ಡಿಜಿಪಿಯ ರಾಸಲೀಲೆ ಪ್ರಕರಣ: ರಾಮಚಂದ್ರ ರಾವ್ ಮೇಲಿವೆ ಹಲವು ಆರೋಪಗಳು
ಡಿಜಿಪಿ ರಾಮಚಂದ್ರ ರಾವ್ ಅವರ ವಿಡಿಯೋ ವೈರಲ್ ಬೆನ್ನಲ್ಲೇ ಅವರ ಮೇಲಿರುವ ಈ ಹಿಂದಿನ ಹಲವು ಗಂಭೀರ ಆರೋಪಗಳು ಮತ್ತೆ ಮುನ್ನೆಲೆಗೆ ಬಂದಿವೆ. ಕಳ್ಳಸಾಗಣೆ, ಬಿಟ್‌ಕಾಯಿನ್, ಹಣ ದುರುಪಯೋಗ, ಎನ್‌ಕೌಂಟರ್ ಸೇರಿದಂತೆ ಇತ್ತೀಚೆಗೆ ತಮ್ಮ ಮಗಳ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲೂ ತನಿಖೆ ಎದುರಿಸುತ್ತಿದ್ದಾರೆ.

ಬೆಂಗಳೂರು, ಜನವರಿ 19: ಡಿಜಿಪಿ ರಾಮಚಂದ್ರ ರಾವ್ (DGP Ramachandra rao) ಕಚೇರಿಯಲ್ಲಿಯೇ, ಅದು ಸಮವಸ್ತ್ರದಲ್ಲಿಯೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ರಾಸಲೀಲೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ಆ ಮೂಲಕ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ರಾಮಚಂದ್ರ ರಾವ್ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಸೇರಿದಂತೆ ಹಲವು ಕೇಸ್ಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ.
ಡಿಜಿಪಿ ರಾಮಚಂದ್ರ ರಾವ್ ಮೇಲಿರುವ ಆರೋಪಗಳು ಯಾವವು?
ಸದ್ಯ ರಾಮಚಂದ್ರ ರಾವ್ ಕಥೆ, ಬೇಲಿಯೇ ಎದ್ದು ಹೊಲ ಮೆಯ್ದಂತೆ ಆಗಿದೆ. ಇವರ ಮೇಲೆ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. 2014ರಲ್ಲಿ ಮೈಸೂರಿನ ಇಲವಾಲದಲ್ಲಿ ನಡೆದಿದ್ದ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರ ರಾವ್ ಹಣವನ್ನು ದುರ್ಬಳಕೆ ಆರೋಪ ಕೇಳಿಬಂದಿತ್ತು. ಬಸ್ನಲ್ಲಿ ಸಾಗಿಸಲಾಗುತ್ತಿದ್ದ 2 ಕೋಟಿಗೂ ಅಧಿಕ ಹಣ ರಾಬರಿ ಮಾಡಲಾಗಿತ್ತು. ಈ ರಾಮಚಂದ್ರ ರಾವ್ ದಕ್ಷಿಣ ವಲಯದ ಐಜಿಪಿ ಆಗಿದ್ದರು. ರಿಕವರಿ ಮಾಡಲಾಗಿದ್ದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆ ಅವರ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.
ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್: ಪೊಲೀಸ್ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ
2017ರಲ್ಲಿ ರಾಮಚಂದ್ರ ರಾವ್ ಬೆಳಗಾವಿ ಉತ್ತರ ವಲಯದ ಐಜಿಯಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ, 2017ರ ನವೆಂಬರ್ 30ರಂದು ನಡೆದ ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಸಂಶಯಾಸ್ಪದ ಪೊಲೀಸ್ ಎನ್‌ಕೌಂಟರ್ ಮತ್ತು ಗಂಗಾಧರ ಚಡಚಣ ಸಂಶಯಾಸ್ಪದ ಕೊಲೆ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಹೆಸರು ಕೇಳಿಬಂದಿತ್ತು. ಈ ಎರಡೂ ಪ್ರಕರಣಗಳನ್ನು ನಂತರ ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಅಂದಿನ ಸಿಐಡಿ ಎಸ್ಪಿ ಆನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ, ಈ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಅವರ ಪಾತ್ರ ಇಲ್ಲ ಎಂಬುವುದು ಸಾಬೀತಾಗಿತ್ತು. ಬಳಿಕ ಕಲಬುರಗಿ ಐಜಿಯಾಗಿದ್ದಾಗಲೂ ಮತ್ತೊಂದು ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಹತ್ವದ ಹೇಳಿಕೆ
2024ರಲ್ಲಿ ಮಗನ ಹೆಸರಲ್ಲಿ ಬಿಟ್ ಕಾಯಿನ್ನಲ್ಲಿ ಹೂಡಿಕೆ ಆರೋಪ ಕೇಳಿಬಂದಿತ್ತು. ಇನ್ನು ಇತ್ತೀಚೆಗೆ ಮಗಳು ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ಗೆ ಎಸ್ಕಾರ್ಟ್ ಕೊಟ್ಟ ಆರೋಪದಲ್ಲೂ ರಾಮಚಂದ್ರ ರಾವ್ ಸಸ್ಪೆಂಡ್ ಆಗಿದ್ದರು. ಹೀಗೆ ರಾಮಚಂದ್ರ ರಾವ್ ತಮ್ಮ ಅಧಿಕಾರದಲ್ಲಿರುವಾಗಲೇ ಸಾಕಷ್ಟು ಆರೋಪಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ವರದಿ: ವಿಕಾಸ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
