ಬಳ್ಳಾರಿಯಲ್ಲಿ ಕಳಪೆ ಸೂರ್ಯಕಾಂತಿ ಬೀಜ ವಿತರಣೆ; ಕೃಷಿ ಅಧಿಕಾರಿಗಳ ವಿರುದ್ಧ ನೊಂದ ರೈತರ ಆಕ್ರೋಶ
ಕೂಡ್ಲಿಗಿ ತಾಲೂಕಿನಲ್ಲಿ ನೂರಾರು ರೈತರು ಇದೇ ಸೂರ್ಯಕಾಂತಿ ಬೀಜ ತೆಗೆದುಕೊಂಡು ಬಿತ್ತನೆ ಮಾಡಿದ್ದಾರೆ. ಆದರೆ ಸರಿಯಾಗಿ ಮೊಳಕೆಯೊಡೆದಿಲ್ಲ. ಹೀಗಾಗಿ ರೈತ ಸಂಪರ್ಕ ಕೇಂದ್ರದಿಂದ ವಿತರಣೆ ಮಾಡಿರುವ ಬೀಜ ಕಳಪೆಯಾಗಿವೆ ಎನ್ನುವುದು ಗೊತ್ತಾಗಿದೆ.
ಬಳ್ಳಾರಿ: ಕೊರೊನಾ ಎರಡನೇ ಅಲೆಯ ತೀವ್ರತೆಯಿಂದಾಗಿ ಲಾಕ್ಡೌನ್ ಜಾರಿಗೆ ತರಲಾಗಿದ್ದು, ಇದರಿಂದ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಮತ್ತು ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅದರಲ್ಲೂ ರೈತರು ಲಾಕ್ಡೌನ್ನಿಂದಾಗಿ ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಷ್ಟೇ ಲಾಕ್ಡೌನ್ ಸಡಿಲಿಕೆಯಾಗಿದ್ದು, ರೈತರು ಸುರಿದ ಮುಂಗಾರಿನ ಮಳೆಯಿಂದಾಗಿ ಕೃಷಿಯತ್ತ ಮುಖ ಮಾಡಿದ್ದಾರೆ. ಆದರೆ ಹಲವೆಡೆ ಮಳೆಯ ತೀವ್ರತೆಯಿಂದಾಗಿ ಬೆಳೆಗಳು ಕೊಚ್ಚಿ ಹೋಗುತ್ತಿದೆ. ಹೀಗೆ ರೈತರು ಒಂದಿಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗಲೇ ಬಳ್ಳಾರಿಯ ರೈತರು ಬಿತ್ತನೆ ಬೀಜದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ 10-15 ದಿನಗಳಿಂದಲೂ ರೈತರು ಚಿಲ್ಲಿ ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಆದರೆ ಕೃತಕ ಅಭಾವ ಸೃಷ್ಟಿಯಾಗಿರುವ ಚಿಲ್ಲಿ ಬೀಜ ರೈತರಿಗೆ ಸಿಗುತ್ತಿಲ್ಲ. ಮತ್ತೊಂದೆಡೆ ಕೂಡ್ಲಿಗಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರದಿಂದ ನೀಡಿದ ಸೂರ್ಯಕಾಂತಿ ಬೀಜಗಳೇ ಕಳಪೆಯಾಗಿರುವುದು ಈಗ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ‘ಬೀಜರಾಜ’ ಹೆಸರಿನ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಕೃಷಿಕರು ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿ ಎರಡು ವಾರ ಕಳೆದರೂ ಮೊಳಕೆಯೊಡೆಯದೇ ಇರುವುದರಿಂದ ರೈತರು ನಷ್ಟ ಅನುಭವಿಸಬೇಕಾಗಿದೆ. ಈ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಕರ್ನಾಟಕ ಬೀಜ ನಿಗಮ ಪೂರೈಸಿದ್ದನ್ನು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ವಿತರಿಸಿದ್ದಾರೆ. ಆದರೆ ಈ ಬಿತ್ತನೆ ಬೀಜ ಈಗ ರೈತರ ಕೃಷಿ ಹುಮ್ಮಸ್ಸನ್ನು ಕುಂದಿಸಿದೆ.
