ಸಚಿವರ ಬುಡಕ್ಕೆ ಅಬಕಾರಿ ಡಿಸಿ ಲಂಚ ಪ್ರಕರಣ: ಆರ್ಬಿ ತಿಮ್ಮಾಪುರಗೆ ಸಂಕಷ್ಟ
ಮೊನ್ನೆಯಷ್ಟೇ ಬೆಂಗಳೂರು ನಗರ ಅಬಕಾರಿ ಡಿಸಿ ಜಗದೀಶ್ ನಾಯ್ಕ್ 25 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ರು. ಈ ಕೇಸ್ ನಲ್ಲಿ ಇನ್ನಿಬ್ಬರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಲಾಗಿತ್ತು. ಆದರೆ ಈ ಕೇಸ್ ಈಗ ರಾಜ್ಯ ಸರ್ಕಾರದ ಪವರ್ ಫುಲ್ ಖಾತೆಯ ಸಚಿವ ಆರ್.ಬಿ.ತಿಮ್ಮಾಪುರಗೆ ಸುತ್ತಿಕೊಂಡಿದೆ. ಡಿಸಿ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೇ ಈಗ ಸಚಿವರ ವಿರುದ್ಧವೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು, (ಜನವರಿ 19): ಅಬಕಾರಿ ಡಿಸಿ ಲೋಕಾ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಅವರಿಗೂ ಸಂಕಷ್ಟ ಎದುರಾಗಿದೆ. ಲಂಚದ ಬಹುಪಾಲು ಹಣವನ್ನ ಮಿನಿಸ್ಟರ್‌ಗೆ ಕೊಡಬೇಕು ಎನ್ನುವ ಅಬಕಾರಿ ಡಿಸಿಯ (Excise DC) ಆಡಿಯೊ ಆಧಾರದ ಮೇಲೆ ಆರ್.ಬಿ ತಿಮ್ಮಾಪುರ್ (RB Timmapur) ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಹೀಗಾಗಿ ಅಬಕಾರಿ ಲೈಸೆನ್ಸ್ ಗಾಗಿ ಕೋಟಿ ಕೋಟಿ ರೂಪಾಯಿ ಲಂಚ ಕೇಳಿದ್ದ ಅಬಕಾರಿ ಡಿಸಿ ಪ್ರಕರಣ ಇದೀಗ ಸಚಿವರ ಬುಡಕ್ಕೂ ಬಂದಿದೆ.
ಬ್ಯಾಟರಾಯನಪುರ ಕಚೇರಿಯಲ್ಲಿ 25 ಲಕ್ಷ ರೂ. ಲಂಚ ಸ್ವೀಕರಿಸುವ ಕೆಲವೇ ನಿಮಿಷಗಳ ಮುಂಚೆ ದೂರುದಾರ ಲಕ್ಷ್ಮೀನಾರಾಯಣ ಮತ್ತು ಡಿಸಿ ಜಗದೀಶ್ ನಾಯ್ಕ್ ಲೈಸೆನ್ಸ್ ಡೀಲಿಂಗ್ ಮಾತಾಡಿದ್ದರು. ಈ ವೇಳೆ ಡಿಸಿ ಜಗದೀಶ್ ಲಂಚದ ಹಣವನ್ನ ಕೆಲವು ಅಧಿಕಾರಿಗಳ ಜೊತೆ ಸಚಿವರಿಗೂ ಕೊಡಬೇಕು ಎಂದಿದ್ದರು. ಇದೆಲ್ಲವನ್ನ ದೂರುದಾರರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಇದೀಗ ಈ ಆಡಿಯೋ ಆಧಾರದ ಮೇಲೆ ಸಚಿವರ ವಿರುದ್ಧವೇ ಲಕ್ಷ್ಮೀನಾರಾಯಣ ದೂರು ನೀಡಿದ್ದಾರೆ.
ಇದನ್ನೂ ನೋಡಿ: 25 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಸಿಕ್ಕಿದ್ದ ಅಬಕಾರಿ ಉಪ ಆಯುಕ್ತ
ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಅವರ ಪುತ್ರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್-7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಆರೋಪಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ತಮ್ಮ ಮೇಲಿನ ಆರೋಪ ಅಲ್ಲಗೆಳೆದ ಸಚಿವ
ಇನ್ನು ಅಬಕಾರಿ ಇಲಾಖೆ ಲಂಚ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ಬಿ ತಿಮ್ಮಾಪುರ್, ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಇದು ನನ್ನ ವಿರುದ್ಧದ ಕುತಂತ್ರ. ನನ್ನ ತೇಜೋವಧೆ ಮಾಡುವ ಕೆಲಸ, ನಾನು ಕಾನೂನು ಹೋರಾಟ ಮಾಡುತ್ತೇನೆ. ಯಾರೋ ಹೇಳಿದಾಕ್ಷಣ ನನ್ನ ಪಾತ್ರ ಇದೆ ಅಂತಾನಾ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಲೋಕಾಯುಕ್ತ ಎಸ್ ಪಿ ಶಿವಪ್ರಕಾಶ್ ದೇವರಾಜ್ ಗೆ ದೂರುದಾರ ಲಕ್ಷ್ಮೀನಾರಾಯಣ ದೂರು ನೀಡಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಲೋಕಾಯುಕ್ತರು ಮಂತ್ರಿ ವಿರುದ್ಧ ಅದ್ಯಾವ ರೀತಿ ತನಿಖೆ ನಡೆಸುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9. ಬೆಂಗಳೂರು
