ನೆಲಮಂಗಲ, ಫೆ.9: ಪಂಜಾಬ್ನಲ್ಲಿ ಅತಿ ಹೆಚ್ಚು ಗಾಂಜಾ ಬಳಸಲಾಗುತ್ತದೆ. ಅದು ಉಡ್ತಾ ಪಂಜಾಬ್ ಆಗಿಬಿಟ್ಟಿದೆ. ಅದೇ ರೀತಿ ಬೆಂಗಳೂರು ಕೂಡ ಆಗುವ ಆತಂಕ ಇದೆ. ಆದರೆ ಇತ್ತೀಚೆಗೆ ಕಮ್ಮಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಹೇಳಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುಗಳ ವಿನಾಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಕೊಲೇಟ್ ಮೂಲಕ ಡ್ರಗ್ ಸಪ್ಲೈ ಮಾಡುತ್ತಿದ್ದರು. ಇತ್ತೀಚೆಗೆ ಇದು ಕಮ್ಮಿ ಆಗಿದೆ ಎಂದರು.
ಬಾರ್ ಅಂಡ್ ರೆಸ್ಟೋರೆಂಟ್ ಕ್ಲಬ್, ಪಾರ್ಟಿಗಳಲ್ಲೂ ಸಹ ಡ್ರಗ್ ಸಪ್ಲೈ ಮಾಡುವುದನ್ನು ಕೇಳಿದ್ದೇವೆ. ಇದು ನಿಲ್ಲಬೇಕು, ಯುವಕರು ಮಕ್ಕಳನ್ನು ಉಳಿಸಬೇಕು ಎಂಬುದು ನಮ್ಮ ಕಳಕಳಿ. ನಮ್ಮ ಪೊಲೀಸರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ ಪೆಡ್ಲರ್ಗಳು ಸಿಕ್ಕಿದಾಗ ಅವರ ಆಸ್ತಿಗಳನ್ನು ಮುಟ್ಟುಗೋಲು ಮಾಡಿಕೊಳ್ಳುವ ಕೆಲಸವಾಗುತ್ತದೆ ಎಂದರು.
ಡ್ರಗ್ಸ್ ಪ್ರಕರಣ ಸಂಬಂಧ ರಾಜ್ಯದಲ್ಲಿ 2023ರಲ್ಲಿ 6764 ಕೇಸ್ ದಾಖಲಾಗಿದೆ. 9645 ಕೆಜಿ ಗಾಂಜಾ ಸೀಜ್ ಮಾಡಲಾಗಿದೆ. 233 ಕೆಜಿ ಸಿಂಥೆಟಿಕ್ ಡ್ರಗ್ ಸೀಜ್ ಮಾಡಲಾಗಿದೆ. ಪ್ರಕರಣದಲ್ಲಿ 7400 ಮಂದಿ ಭಾರತೀಯರು, 136 ಮಂದಿ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಒಟ್ಟು 128 ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಕೆ ಸುಧಾಕರ್ ವಾಪಸ್ಸು ಬಂದರೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಸಿಗುವುದೇ ಅಂದಾಗ ಪರಮೇಶ್ವರ್ ಸಿಡುಕಿದರು!
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಇಡೀ ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಜಿಲ್ಲೆಯಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದರೆ ಇಡೀ ಕರ್ನಾಟಕ ಡ್ರಗ್ ಮುಕ್ತವಾಗುತ್ತದೆ. 3885 ಕೆಜಿ, 55 ಕೆಜಿ ಎಂಡಿಎಂಎ, ಆಶಿಶ್ ಆಯಿಲ್ ಸೇರಿ 36 ಕೋಟಿ ಮೌಲ್ಯದ ಡ್ರಗ್ ನಾಶಪಡಿಸುತ್ತೇವೆ ಎಂದರು.
ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಸುವರ್ಣ ಸಂಭ್ರಮ ಆಚರಣೆ ನಡೆಸುತ್ತಿದೆ. ಸಂಕಲ್ಪ ಮಾಡಿದಂತೆ ಪೊಲೀಸ್ ಇಲಾಖೆಯ ಜನಸಮುದಾಯದಲ್ಲಿ ನೆನಪಾಗಿ ಉಳಿಯಬೇಕು. ಇಡೀ ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಯೋಜಿಸಲಾಗಿತ್ತು. ಡ್ರಗ್ ದೊಡ್ಡ ಆಂದೋಲನ, ಯುದ್ಧವನ್ನ ಮಾಡಬೇಕು ಎಂದುಕೊಂಡಿದ್ದೇವು. ಹೀಗಾಗಿ ಪೊಲೀಸರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ನಾನು ಮೂರನೇ ಬಾರಿ ರಾಜ್ಯದ ಗೃಹ ಸಚಿವನಾಗಿದ್ದೇನೆ. ವಿಧಾನಸಭೆ, ವಿಧಾನಪರಿಷತ್ನಲ್ಲಿ ಅತೀ ಹೆಚ್ಚು ಪ್ರಶ್ನೆಗಳು ಡ್ರಗ್ಸ್ ಬಗ್ಗೆ ಬಂದಿದೆ. ಮಾದಕ ವಸ್ತುಗಳು ಇಡೀ ಸಮುದಾಯವನ್ನು ನಾಶಪಡಿಸುವ ಕೆಲಸ ಮಾಡುತ್ತೇವೆ. ಯುವ ಸಮುದಾಯದ ಆರೋಗ್ಯ ಜೀವನ ಹಾಳಾಗುತ್ತಿದೆ. ನಮಗೆ ಡ್ರಗ್ ಬಹಳ ದೊಡ್ಡ ಸವಾಲಾಗಿ ನಿಂತಿದೆ. ಕೆಲ ದೇಶಗಳು ಡ್ರಗ್ ವಿರುದ್ಧ ಸೋತುಬಿಟ್ಟಿವೆ ಎಂದು ಆತಂಕ ಹೊರಹಾಕಿದರು.
ನಮ್ಮ ಸಂಸ್ಕೃತಿಯಲ್ಲಿ ಉತ್ತರ ಭಾರತದಲ್ಲಿ ಭಾಂಗ್ ಎಂಬುಂದನ್ನು ಬಳಸುತ್ತಾರೆ. ಇತಿಹಾಸ, ಪುರಾಣವನ್ನು ಗಮನಿಸಿದಾಗ ಇದನ್ನು ನಾವು ನೋಡಬಹುದು. ನಾನು ಕಾಲೇಜಿನಲ್ಲಿ ಇದ್ದಾಗ ಅನೇಕ ಮಂದಿ ಸಿಗರೇಟ್ನಲ್ಲಿ ಗಾಂಜಾ ಸೇದುತ್ತಿದ್ದರು. ನಾನು ಸ್ವತಃ ಅದನ್ನು ನೋಡಿದ್ದೇನೆ, ನಾನು ಯಾವತ್ತು ಸಿಗರೇಟ್ ಸೇದಿಲ್ಲ. ಡ್ರಗ್ ಅನೇಕ ಜನರ ಜೀವ ತೆಗೆದಿದೆ. ಆಫ್ರಿಕಾ ಪ್ರಜೆಗಳು ಇಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಾರೆ. ಅನೇಕ ಅಧಿಕಾರಿಗಳು ಶ್ರೇಷ್ಠ ಕೆಲಸ ಮಾಡಿದ್ದಾರೆ. ಅಧಿಕಾರಿಗಳಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