ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗಳಿಂದ ಸುಳ್ಳು ಮಾಹಿತಿ; ಜಿಲ್ಲಾಧಿಕಾರಿಯಿಂದ ನೋಟಿಸ್ ಜಾರಿ

|

Updated on: Apr 30, 2021 | 1:50 PM

ಇದಲ್ಲದೇ ಸುಳ್ಳು ಮಾಹಿತಿ ನೀಡಿ ದರ ನಿಗದಿ ಪ್ರದರ್ಶನ ಮಾಡದೇ ಬೇಜಾವಾಬ್ದಾರಿತನ ಪ್ರದರ್ಶನ ಮಾಡಿದ ಮೂರು ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಶೋಕಾಸ್ ನೊಟೀಸ್ ನೀಡುವ ಮೂಲಕ ನೊಟೀಸ್​ಗೆ ಸ್ಪಂದಿಸಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗಳಿಂದ ಸುಳ್ಳು ಮಾಹಿತಿ; ಜಿಲ್ಲಾಧಿಕಾರಿಯಿಂದ ನೋಟಿಸ್ ಜಾರಿ
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆ
Follow us on

ಹುಬ್ಬಳ್ಳಿ: ದೇಶಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದ್ದು, ಜನರು ತಲ್ಲಣಗೊಂಡಿದ್ದಾರೆ. ಇನ್ನೊಂದೆಡೆ ಕೊರೊನಾ ಪೀಡಿತರಿಗೆ ಅದೆಷ್ಟೋ ಕಡೆ ಬೆಡ್ ಇಲ್ಲದೇ ಪರದಾಡುವಂತಹ ಸ್ಥಿತಿ ಬಂದೊದಗಿದೆ. ಆದರೆ ಸರ್ಕಾರದ ಆದೇಶವನ್ನ ಗಾಳಿಗೆ ತೂರಿರುವ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗಳು ಮಾಡಿದ ಯಡವಟ್ಟಿನಿಂದಾಗಿ ಇದೀಗ ಜಿಲ್ಲೆಯ ಆಸ್ಪತ್ರೆಗಳಿಗೆ ನೊಟೀಸ್ ಜಾರಿ ಮಾಡಿದ್ದು, ಎಚ್ಚರಿಕೆ ನೀಡಲಾಗಿದೆ.

ಕೊರೊನಾ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ನೀಡಿದ ಆದೇಶಗಳನ್ನ ಹುಬ್ಬಳ್ಳಿಯಲ್ಲಿರುವ ಕೆಲ ಖಾಸಗಿ ಆಸ್ಪತ್ರೆಗಳು ಬೆಲೆ ಕೊಡಲಿಲ್ಲ. ಸರ್ಕಾರ ಹಾಗೂ ಧಾರವಾಡ ಜಿಲ್ಲಾಡಳಿತದ ಸೂಚನೆಗಳ ಕಡೆಗೆ ಗಮನ ನೀಡದೆ ಅಮಾನವೀಯವಾಗಿ ವರ್ತಿಸಿವೆ. ಹೀಗೆ ವರ್ತಿಸಿರುವ ಖಾಸಗಿ ಆಸ್ಪತ್ರೆಗಳಿಗೆ ಇದೀಗ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಶೋಕಾಸ್ ನೊಟೀಸ್ ನೀಡುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಕೊರೊನಾ ಎರಡನೇ ಎಲೆ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಾಗಿದೆ. ಅಲ್ಲದೇ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿದ್ದು, ಹೆಚ್ಚಿನ ಬೆಡ್​ಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಗಳ ಶೇಕಡಾ 50 ರಷ್ಟು ಬೆಡ್ ಅನ್ನು ಕೊರೊನಾ ಸೋಂಕಿತರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಕೊವಿಡ್ ಪೀಡಿತರಿಗೆ ಖಾಸಗಿ ಆಸ್ಪತ್ರೆಗಳು ಶೇಕಡಾ 50 ರಷ್ಟು ಬೆಡ್​ಗಳನ್ನ ನೀಡಬೇಕೆಂದು ಈಗಾಗಲೇ ರಾಜ್ಯ ಸರ್ಕಾರ ಹಾಗೂ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆ, ತತ್ವದರ್ಶ ಆಸ್ಪತ್ರೆ ಹಾಗೂ ಹುಬ್ಬಳ್ಳಿ‌ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳು ಸರ್ಕಾರದ ಈ ನಿಯಮಗಳನ್ನ ಗಾಳಿಗೆ ತೂರಿ ಬೆಡ್​ಗಳನ್ನ ನೀಡಿದ್ದೇವೆಂದು ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿವೆ. ಇನ್ನು ಪ್ರಮುಖವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಅವರಿಂದಲೂ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದರೂ ಸುಳ್ಳು ಮಾಹಿತಿ ನೀಡಿವೆ.

ಇದಲ್ಲದೇ ಸುಳ್ಳು ಮಾಹಿತಿ ನೀಡಿ ದರ ನಿಗದಿ ಪ್ರದರ್ಶನ ಮಾಡದೇ ಬೇಜಾವಾಬ್ದಾರಿತನ ಪ್ರದರ್ಶನ ಮಾಡಿದ ಮೂರು ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಶೋಕಾಸ್ ನೊಟೀಸ್ ನೀಡುವ ಮೂಲಕ ನೊಟೀಸ್​ಗೆ ಸ್ಪಂದಿಸಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಒಟ್ಟಾರೆ ಸಾಮಾನ್ಯ ದಿನಗಳಲ್ಲಿ ಬಡ ಜನತೆಯ ರಕ್ತ ಹೀರುವ ಖಾಸಗಿ ಆಸ್ಪತ್ರೆಗಳು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೇ ಈ ರೀತಿ ಬೇಜಾವಾಬ್ದಾರಿತನದಿಂದ ವರ್ತಿಸುತ್ತಿರೋದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಇಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತ ಸಾಮಾಜಿಕ‌ ಕಳಕಳಿಗೆ ಮುಂದಾಗಬೇಕಿದೆ.

ಇದನ್ನೂ ಓದಿ:
ಲಸಿಕೆಗಾಗಿ 18-45 ವರ್ಷದವರು ನಾಳೆ ಆಸ್ಪತ್ರೆಗೆ ಹೋಗಬೇಡಿ, ಅಧಿಕೃತವಾಗಿ ಹೇಳೋ ತನಕ ಕಾಯಬೇಕು: ಡಾ.ಸುಧಾಕರ್

ಗಣಿನಾಡಿನಲ್ಲಿ ವೆಂಟಿಲೇಟರ್ ಕೊರತೆ; ಸಾವಿನ ಕದ ತಟ್ಟುತ್ತಿರುವ ಕೊರೊನಾ ಸೋಂಕಿತರು

(Dharwad DC issues a notice to Hubballi private hospitals for fake information)