ಕನ್ನಡಪರ ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ಕ್ರಾಂತಿಕಾರಿ ಹೋರಾಟ: ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಕೆ
ಕನ್ನಡ ಪರ ಹೋರಾಟಗಾರರ ಬಂಧನದ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಹೋರಾಟಗಾರರನ್ನು ಬಿಡುಗಡೆ ಮಾಡನಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ, ಕ್ರಾಂತಿಕಾರಕ ಹೋರಾಟವನ್ನು ಸರ್ಕಾರ ಎದುರಿಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಡಿಸೆಂಬರ್ 28: ಕರವೇ (Karnataka Rakshana Vedike) ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಬಂಧನಕ್ಕೊಳಗಾಗಿರುವ ಕನ್ನಡ ಪರ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದರೆ ರಾಜಧಾನಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಕ್ರಾಂತಿಕಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ (Praveen Shetty) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬಂಧಿತ 29 ಮಂದಿಗೆ ನ್ಯಾಯಾಲವು ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದ ಬೆನ್ನಲ್ಲೇ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ರಾಜಧಾನಿಯಲ್ಲಿ ಪ್ರಮುಖ ಕನ್ನಡಪರ ಹೋರಾಟಗಾರರ ಮಹತ್ವದ ಸಭೆ ಕರೆಯಲಾಗಿದೆ. ನಿನ್ನೆ ನಡೆದ ಕನ್ನಡ ನಾಮಪಲಕ ಹೋರಾಟದಲ್ಲಿ ಅಮಾಯಕ ಕನ್ನಡಪರ ಹೋರಾಟಗಾರರನ್ನ ಸರ್ಕಾರ ಮತ್ತು ಪೊಲೀಸ್ ಇಲಾಖೆ ಬಂಧಿಸಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕನ್ನಡಪರ ಹೋರಾಟಗಾರರು ಲೂಟಿ ಮಾಡಿದರೇ? ದರೋಡೆ ಮಾಡಿದರೇ? ಅಥವಾ ಕೊಲೆ ಮಾಡಿದರೇ ಎಂದು ಪ್ರವೀಣ್ ಶೆಟ್ಟಿ ಹೇಳಿದರು.
ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ. ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಇರಬೇಕು ಎನ್ನುವ ಕಾನೂನಿದೆ. ಅಂಗಡಿ ಪರವಾನಗಿ ಕೊಡಬೇಕಾದ್ರೆ ಸರ್ಕಾರ ಇದನ್ನು ಪಾಲಿಸಬೇಕು. ಆದರೆ ಇಲ್ಲಿಯವರೆಗೆ ಯಾವುದೇ ಹೋಟೆಲ್, ಮಾಲ್ ಹಾಗೂ ಐಟಿಬಿಟಿ ಕಂಪನಿಗಳು ಪಾಲನೆ ಮಾಡ್ತಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ಹೊಣಗೇಡಿತನ ಆಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಅಮಾಯಕ ಕನ್ನಡಪರ ಹೋರಾಟಗಾರರ ಮೇಲೆ 26 ರೀತಿಯ ಕೇಸ್ ದಾಖಲಿಸಿದ್ದೀರಿ. ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ನಾಳೆ ಕನ್ನಡಪರ ಹೋರಾಟಗಾರರ ಸಭೆ ಕರೆದಿದ್ದೀವಿ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಕನ್ನಡದ ವಿಚಾರದಲ್ಲಿ ನಾವೆಲ್ಲಾ ಒಂದೇ. ಸರ್ಕಾರ ಎಚ್ಚರಿಕೆ ಕೊಡ್ತಿದ್ದೀವಿ ಈ ಕೂಡಲೇ ಕನ್ನಡಪರ ಹೋರಾಟಗಾರರನ್ನ ಬಿಡುಗಡೆ ಮಾಡಬೇಕು. ರಾತ್ರೋರಾತ್ರಿ ಜೈಲಿಗೆ ಕಳಿಸುವುದು ಇದು ರೌಡಿಗಳಿಗೆ ಮಾಡುವ ಕೃತ್ಯ, ಕನ್ನಡಪರ ಹೋರಾಟಗಾರರಿಗೆ ಮಾಡುವಂತದ್ದಲ್ಲ. ಬಿಡುಗಡೆ ಮಾಡಿಲ್ಲ ಅಂದರೆ ಇನ್ನೊಮ್ಮೆ ಬೆಂಗಳೂರು ನಗರದಲ್ಲಿ ದೊಡ್ಡ ಕ್ರಾಂತಿಕಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