ಕೊರೋನಾ ಸಂಕಷ್ಟ ಕಾಲದಲ್ಲೂ ಭೂಮಿಯನ್ನೇ ನಂಬಿದ ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಬೀಜದಿಂದ ಆಕ್ರೋಶಗೊಂಡಿರುವ ರೈತರು ಕಾನಹೊಸಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ರೈತರು, ಕೃಷಿ ಇಲಾಖೆಯಿಂದ ವಿತರಿಸಿದ ಕಳಪೆ ಬಿತ್ತನೆ ಬೀಜದಿಂದ ರೈತರಿಗೆ ಮೋಸವಾಗಿದೆ. ಇದರಿಂದ ಅನ್ನದಾತರಿಗೆ ಆಗಿರುವ ನಷ್ಟಕ್ಕೆ ಒಂದು ವರ್ಷದ ಬೆಳೆಯ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ರೈತ ವಿರೇಶ್ ಒತ್ತಾಯಿಸಿದ್ದಾರೆ.
ಕೂಡ್ಲಿಗಿ ತಾಲೂಕಿನಲ್ಲಿ ನೂರಾರು ರೈತರು ಇದೇ ಸೂರ್ಯಕಾಂತಿ ಬೀಜ ತೆಗೆದುಕೊಂಡು ಬಿತ್ತನೆ ಮಾಡಿದ್ದಾರೆ. ಆದರೆ ಸರಿಯಾಗಿ ಮೊಳಕೆಯೊಡೆದಿಲ್ಲ. ಹೀಗಾಗಿ ರೈತ ಸಂಪರ್ಕ ಕೇಂದ್ರದಿಂದ ವಿತರಣೆ ಮಾಡಿರುವ ಬೀಜ ಕಳಪೆಯಾಗಿವೆ ಎನ್ನುವುದು ಗೊತ್ತಾಗಿದೆ. ಈಗಾಗಲೇ ಜಮೀನು ಸಿದ್ಧತೆ ಮಾಡಿಕೊಂಡು, ಸಾವಿರಾರು ವೆಚ್ಚ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ ಈಗ ಅಧಿಕಾರಿಗಳು ಬೇರೆ ಬೀಜ ಕೊಡುವುದಾಗಿ ಹೇಳುತ್ತಿದ್ದಾರೆ. ರೈತರಿಗೆ ಆಗಿರುವ ನಷ್ಟ ಭರಿಸುವವರು ಯಾರು ಎನ್ನುವುದು ಈ ಭಾಗದ ರೈತರ ಪ್ರಶ್ನೆಯಾಗಿದೆ.
ಕೂಡ್ಲಿಗಿ ತಾಲೂಕಿನಲ್ಲಿ ಮಳೆಯಾಶ್ರಿತ ಬೆಳೆಗಳೇ ಹೆಚ್ಚು. ಆರಂಭದಲ್ಲಿ ಮುಂಗಾರು ಮಳೆ ಬಂದಿದ್ದರಿಂದ ರೈತರು ಬಿತ್ತನೆ ಮಾಡಿದ್ದರು. ಆದರೆ ಈಗ ಮತ್ತೆ ಬೇರೆ ಬೀಜ ತೆಗೆದುಕೊಂಡು ಬಿತ್ತನೆ ಮಾಡಿದರೆ ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ಅವರನ್ನು ಕೇಳಿದರೆ ಬೀಜ ಮೊಳಕೆಯೊಡೆಯದಿರುವುದು ಗಮನಕ್ಕೆ ಬಂದಿದೆ. ಆ ರೈತರಿಗೆ ಬೇರೆ ಬೀಜ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಕಂಪನಿಯ ಬೀಜಗಳು ಕಳಪೆಯಾಗಿರುವುದರ ಬಗ್ಗೆ ನೋವು ಓದಿದ್ದೇವೆ. ಆದರೆ ಸರ್ಕಾರವೇ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡುವ ಬೀಜಗಳು ಕೂಡ ಈಗ ಕಳಪೆಯಾಗಿದೆ. ಒಟ್ಟಾರೆ ರೈತರಿಗೆ ಒಂದಿಲ್ಲಾ ಒಂದು ಸಮಸ್ಯೆ ಎದುರಾಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
ಕಳಪೆ ಈರುಳ್ಳಿ ಬೀಜ ನೀಡಿದ ಕಲಾಶ್ ಕಂಪನಿ; ಪರಿಹಾರಕ್ಕೆ ಚಿತ್ರದುರ್ಗ ರೈತರ ಆಗ್ರಹ
ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಪರದಾಟ; ಬೆಳಗ್ಗೆ ಮೂರು ಗಂಟೆಯಿಂದ ಗೋದಾಮಿನ ಮುಂದೆ ಕಾದ ರೈತರಿಗೆ ನಿರಾಸೆ