್ಷಕ ಅಭಿಯಂತರರು, ಬಿ.ಆರ್. ವೆಂಕಟೇಶ್ ರಾಜತಾಂತ್ರಿಕ ಸಮಾಲೋಚಕರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ. 3 ಅಧಿಕಾರಗಳ ತಂಡ ಕೂಲಂಕುಷವಾಗಿ ತನಿಖೆ ನಡೆಸಿ ಇದೇ ತಿಂಗಳು 20ರೊಳಗೆ ವರದಿ ನೀಡುವಂತೆ ಸೂಚಿಸಿದೆ.
ಅನಾಹುತ ಮರುಕಳಿಸಿದರೆ ಸಿಇಒ ಸಸ್ಪೆಂಡ್ – ಸಿದ್ದರಾಮಯ್ಯ ಖಡಕ್ ವಾರ್ನಿಂಗ್
ಕಳೆದ ಕೆಲವು ದಿನಗಳಿಂದ ಕಲುಷಿತ ನೀರು ಸೇವಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವರು ಅನಾರೋಗ್ಯದಿಂದ ಬಳಲಿದರು. ಈ ಸಂಬಂಧ ಜೂನ್ 12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳಿಗೆ ಘಟನೆಗಳ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು.
ಇದನ್ನೂ ಓದಿ: ಕಲುಷಿತ ನೀರು ಪ್ರಕರಣ, ತಾಲೂಕಿಗೊಬ್ಬರು ನೋಡಲ್ ಅಧಿಕಾರಿ ನೇಮಿಸುವಂತೆ ಶಿವರಾಜ ತಂಗಡಗಿ ಸೂಚನೆ
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಪ್ರಕರಣ ಮರುಕಳಿಸಿದರೆ ಜಿಲ್ಲಾ ಪಂಚಾಯಿತಿ ಸಿಇಒ ಹೊಣೆ ಎಂದು ಎಚ್ಚರಿಕೆ ನೀಡಿದ್ದರು. ಹಾಗೂ ನೀವು ಜನರನ್ನು ಸಾಯಿಸಲು ಇರೋದಾ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಈ ವೇಳೆ ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೊಪ್ಪಳ ಜಿ.ಪಂ. ಸಿಇಒಗೆ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದರು. ಕಳಪೆ ಕಾಮಗಾರಿಯೇ ಕಲುಷಿತ ನೀರಿಗೆ ಕಾರಣ. ಮತ್ತೆ ಈ ರೀತಿಯ ಅನಾಹುತ ಮರುಕಳಿಸಿದರೆ ಕೊಪ್ಪಳ ಜಿ.ಪಂ. ಸಿಇಒ ನೇರಹೊಣೆಯಾಗುತ್ತಾರೆ. ಸಿಇಒ ಅಮಾನತು ಮಾಡುವುದಾಗಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು.
ಮೊದಲ ಅನಾಹುತ ಸಂಭವಿಸಿದಾಗಲೇ ಯಾಕೆ ಎಚ್ಚೆತ್ತುಕೊಳ್ಳಲಿಲ್ಲ? ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಅಧ್ಯಯನ ನಡೆಸಿ. ಮತ್ತೆ ಕಲುಷಿತ ನೀರಿನ ಅನಾಹುತವಾದರೇ ನೀವೇ ಹೊಣೆ ಆಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು. ಇನ್ನು ಈ ಬಗ್ಗೆ ತನಿಖೆ ನಡೆಸುವಂತೆ ಸಿಎಸ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:01 am, Sun, 18 June 23