ಸಿಬಿಐ ತನಿಖೆಯ ಅಗತ್ಯವೇನಿತ್ತು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನೆ

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದೆ ಬುಧವಾರ 4 ಗಂಟೆಗೆ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಬಿಐ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಹೇಳಿದರು.

ಸಿಬಿಐ ತನಿಖೆಯ ಅಗತ್ಯವೇನಿತ್ತು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನೆ
Updated By: ganapathi bhat

Updated on: Nov 25, 2020 | 6:25 PM

ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದೆ ಬುಧವಾರ 4 ಗಂಟೆಗೆ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಬಿಐ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಹೇಳಿದರು.

‘ನನ್ನ ಮಗಳ ನಿಶ್ಚಿತಾರ್ಥದ ದಿನದಂದು ಸಿಬಿಐ ನನಗೆ ಸಮಸ್ಸ್ ನೀಡಲು ಬಂದಿತ್ತು, ಆ ದಿನದಂದು ತನಿಖೆಗೆ ನಾನು ಸಿಗಲಿಲ್ಲ. ಈ ಕಾರಣಕ್ಕಾಗಿ ಸಿಬಿಐ ನವೆಂಬರ್ 23ಕ್ಕೆ ಹಾಜರಾಗುವಂತೆ ತಿಳಿಸಿತ್ತು, ಆದರೆ ಅಂದು ನಾನು ಮಸ್ಕಿಗೆ ಪೂರ್ವ ನಿರ್ಧಾರಿತ ಪ್ರವಾಸವನ್ನು ಕೈಗೊಂಡಿದ್ದರಿಂದ ತನಿಖೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಹೀಗಾಗಿ ಇಂದು (ನ.25) ಹಾಜರಾಗುತ್ತಿದ್ದೇನೆ’ ಎಂದು ಡಿಕೆಶಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಾಟೀಲ್ ಅವರಿಗೆ ಅಂತಿಮ ನಮನ ಸಲ್ಲಿಸಲು ಹೋಗುವ ಯೋಜನೆ ಇತ್ತು, ಆದರೆ ಸಿಬಿಐ ತನಿಖೆಗೆ ಹಾಜರಾಗುವುದಾಗಿ ಮೊದಲೇ ತಿಳಿಸಿದ್ದೆ. ತನಿಖೆಯ ನಂತರ ವಡೋದರಾಕ್ಕೆ ಪ್ರಯಾಣಿಸುತ್ತೇನೆ. ಜಾರಿ ನಿರ್ದೇಶನಾಲಯ ಮತ್ತು (ಇಡಿ) ಮತ್ತು ಆದಾಯ ತೆರಿಗೆ ಅಧಿಕಾರಿಗಳೊಂದಿಗೂ ತನಿಖೆಗೆ ಸಹಕರಿಸುತ್ತೇನೆ’ ಎಂದು ತಿಳಿಸಿದರು.

ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ತನಿಖೆಗೆ ಕರೆದಿದ್ದಾರೆ. ಅಧಿಕಾರಿಗಳ ಮೇಲೆ ಯಾವ ಬೇಸರವೂ ಇಲ್ಲ. ಅವರು ತಮ್ಮ ಕರ್ತವ್ಯ ಪಾಲಿಸುತ್ತಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ನಾನು ಹಾಜರಾಗುತ್ತೇನೆ. ಆದರೆ ಯಾವ ರಾಜಕಾರಣಿ ಸಿಬಿಐ ತನಿಖೆ ನಡೆಸಲು ಸೂಚಿಸಿದ್ದರು ಎಂಬುವುದನ್ನು ತಿಳಿಯಲು ಬಯಸಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ನಾನು ಸಚಿವನಾಗಿದ್ದ ಅವಧಿಯಲ್ಲಿ ಲಂಚ ತೆಗೆದುಕೊಂಡಿದ್ದರೆ ಅಥವಾ ಹಣದ ದುರುಪಯೋಗ ಮಾಡಿಕೊಂಡಿದ್ದರೆ ಸಿಬಿಐ ತನಿಖೆಯ ಬದಲು, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತನಿಖೆ ನಡೆಸಬಹುದಿತ್ತು. ಇದು ಸಿಬಿಐಗೆ ನೀಡುವ ಪ್ರಕರಣವಲ್ಲ. ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವೇ ತನಿಖೆ ನಡೆಸಬಹುದು ಎಂದು ಅಡ್ವೊಕೇಟ್ ಜನರಲ್ ಸಹ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೂ ರಾಜಕೀಯ ಒತ್ತಡದಿಂದ ಸಿಬಿಐ ತನಿಖೆ ನಡೆಯುತ್ತಿದೆ ಎಂದು ಡಿಕೆಶಿ ವಿಷಾದಿಸಿದರು.

ಕನಕಪುರದ ಜನರಿಗೆ ಕೆಟ್ಟ ಹೆಸರನ್ನು ತರುವ ಯಾವುದೇ ಕಾರ್ಯವನ್ನು ನಾನು ಮಾಡಿಲ್ಲ ಎಂದು ಹೇಳಿದರು.

ಸಿಬಿಐ ಅಕ್ಟೋಬರ್ 5ರಂದು ಕರ್ನಾಟಕ, ದೆಹಲಿ ಮತ್ತು ಮುಂಬೈ ಸೇರಿದಂತೆ ಶಿವಕುಮಾರ್ ಮತ್ತು ಇತರರಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಈ ವೇಳೆ ₹ 57 ಲಕ್ಷ ನಗದು ಮತ್ತು ಆಸ್ತಿ ದಾಖಲೆಗಳು, ಬ್ಯಾಂಕ್ ಸಂಬಂಧಿತ ಮಾಹಿತಿ, ಕಂಪ್ಯೂಟರ್ ಹಾರ್ಡ್​ ಡಿಸ್ಕ್ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ₹ 74.93 ಕೋಟಿ ಮೌಲ್ಯದ ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿತ್ತು.

ಇದನ್ನೂ ಓದಿ: ಗಂಗಾನಗರ CBI ಕಚೇರಿಗೆ ಬಂದ ಡಿಕೆಶಿ.. ನಾಳೆ ವಡೋದರಾಗೆ ಹೋಗೋಕೆ ಸಿಗುತ್ತಾ ಅವಕಾಶ?

Published On - 6:22 pm, Wed, 25 November 20