ಡಿಜಿಪಿಯ ರಾಸಲೀಲೆ ಪ್ರಕರಣ: ರಾಮಚಂದ್ರ ರಾವ್​​ ಮೇಲಿವೆ ಹಲವು ಆರೋಪಗಳು

ಡಿಜಿಪಿ ರಾಮಚಂದ್ರ ರಾವ್ ಅವರ ವಿಡಿಯೋ ವೈರಲ್​​ ಬೆನ್ನಲ್ಲೇ ಅವರ ಮೇಲಿರುವ ಈ ಹಿಂದಿನ ಹಲವು ಗಂಭೀರ ಆರೋಪಗಳು ಮತ್ತೆ ಮುನ್ನೆಲೆಗೆ ಬಂದಿವೆ. ಕಳ್ಳಸಾಗಣೆ, ಬಿಟ್‌ಕಾಯಿನ್, ಹಣ ದುರುಪಯೋಗ, ಎನ್‌ಕೌಂಟರ್​​ ಸೇರಿದಂತೆ ಇತ್ತೀಚೆಗೆ ತಮ್ಮ ಮಗಳ ಗೋಲ್ಡ್ ಸ್ಮಗ್ಲಿಂಗ್​​ ಪ್ರಕರಣದಲ್ಲೂ ತನಿಖೆ ಎದುರಿಸುತ್ತಿದ್ದಾರೆ.

ಡಿಜಿಪಿಯ ರಾಸಲೀಲೆ ಪ್ರಕರಣ: ರಾಮಚಂದ್ರ ರಾವ್​​ ಮೇಲಿವೆ ಹಲವು ಆರೋಪಗಳು
ರಾಮಚಂದ್ರ ರಾವ್

Updated on: Jan 19, 2026 | 10:02 PM

ಬೆಂಗಳೂರು, ಜನವರಿ 19: ಡಿಜಿಪಿ ರಾಮಚಂದ್ರ ರಾವ್​​ (DGP Ramachandra rao) ಕಚೇರಿಯಲ್ಲಿಯೇ, ಅದು ಸಮವಸ್ತ್ರದಲ್ಲಿಯೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ರಾಸಲೀಲೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ಆ ಮೂಲಕ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ರಾಮಚಂದ್ರ ರಾವ್ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್​​ ಸೇರಿದಂತೆ ಹಲವು ಕೇಸ್​ಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ.

ಡಿಜಿಪಿ ರಾಮಚಂದ್ರ ರಾವ್​​ ಮೇಲಿರುವ ಆರೋಪಗಳು ಯಾವವು?

ಸದ್ಯ ರಾಮಚಂದ್ರ ರಾವ್ ಕಥೆ, ಬೇಲಿಯೇ ಎದ್ದು ಹೊಲ ಮೆಯ್ದಂತೆ ಆಗಿದೆ. ಇವರ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. 2014ರಲ್ಲಿ ಮೈಸೂರಿನ ಇಲವಾಲದಲ್ಲಿ ನಡೆದಿದ್ದ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರ ರಾವ್ ಹಣವನ್ನು ದುರ್ಬಳಕೆ ಆರೋಪ ಕೇಳಿಬಂದಿತ್ತು. ಬಸ್​ನಲ್ಲಿ ಸಾಗಿಸಲಾಗುತ್ತಿದ್ದ 2 ಕೋಟಿಗೂ ಅಧಿಕ ಹಣ ರಾಬರಿ ಮಾಡಲಾಗಿತ್ತು. ಈ ರಾಮಚಂದ್ರ ರಾವ್ ದಕ್ಷಿಣ ವಲಯದ ಐಜಿಪಿ ಆಗಿದ್ದರು. ರಿಕವರಿ ಮಾಡಲಾಗಿದ್ದ ಹಣ ದುರ್ಬಳಕೆ ‌ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್​ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆ ಅವರ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.

ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್​​: ಪೊಲೀಸ್​​ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ

2017ರಲ್ಲಿ ರಾಮಚಂದ್ರ ರಾವ್ ಬೆಳಗಾವಿ ಉತ್ತರ ವಲಯದ ಐಜಿಯಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ, 2017ರ ನವೆಂಬರ್ 30ರಂದು ನಡೆದ ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಸಂಶಯಾಸ್ಪದ ಪೊಲೀಸ್ ಎನ್‌ಕೌಂಟರ್ ಮತ್ತು ಗಂಗಾಧರ ಚಡಚಣ ಸಂಶಯಾಸ್ಪದ ಕೊಲೆ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಹೆಸರು ಕೇಳಿಬಂದಿತ್ತು. ಈ ಎರಡೂ ಪ್ರಕರಣಗಳನ್ನು ನಂತರ ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಅಂದಿನ ಸಿಐಡಿ ಎಸ್ಪಿ ಆನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ, ಈ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಪಾತ್ರ ಇಲ್ಲ ಎಂಬುವುದು ಸಾಬೀತಾಗಿತ್ತು. ಬಳಿಕ ಕಲಬುರಗಿ ಐಜಿಯಾಗಿದ್ದಾಗಲೂ ಮತ್ತೊಂದು ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಹತ್ವದ ಹೇಳಿಕೆ

2024ರಲ್ಲಿ ಮಗನ ಹೆಸರಲ್ಲಿ ಬಿಟ್ ಕಾಯಿನ್​ನಲ್ಲಿ ಹೂಡಿಕೆ ಆರೋಪ ಕೇಳಿಬಂದಿತ್ತು. ಇನ್ನು ಇತ್ತೀಚೆಗೆ ಮಗಳು ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್​​ಗೆ ಎಸ್ಕಾರ್ಟ್ ಕೊಟ್ಟ ಆರೋಪದಲ್ಲೂ ರಾಮಚಂದ್ರ ರಾವ್​ ಸಸ್ಪೆಂಡ್​​ ಆಗಿದ್ದರು. ಹೀಗೆ ರಾಮಚಂದ್ರ ರಾವ್​​ ತಮ್ಮ ಅಧಿಕಾರದಲ್ಲಿರುವಾಗಲೇ ಸಾಕಷ್ಟು ಆರೋಪಗಳನ್ನು ಮೈಮೇಲೆ ಎಳೆದುಕೊಂಡಿದ್ದರು.

ವರದಿ: ವಿಕಾಸ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.