ಮಂಗಳೂರು/ ಮಂಡ್ಯ: ಮಂಡ್ಯದಲ್ಲಿ ಮುಸ್ಲಿಂ ಮಹಿಳೆಯರ (Muslim Women) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhatt) ಅವರನ್ನು ಬಂಧಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ. ಪ್ರಕರಣ ಸಂಬಂಧ ಭಟ್ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಈ ವಿಚಾರವಾಗಿ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವುಮೆನ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮ, ಇದು ನಮ್ಮ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತರುವಂಥ ಹೇಳಿಕೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಹೇಳಿಕೆಯನ್ನು ನೀಡಿದ್ದಾರೆ. ಆರ್ಎಸ್ಎಸ್ನಲ್ಲಿರುವ ವಿಷ ಜಂತುಗಳು ಈ ರೀತಿಯ ಹೇಳಿಕೆ ನೀಡುವುದು ಹೊಸದಲ್ಲ. ಅವರ ಮೇಲೆ ಎಫ್.ಐ.ಆರ್ ಆದ್ರು ಇನ್ನು ಸಹ ಬಂಧನ ಆಗಿಲ್ಲ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸಹ ನಿಷ್ಕ್ರಿಯತೆ ತೋರಿಸುತ್ತಿದೆ. ಪ್ರತಿಭಟನೆಗೂ ಯಾವುದೇ ಅವಕಾಶ ನೀಡುತ್ತಿಲ್ಲ. ಅನುಮತಿ ಕೇಳಲು ಹೋದ್ರೆ ನೋಟಿಸ್ ಜಾರಿ ಮಾಡಿದ್ದಾರೆ. ಮಹಿಳೆಯರ ಮೇಲೆ 107 ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿದ್ದಾರೆ. ರೌಡಿಗಳನ್ನು ನಿಯಂತ್ರಿಸುವ ಕೇಸ್ ಅನ್ನು ನಮ್ಮ ಮೇಲೆ ಹಾಕಿದ್ದಾರೆ. ಹೆಚ್ಚಿನ ಸಂಖ್ಯೆಯ ಮುಸ್ಲಿಂ ಓಟು ಪಡೆದು ಬಂದ ಕಾಂಗ್ರೆಸ್ ಸರ್ಕಾರ ಮೌನವಾಗಿದೆ. ಸರ್ಕಾರ ಮಹಿಳೆಯರಿಗೆ ಬಿಟ್ಟಿ ಭಾಗ್ಯ ನೀಡಿ ಮಂಗ ಮಾಡಿದೆ. ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲ. ತಕ್ಷಣ ಕಲ್ಲಡ್ಕ ಭಟ್ಟರನ್ನು ಬಂಧಿಸಬೇಕು ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ, ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳ ಸಂಘಟನೆಗಳ ಜಂಟಿ ವೇದಿಕೆ ಸುದ್ದಿಗೋಷ್ಠಿ ನಡೆಸಿ ಭಟ್ಟರ ಬಂಧನಕ್ಕೆ ಆಗ್ರಹಿಸಿದೆ. ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ, ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲ ಮತ್ತು ತುಚ್ಛವಾಗಿ ಮಾತನಾಡಿದ್ದಾರೆ. ಇದನ್ನು ನಾಗರಿಕ ಸಮಾಜ ಒಪ್ಪಲು ಸಾದ್ಯವೇ ಇಲ್ಲ. ಮುಸ್ಲಿಂ ಮಾತ್ರ ಅಲ್ಲ, ಸಮಗ್ರ ಮಹಿಳೆಯರಿಗೆ ಮಾಡಿದ ಅವಮಾನ. ಜಿಲ್ಲೆಯಲ್ಲಿ ಅನೇಕ ಬಾರಿ ಇವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಅವರಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ, ಹೀಗಾಗಿ ಕೋಮು ಪ್ರಚೋದನೆ ಮಾಡಿ ಗಲಾಟೆ ಸೃಷ್ಟಿಸೋ ಯತ್ನ ಮಾಡುತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ರನ್ನ ವಿಳಂಬ ಮಾಡದೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರಭಾಕರ ಭಟ್ ಹೇಳಿಕೆಯನ್ನ ಯಾರೂ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಭಾಕರ ಭಟ್ ಭಾಷಣ ತಿರುಚಿದ್ದಾರೆ ಎನ್ನುತ್ತಾರೆ. ಆದರೆ, ಯಾವ ರೀತಿ ತಿರುಚಿದ್ದಾರೆ ಅಂತ ಅವರು ಹೇಳಲಿ. ಕೋಮುದ್ವೇಷ ಹರಡಿಸಿ ರಾಜಕೀಯ ಲಾಭಕ್ಕೆ ಹೆಣ್ಮಕ್ಕಳ ಮಾನ ಮರ್ಯಾದೆಗೆ ಕುಂದು ತರಲಾಗಿದೆ. ಈಗಾಗಲೇ ಇದರ ವಿರುದ್ಧ ಕೆಲವು ದೂರುಗಳು ದಾಖಲಾಗಿವೆ. ಅವರ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಅದನ್ನ ಗಮನಿಸಿ ಸರಕಾರ ಕೂಡಲೇ ಅವರನ್ನು ಬಂಧಿಸಬೇಕು. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ವಿಶ್ವಾಸ ನನಗೆ ಇದೆ ಎಂದು ರಮಾನಾಥ ರೈ ಹೇಳಿದ್ದಾರೆ.
