ಧರಣಿ ಮಾಡಿದ್ದಕ್ಕಲ್ಲ, ಕಾನೂನು ಕೈಗೆತ್ತಿಕೊಂಡಿದ್ದಕ್ಕೆ ಕರವೇ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ

ಯಾರೇ ಆದರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಧರಣಿ ಮಾಡಿದ್ದಕ್ಕೆ ಕರವೇ ವಿರುದ್ಧ ಕ್ರಮ ಕೈಗೊಂಡಿಲ್ಲ. ಕಾನೂನು ಕೈಗೆತ್ತಿಕೊಂಡಿದ್ದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಧರಣಿ ಮಾಡಿದ್ದಕ್ಕಲ್ಲ, ಕಾನೂನು ಕೈಗೆತ್ತಿಕೊಂಡಿದ್ದಕ್ಕೆ ಕರವೇ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us
| Updated By: ಗಣಪತಿ ಶರ್ಮ

Updated on:Dec 28, 2023 | 1:27 PM

ಬೆಂಗಳೂರು, ಡಿಸೆಂಬರ್ 28: ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ (Siddaramaiah), ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರೇ ಆದರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಧರಣಿ ಮಾಡಿದ್ದಕ್ಕೆ ಕರವೇ ವಿರುದ್ಧ ಕ್ರಮ ಕೈಗೊಂಡಿಲ್ಲ. ಕಾನೂನು ಕೈಗೆತ್ತಿಕೊಂಡಿದ್ದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು.

ಕನ್ನಡ ನಾಮಫಲಕ ಸಂಬಂದ ನಿಯಮ ಮಾಡಬೇಕೆಂದು ಚಿಂತನೆ ಮಾಡಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ನಾಮಫಲಕವೇ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಪಕ್ಷ ಉದಯವಾಗಿ 138 ವರ್ಷ ಪೂರ್ಣಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲೇ‌ ಕಾಂಗ್ರೆಸ್ ಸ್ಥಾಪನೆಯಾಯಿತು. ದೇಶದ ಜನರ ಜೀವನ‌ ಸುಧಾರಣೆಗಾಗಿ ಉದಯವಾದ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರು. ಇದಕ್ಕೆ ಕಾಂಗ್ರೆಸ್ ಪಕ್ಷ ಕಾರಣ, ಬೇರೆ ಯಾವುದೇ ಪಕ್ಷ ಕಾರಣವಲ್ಲ. ಬಿಜೆಪಿಯ ಒಬ್ಬರಾದ್ರೂ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಬಿಜೆಪಿಗರು ದೇಶ ಭಕ್ತರು ಅಂತಾರೆ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ರಾ? ಇದನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯ ಡೋಂಗಿ ರಾಜಕಾರಣವನ್ನು ಕಾಂಗ್ರೆಸ್​ ಬಯಲು ಮಾಡಬೇಕು. ಆಧುನಿಕ ಭಾರತದ ಅಭಿವೃದ್ಧಿಗೆ ಮೊದಲ ಪ್ರಧಾನಿ ನೆಹರು ಅಡಿಪಾಯ ಹಾಕಿದ್ದನ್ನು ಮರೆಯಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಹಿಂದುತ್ವ ಬೇರೆ, ಹಿಂದೂ‌ ಬೇರೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಹಿಂದುತ್ವ ಬೇರೆ, ಹಿಂದೂ‌ ಬೇರೆ. ನಾನೂ ಊರಲ್ಲಿ ಭಜನೆಗೆ ಹೋಗ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು. ನಾನೂ ಊರಲ್ಲಿ ಧನುರ್ಮಾಸದ ಸಂದರ್ಭದಲ್ಲಿ ಭಜನೆಗೆ ಹೋಗ್ತಿದ್ದೆ. ಸಾಫ್ಟ್ ಹಿಂದುತ್ವ ಹಾರ್ಡ್ ಹಿಂದುತ್ವ ಎಂದರೇನು? ಸಾಫ್ಟ್ ಹಾಗೂ ಹಾರ್ಡ್ ಹಿಂದುತ್ವ ಇಲ್ಲ. ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ. ನಾವೂ ಶ್ರೀರಾಮ ಪೂಜೆ ಮಾಡಿಲ್ವಾ? ಇವರೊಬ್ಬರೇನಾ ಮಾಡುವುದು? ಅವರು ಮಾತ್ರ ಹಿಂದೂಗಳಾ ನಾವಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ: ಕನ್ನಡಪರ ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ಕ್ರಾಂತಿಕಾರಿ ಹೋರಾಟ: ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಕೆ

