Karnataka High Court: ಕರ್ನಾಟಕ ಹೈಕೋರ್ಟ್ನ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ; ಪಾಕಿಸ್ತಾನ ಕೈವಾಡವೇ?
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಬಂದಿದ್ದು, ಈ ಸಂಬಂಧ ಬೆಂಗಳೂರಿನ ಸೆಂಟ್ರಲ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು, ಜುಲೈ 24: ಕರ್ನಾಟಕ ಹೈಕೋರ್ಟ್ನ (Karnataka High Court) 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ (Death Threat) ಸಂದೇಶ ಬಂದಿದ್ದು, ಪಾಕಿಸ್ತಾನ ಮೂಲದ ಉಗ್ರರ ಕೈವಾಡವೇ ಎಂಬ ಶಂಕೆ ವ್ಯಕ್ತವಾಗಿದೆ. ಹಣಕ್ಕಾಗಿ ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳು, ಇದನ್ನು ಈಡೇರಿಸದಿದ್ದರೆ ಕೊಲೆ ದುಬೈ ಗ್ಯಾಂಗ್ನಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಹೈಕೋರ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಮುರಳೀಧರ್ಗೆ ಸಂದೇಶ ಬಂದಿದೆ.
50 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದ್ದು, ಪಾಕಿಸ್ತಾನ ಮೂಲದ ಬ್ಯಾಂಕ್ ಖಾತೆ ನಂಬರ್ ನೀಡಿದ್ದಾರೆ. ಅಲೈಡ್ ಬ್ಯಾಂಕ್ ಲಿಮಿಟೆಡ್ನ ಖಾತೆಯ ಸಂಖ್ಯೆಯನ್ನು ದುಷ್ಕರ್ಮಿಗಳು ನೀಡಿದ್ದಾರೆ. ಕೊಲೆ ಮಾಡಿಸುವುದಾಗಿ ವಾಟ್ಸ್ಆ್ಯಪ್ ಮೂಲಕವೂ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಬೆದರಿಕೆ ಸಂಬಂಧ ಸೆಂಟ್ರಲ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಾಟ್ಸ್ಆ್ಯಪ್ ಸಂದೇಶದ ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ಸೂಚನೆ
ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷ, ಸದಸ್ಯರ ನೇಮಕ ವಿಚಾರವಾಗಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಹಲವು ದಿನಗಳಿಂದ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಹುದ್ದೆ ಖಾಲಿಯಿದೆ. 2 ವಾರಗಳಲ್ಲಿ ನೇಮಕಾತಿ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ವಿಭಾಗೀಯ ಪೀಠ ಸೂಚನೆ ನೀಡಿದೆ.
ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಅಧಿಕಾರಿ ಹಾಜರಿರಬೇಕು. ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ಪೀಠ ಸೂಚನೆ ನೀಡಿದೆ. ಸುಧಾ ಕಾಟ್ವಾ ಎಂಬುವರು ಪಿಐಎಲ್ ಸಲ್ಲಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Mon, 24 July 23