ಬೆಂಗಳೂರು: ಈಗ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ಕುರಿತಾಗಿ ಶನಿವಾರ ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುಂಬಾ ಖಾರವಾದ ಟಿಪ್ಪಣಿಯೊಂದಿಗೆ ಪ್ರತಿಕ್ರಿಯಿಸಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ, ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿ, ಸಾರಿಗೆ ಸಂಸ್ಥೆ ನೌಕರರ ಜೊತೆ ಚರ್ಚೆಗೆ ಸದಾ ಸಿದ್ಧನಿದ್ದೇನೆ ಎಂದು ಮಾತುಕತೆಗೆ ವೇದಿಕೆ ಸಿದ್ದಗೊಳಿಸಿದ್ದಾರೆ. ರಾತ್ರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ನಿಗಮದವರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಕಷ್ಟ. ಆದರೆ, ಸರ್ಕಾರಿ ನೌಕರರಿಗಿಂತ ಹೆಚ್ಚಿನ ಸೌಲಭ್ಯಗಳನ್ನ ನೀಡುತ್ತೇವೆ ಎನ್ನುವ ಭರವಸೆ ನೀಡಿದರು.
ಶನಿವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸವದಿ, ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಈ ಮುಷ್ಕರವನ್ನು ಕೈಬಿಟ್ಟು ತಮ್ಮ ಕರ್ತವ್ಯಕ್ಕೆ ವಾಪಸಾಗಬೇಕೆಂದು ನಾನು ನಮ್ಮ ಸಾರಿಗೆ ಸಂಸ್ಥೆಗಳ ಎಲ್ಲಾ ನೌಕರ ಬಾಂಧವರಲ್ಲಿ ಮತ್ತೊಮ್ಮೆ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ, ಎಂದು ಹೇಳಿದ್ದಾರೆ.
ಸವದಿ ಹೇಳಿದ್ದೇನು?
ಇಂದು ಮತ್ತು ನಿನ್ನೆ ನಾಡಿನ ಕೆಲವೆಡೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಸ್ಥಗಿತಗೊಂಡಿರುವುದು, ಮುಷ್ಕರ ನಡೆಯುವಂತಾಗಿರುವುದು ಮತ್ತು ಬಸ್ಸುಗಳಿಗೆ ಕಲ್ಲು ತೂರಾಟ ಹಾಗೂ ಹಾನಿಗೊಳಿಸುವಿಕೆಯಂತಹ ಅಹಿತಕರ ಘಟನೆ ನಡೆದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ ಎಂದು ಹೇಳಿರುವ ಸಚಿವರು ಈ ಕುರಿತು ಸಾರ್ವಜನಿಕರಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸುಮಾರು 1.30 ಲಕ್ಷ ನೌಕರರ ಹಿತಾಸಕ್ತಿ ರಕ್ಷಿಸಲು ತಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಸಾರಿಗೆ ಸಿಬ್ಬಂದಿಗಳ ಬಗ್ಗೆ ನನಗೆ ಮತ್ತು ನಮ್ಮ ಸರ್ಕಾರಕ್ಕೆ ಯಾವತ್ತೂ ಸಹಾನುಭೂತಿ ಇದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿಯೂ ಸಹ ಎಲ್ಲಾ ಸಿಬ್ಬಂದಿಗಳಿಗೆ ಯಾವುದೇ ಕಡಿತವಿಲ್ಲದೇ ಸಂಬಳ ನೀಡಿದ್ದು ಇದಕ್ಕೆ ನಿದರ್ಶನವಾಗಿದೆ. ಕೋವಿಡ್ನಿಂದಾಗಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರ ಕುಟುಂಬದವರಿಗೆ ಇನ್ನು 15 ದಿನಗಳೊಳಗಾಗಿ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಮತ್ತೊಮ್ಮೆ ಭರವಸೆ ನೀಡಿದ ಸಚಿವರು, ಇನ್ನುಳಿದ ಬೇಡಿಕೆಗಳ ಬಗ್ಗೆ ಚರ್ಚಿಸಿ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಸರ್ಕಾರ ಸಿದ್ಧವಿದೆ ಎಂದರು.