ಬಿಜೆಪಿ ಅಧಿಕಾರ ಅವಧಿಯಲ್ಲಿ ಒಂದೇ ಒಂದು ಅಣೆಕಟ್ಟು ಕಟ್ಟಿಲ್ಲ. ಇರುವ ಅಣೆಕಟ್ಟು ಕಾಂಗ್ರೆಸ್ ಅವಧಿಯಲ್ಲಿ ಕಟ್ಟಿದ್ದು. ಹಾಗಾದರೆ ನೀವು ಏನು ಮಾಡಿದ್ದೀರಿ? ಡಿಜಿಟಲ್ ಇಂಡಿಯಾಗೆ ಅಡಿಪಾಯ ಹಾಕಿದ್ದು ರಾಜೀವ್ ಗಾಂಧಿ. ಬಿಜೆಪಿ ನಾಯಕರು ಸುಳ್ಳನ್ನು ತಲೆಗೆ ಹೊಡೆದ ಹಾಗೆ ಹೇಳುತ್ತಾರೆ‌. ಅವರ ಸುಳ್ಳು ಬಯಲು ಮಾಡುವ ಕೆಲಸ ಮಾಡಬೇಕಿದೆ. ದೇಶ ಬಹುತ್ವ ಸಂಸ್ಕೃತಿ ಹೊಂದಿದೆ. ಆದರೆ ಬಿಜೆಪಿ ಜನರಲ್ಲಿ ವಿಷಬೀಜ ಬಿತ್ತುತ್ತಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರನ್ನೂ ಜೊತೆಗೆ ಕೊಂಡೊಯ್ಯಬೇಕು. ಆದರೆ ಬಿಜೆಪಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಮಾತ್ರ ಹೇಳುತ್ತದೆ. ಕಾಂಗ್ರೆಸ್ ಬಹು ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟುಕೊಂಡಿದೆ. ಸ್ವಾತಂತ್ರ್ಯ ಬಂದ ಮೇಲೆ‌ ದೇಶ ಕಟ್ಟುವ ಕೆಲಸ ಕಾಂಗ್ರೆಸ್ ಮಾಡಿದೆ. ಈ ಕಾರಣದಿಂದಾಗಿ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯನ್ನು ನೆನಪಿಸಿಕೊಳ್ಳಬೇಕಾಗಿದೆ. ಬಿಜೆಪಿ ಯಾವತ್ತಾದರೂ ಮೀಸಲಾತಿ ಪರವಾಗಿ ಮಾತನಾಡಿಲ್ಲ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ವಿರುದ್ಧವಾಗಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರವಾಗಿದೆ. ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಿಲ್ಲ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ನೀಡುತ್ತೇವೆ. ನಾವು ಕೊಟ್ಟ ಭರವಸೆ ಜಾರಿ ಮಾಡುತ್ತೇವೆ. ದೇಶದ ಸಮಸ್ಯೆಗಳಿಗೆ ಪರಿಹಾರ ಕಾಂಗ್ರೆಸ್ ಮಾತ್ರ. ರಾಹುಲ್ ಗಾಂಧಿ ದೇಶದ ಪ್ರಧಾನ ಮಂತ್ರಿ ಆಗಬೇಕು. ರಾಹುಲ್‌ ಗಾಂಧಿ ಭಾರತ ನ್ಯಾಯ ಯಾತ್ರೆ ಮಾಡುತ್ತಾರೆ. ದೇಶದಲ್ಲಿ ಎಲ್ಲರಿಗೂ ನ್ಯಾಯ‌ ಸಿಗಬೇಕು ಎಂಬುದು ಅವರ ಉದ್ದೇಶ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:26 pm, Thu, 28 December 23