ಧಾರವಾಢ: ಮುಂಗಾರು ಹಂಗಾಮಿನಲ್ಲಿ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಈ ಬಾರಿಯಾದರೂ ಉತ್ತಮ ಫಸಲು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ರೈತರ ಉತ್ಸಾಹಕ್ಕೆ ಆರಂಭದಲ್ಲಿಯೇ ಧಕ್ಕೆ ಎದುರಾಗಿದೆ. ಜಿಲ್ಲೆಯ ಬಹುತೇಕ ರೈತರು ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದಾರೆ. ಆದರೆ ರೈತರ ದುರಾದೃಷ್ಟವೇನೋ ಎಂಬಂತೆ ಅನೇಕ ಕಡೆಗಳಲ್ಲಿ ಬೀಜ ಮೊಳಕೆಯೇ ಬಂದಿಲ್ಲ. ಇದು ಸಹಜವಾಗಿಯೇ ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಇದಕ್ಕೆ ಕೃಷಿ ಇಲಾಖೆಯಿಂದ ನೀಡಲಾಗಿರುವ ಕಳಪೆ ಬೀಜಗಳೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ನಾಗಪ್ಪ ತಮ್ಮ ಎರಡು ಎಕರೆ ಜಮೀನಿನಲ್ಲಿ ಈ ಬಾರಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ 15 ದಿನ ಕಳೆದರೂ ಕಾಳುಗಳು ಮೊಳಕೆಯೊಡಯದೇ ಇದ್ದಾಗ ನಾಗಪ್ಪ ಮತ್ತೆ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬಿತ್ತನೆ ಬೀಜ ತಂದಿದ್ದಾರೆ. ಈ ಬಾರಿ ಸಂಪರ್ಕ ಕೇಂದ್ರದಲ್ಲಿ ನಾಗಪ್ಪ ಅವರಿಗೆ ಕಾವೇರಿ ಕಂಪನಿಯ ಬೀಜಗಳನ್ನು ನೀಡಿದ್ದಾರೆ. ಈ ಬೀಜಗಳನ್ನು ನಾಟಿ ಮಾಡಿದರೂ ಬೀಜಗಳು ಮೊಳಕೆಯೇ ಒಡೆದಿಲ್ಲ. ಇದರಿಂದಾಗಿ ಆಕ್ರೋಶಗೊಂಡ ನಾಗಪ್ಪ ಮತ್ತೆ ಧಾರವಾಡದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕೇಳಿದ್ದಾರೆ. ಆದರೆ ಆದಿಕಾರಿಗಳು ಇದಕ್ಕೆ ಸರಿಯಾಗಿ ಉತ್ತರ ನೀಡಿಲ್ಲ. ಬಿತ್ತನೆ ಕಾರ್ಯಕ್ಕೆ ಹಾಗೂ ಗೊಬ್ಬರಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡಿದ್ದೇನೆ. ಆದರೆ ಇಷ್ಟೆಲ್ಲಾ ಹಣ ಖರ್ಚು ಮಾಡಿದರೂ ಇದರಿಂದಾಗಿ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ನಾಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ನಾಗಪ್ಪನವರದಷ್ಟೇ ಸಮಸ್ಯೆಯಲ್ಲ. ಬದಲಿಗೆ ಈ ಸಮಸ್ಯೆ ಗ್ರಾಮದ ಅನೇಕ ರೈತರದ್ದಾಗಿದೆ. ಕೆಲವು ಕಡೆಗಳಲ್ಲಿ ಬೀಜ ಮೊಳಕೆಯೊಡೆದರೂ ಒಂದು ತಿಂಗಳಿಗೆ ಸಸಿ ಮುರಿದು ಬೀಳುತ್ತಿದೆ. ಬೆಳೆಯಲ್ಲಿ ಯಾವುದೇ ಶಕ್ತಿಯೇ ಇಲ್ಲದಂತಾಗಿದೆ. ಹೀಗಾಗಿ ಮೆಕ್ಕೆಜೋಳ ಬಿತ್ತನೆ ಮಾಡಿದ ರೈತರು ಚಿಂತೆಗೀಡಾಗಿದ್ದಾರೆ. ಇನ್ನು ಈ ಸಮಸ್ಯೆಯನ್ನು ತೆಗೆದುಕೊಂಡು ಕೃಷಿ ಇಲಾಖೆ ಅಧಿಕಾರಿಗಳ ಬಳಿ ಹೋದರೆ, ನಾಟಿ ಮಾಡುವಾಗಲೇ ಸರಿಯಾಗಿ ಕೆಲಸ ಮಾಡಿಲ್ಲ. ಇದರಿಂದಾಗಿ ಮೊಳಕೆಯೊಡೆಯುವುದರಲ್ಲಿ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಅವರನ್ನು ಕೇಳಿದರೆ ಸಾಮಾನ್ಯವಾಗಿ ಕೃಷಿ ಇಲಾಖೆಯಿಂದ ನೀಡುವ ಬಿತ್ತನೆ ಬೀಜಗಳನ್ನು ಸರಿಯಾಗಿ ಪರೀಕ್ಷೆ ಮಾಡಿಯೇ ನೀಡಲಾಗಿರುತ್ತದೆ. ಇಂತಹ ಸಮಸ್ಯೆ ಎಲ್ಲಿಯೂ ಬಂದಿಲ್ಲ. ಆದರೂ ಈ ಸಮಸ್ಯೆಯಾಗಿದೆ ಅಂದರೆ ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:
ಹಾವೇರಿ: ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುವಿನ ಕಾಟ; ಬೆಳೆ ರಕ್ಷಣೆ ಕ್ರಮಗಳ ಬಗ್ಗೆ ಕೃಷಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ
ಬಳ್ಳಾರಿಯಲ್ಲಿ ಕಳಪೆ ಸೂರ್ಯಕಾಂತಿ ಬೀಜ ವಿತರಣೆ; ಕೃಷಿ ಅಧಿಕಾರಿಗಳ ವಿರುದ್ಧ ನೊಂದ ರೈತರ ಆಕ್ರೋಶ