ನಮ್ಮ ಸಾರಿಗೆ ಸಂಸ್ಥೆಗಳ ಯಾವುದೇ ಒಕ್ಕೂಟಕ್ಕೆ ಸೇರಿಲ್ಲದವರು ಏಕಾಏಕಿಯಾಗಿ ಯಾವುದೇ ಮುನ್ಸೂಚನೆ ನೀಡದೇ ಬಸ್ ಸಂಚಾರ ಸ್ಥಗಿತಗೊಳ್ಳುವಂತೆ ಮುಷ್ಕರಕ್ಕೆ ಕರೆಕೊಟ್ಟಿರುವುದು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಬಂದ ಕೆಲವು ಸಿಬ್ಬಂದಿಗಳಿಗೆ ತೊಂದರೆ ನೀಡಿರುವುದು ಹಾಗೂ ಸಾರಿಗೆ ಸಂಸ್ಥೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಯಾಗುವಂತೆ ವರ್ತಿಸಿರುವುದು ದುರದೃಷ್ಟಕರವಾಗಿದೆ. ಇಂತಹ ಬೆಳವಣಿಗೆಗಳಿಂದ ಸಾರಿಗೆ ಸಂಸ್ಥೆಗಳ ನೌಕರರಿಗೆ ದೊಡ್ಡ ಹಾನಿಯಾಗುವುದಲ್ಲದೇ ಸಾರ್ವಜನಿಕರಿಗೆ ಅನವಶ್ಯಕವಾಗಿ ತೊಂದರೆ ಉಂಟಾಗುವುದಕ್ಕೆ ಕಾರಣವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಾರಿಗೆ ಮಿತ್ರರು ಸರ್ಕಾರದೊಂದಿಗೆ ಪರಸ್ಪರ ಸಹಕಾರದೊಂದಿಗೆ ತಮ್ಮ ದೈನಂದಿನ ಕರ್ತವ್ಯ ಮುಂದುವರೆಸಬೇಕೆಂದು ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ.
ಸಾರಿಗೆ ಸಿಬ್ಬಂದಿಗಳೆಂದರೆ ನನಗೆ ನನ್ನ ಕುಟುಂಬವಿದ್ದಂತೆ, ಅವರ ಸಂಕಷ್ಟಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧ. ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಇದನ್ನು ಸಾರಿಗೆ ಸಿಬ್ಬಂದಿಗಳು ಮನಗಂಡಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳೂ ಸಹ ಸಾರಿಗೆ ಇಲಾಖೆಯ ಎಲ್ಲಾ ನೌಕರರ ಬೇಡಿಕೆಗಳ ಬಗ್ಗೆ ಉದಾರವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಮುಂದೆಯೂ ನಮ್ಮ ಸಾರಿಗೆ ಸಿಬ್ಬಂದಿಗಳು ತಮ್ಮ ಬೇಡಿಕೆಗಳನ್ನು ತಿಳಿಸಬೇಕೆಂದರೆ ನನ್ನ ಬಳಿ ಬರುವುದಕ್ಕೆ ಸದಾ ಮುಕ್ತ ಅವಕಾಶವಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ. ನಮ್ಮ ಸಾರಿಗೆ ಒಕ್ಕೂಟಗಳು ಮತ್ತು ಸಿಬ್ಬಂದಿಗಳು ನನ್ನನ್ನು ಭೇಟಿ ಮಾಡಿ ತಮ್ಮ ಕಷ್ಟಸುಖಗಳನ್ನು ಹೇಳಿಕೊಳ್ಳುವುದಕ್ಕೆ ಸದಾ ಸ್ವಾಗತವಿದೆ, ಎಂದು ಅವರು ತಮ್ಮ ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ.
ರಾತ್ರಿ ಹೇಳಿದ್ದೇನು?
ನಮ್ಮ ಹಣಕಾಸಿನ ಇತಿಮಿತಿಯಲ್ಲಿ ಏನು ಮಾಡಬೇಕು ಮಾಡುತ್ತೇವೆ. ಸಾರಿಗೆ ನಿಗಮದ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಕಷ್ಟ. ಆದರೆ, ಸರ್ಕಾರಿ ನೌಕರರಿಗಿಂತ ಹೆಚ್ಚಿನ ಸೌಲಭ್ಯಗಳನ್ನ ನೀಡುತ್ತೇವೆ. ಅವರಿಗೆ ಆಗಿರುವ ಅನ್ಯಾಯ ಸರಿಪಡಿಸುತ್ತೇವೆ ಎಂದರು.
ನಡುರಾತ್ರಿ ಗಡುವು ನೀಡಿದ ಸಚಿವ ಸವದಿ, ನಾಳೆಯಿಂದ ಖಾಸಗಿ ಬಸ್ ಬಳಕೆಯ ಎಚ್ಚರಿಕೆ ರವಾನೆ
Published On - 7:24 pm, Sat, 12 December 20