ಕೇವಲ ಮುಸ್ಲಿಂ ಮಹಿಳೆಯರನ್ನು ಮಾತ್ರವಲ್ಲ, ಹಿಂದೂ ಮಹಿಳೆಯರ ಬಗ್ಗೆಯೂ ಅವರು ಹಲವು ಬಾರಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕ್ರೈಸ್ತ ಸಮುದಾಯವನ್ನೂ ಅವರು ಹಲವು ಬಾರಿ ಅವಮಾನಿಸಿದ್ದಾರೆ. ಮುಸ್ಲಿಂ ಮಹಿಳೆಯರ ವಿರುದ್ಧದ ಹೇಳಿಕೆ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ರೈ ಹೇಳಿದರು.
ಪ್ರಭಾಕರ್ ಭಟ್ ಬಂಧನ ಆದ್ರೆ ಗಲಾಟೆ ಆಗುತ್ತದೆ ಅಂತಾ ಜನ ಮಾತನಾಡಿಕೊಳ್ಳುತ್ತಾರೆ. ಗಲಾಟೆಯನ್ನು ಬಿಜೆಪಿ, ಸಂಘಪರಿವಾರ ಮಾಡುತ್ತದೆ. ಗಲಾಟೆಯನ್ನು ಮಾಡಿ ರಾಜಕೀಯ ಲಾಭ ಪಡೆಯುತ್ತಾರೆ. ಮುಸ್ಲಿಂ ಹೆಣ್ಣು ಮಕ್ಕಳ ಸಮಸ್ಯೆ ಬಗ್ಗೆ ಬಿಜೆಪಿ, ಸಂಘಪರಿವಾರದ ಮುಖಂಡರಿಗೆ ಯಾಕೆ ತಲೆಬಿಸಿ? ಮೋದಿ ತ್ರಿವಳಿ ತಲಾಖ್ ತಂದ ಉದ್ದೇಶ ಏನು? ಭಟ್ ಹೇಳಿದ ಕಾರಣಕ್ಕಾಗಿಯೇ ಮೋದಿ ಕಾನೂನು ತಂದಿದ್ದಾ? ಕಲ್ಲಡ್ಕ ಭಟ್ ಬಂಧನ ಆದ್ರೆ ಯಾವುದೇ ಸಮಸ್ಯೆ ಆಗಲ್ಲ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ವಿರುದ್ಧ ಅಕ್ಷೇಪಾರ್ಹ ಹೇಳಿಕೆ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್
ಭಟ್ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಕಲ್ಲಡ್ಕ ಭಟ್ ಕಲ್ಲಡ್ಲದಲ್ಲಿ ಆದ ರಸ್ತೆ ಸಮಸ್ಯೆ ಬಗ್ಗೆ ಎಂದಾದರೂ ಮಾತನಾಡಿದ್ದಾರಾ? ಅಕ್ರಮ ಟೋಲ್ ಬಗ್ಗೆ ಮಾತನಾಡಿದ್ದಾರಾ? ಜಿಲ್ಲೆಯ ಜನರಿಗೆ ಕಂಪೆನಿಗಳಲ್ಲಿ ಕೆಲಸ ಸಿಗದಿದ್ದಾಗ ಪ್ರಭಾಕರ್ ಭಟ್ ಯಾಕೆ ಮಾತನಾಡಿಲ್ಲ? ಪ್ರಭಾಕರ್ ಭಟ್ ರಾಜಕೀಯ ಲಾಭ ಪಡೆಯಲು ಈ ಹೇಳಿಕೆ ನೀಡಿದ್ದಾರೆ. ಪ್ರಭಾಕರ್ ಭಟ್ ಭಾಷಣದಿಂದ ಬೀದಿಯಲ್ಲಿ ರಕ್ತ ಹರಿದಿದೆ. ಸರ್ಕಾರ ಪ್ರಭಾಕರ್ ಭಟ್ರನ್ನು ಬಂಧಿಸಬೇಕು. ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ ಎಂದು ಅವರು ಆಗ್ರಹಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸುವಂತೆ ಆಗ್ರಹಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಯಿತು. ಎಸ್ಡಿಪಿಐ ಸಂಘಟನೆಯ ಸದಸ್ಯರು ಮಂಡ್ಯದ ಸಂಜಯ್ ಸರ್ಕಲ್ನಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದೇ ವೇಳೆ, ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ಪ್ರತಿಭಟನಾಕಾರರು ಮಂಡ್ಯ ಅಪರ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ, ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ಶ್ರೀರಂಗಪಟ್ಟಣದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್, ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡಂದಿರು. ಅವರಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದೇ ಮೋದಿ ಸರ್ಕಾರ’ ಎಂದು ಭಟ್ ಹೇಳಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