ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಪರದಾಟ; ಬೆಳಗ್ಗೆ ಮೂರು ಗಂಟೆಯಿಂದ ಗೋದಾಮಿನ ಮುಂದೆ ಕಾದ ರೈತರಿಗೆ ನಿರಾಸೆ

ಮೆಣಸಿನಕಾಯಿ ಬೀಜದ ಡೀಲರ್ಸ್​ಗಳು ಪ್ರತಿ ಕೆಜಿ ಮೆಣಸಿನಕಾಯಿ ಬೀಜಕ್ಕೆ 80 ಸಾವಿರ ರೂಪಾಯಿ ಇದ್ದರೆ ಅದನ್ನು 1.30 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಬ್ಲಾಕ್​ನಲ್ಲಿ ಮೆಣಸಿನಕಾಯಿ ಬೀಜಗಳನ್ನು ಮಾರಾಟ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಪರದಾಟ; ಬೆಳಗ್ಗೆ ಮೂರು ಗಂಟೆಯಿಂದ ಗೋದಾಮಿನ ಮುಂದೆ ಕಾದ ರೈತರಿಗೆ ನಿರಾಸೆ
ಬೆಳಗ್ಗೆ ಮೂರು ಗಂಟೆಯಿಂದ ಗೋದಾಮಿನ ಮುಂದೆ ಕಾದ ರೈತರಿಗೆ ನಿರಾಸೆ

ಬಳ್ಳಾರಿ: ಕೊರೊನಾ ಎರಡನೇ ಅಲೆಯ ಪರಿಣಾಮವಾಗಿ ಲಾಕ್​ಡೌನ್ ಜಾರಿಗೆ ತರಲಾಗಿದೆ. ಇದರಿಂದಾಗಿ ಕೂಲಿ ಕಾರ್ಮಿಕರು, ವ್ಯಾಪಾರಿಗಳು ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ರೈತರು ನಷ್ಟ ಅನುಭವಿಸಿದ್ದು, ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಹೊಲದಲ್ಲಿಯೇ ನಾಶ ಮಾಡಿರುವ ಬಗ್ಗೆ ಈಗಾಗಲೇ ನಾವು ಓದಿದ್ದೇವೆ. ಹೀಗಿರುವಾಗ ಬಳ್ಳಾರಿ ಜಿಲ್ಲೆಯ ರೈತರು ಮುಂಗಾರು ಮಳೆಯಿಂದಾಗಿ ಮತ್ತೆ ಕೃಷಿ ಮಾಡಲು ಉತ್ಸಾಹಿಗಳಾಗಿದ್ದಾರೆ. ಆದರಲ್ಲೂ ಈ ಭಾಗದ ಜನ ಮೆಣಸು ಹೇರಳವಾಗಿ ಬೆಳೆಯುವುದರಿಂದ ಬಿತ್ತನೆ ಬೀಜ ಕೊಂಡುಕೊಳ್ಳಲು ಗೋದಾಮಿಗೆ ಹೋಗಿದ್ದಾರೆ. ಆದರೆ ಅಲ್ಲಿ ಮೆಣಸಿನ ಬಿತ್ತನೆ ಬೀಜ ಸಿಗದೆ ಹಳ್ಳಿಗಳಿಂದ ಬಂದಿದ್ದ ಸಾವಿರಾರು ರೈತರು ವಾಪಾಸ್ ಊರುಗಳಿಗೆ ತೆರಳಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಈಗ ಮುಂಗಾರು ಮಳೆಯಾಗಿರುವುದರಿಂದ ಬಿತ್ತನೆ ಕಾರ್ಯಕ್ಕಾಗಿ ರೈತರು ಸಿದ್ಧತೆ ಮಾಡಿಕೊಳ್ಳಬೇಕು. ಅದರಲ್ಲೂ ತುಂಗಾ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತದೆ. ಇದಕ್ಕಾಗಿ ಈಗ ರೈತರು ಚಿಲ್ಲಿ ಬೀಜದ ಮೊರೆ ಹೋಗಿದ್ದಾರೆ. ಆದರೆ ಡೀಲರ್ಸ್​ಗಳು ಬೀಜದ ಕೊರತೆ ಸೃಷ್ಟಿಸಿ ಬ್ಲಾಕ್ ಮಾರ್ಕೆಟ್​ನಲ್ಲಿ ದುಪ್ಪಟ್ಟು ಬೆಲೆಗೆ ಮೇಣಸಿನ ಬೀಜವನ್ನು ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ರೈತರು ಚಿಲ್ಲಿ ಬೀಜಗಳನ್ನ ಡೀಲರ್ಸ್​ಗಳಿಗೆ ಕೊಡದೇ ವಿತರಕರಿಂದಲೇ ರೈತರಿಗೆ ಬೀಜಗಳನ್ನ ಕೊಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾರಣಕ್ಕಾಗಿ ಇವತ್ತು 5531 ಹಾಗೂ ಸಿಂಜಂತ ಮೆಣಸಿನಕಾಯಿ ಬೀಜದ ವಿತರಕರ ಗೋದಾಮು ಮುಂದೆ ಬೆಳಗಿನ ಜಾವ ಮೂರು ಗಂಟೆಯಿಂದ ಸಾವಿರಾರು ರೈತರು ಕಾದಿದ್ದಾರೆ. ಆದರೆ ವಿತರಕರು ಬೀಜ ವಿತರಣೆ ಮಾಡುತ್ತಿಲ್ಲ. ಇದರಿಂದ ಸಿಟ್ಟಿಗೆದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಮೆಣಸಿನ ಬೀಜದ ವಿತರಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಕೃಷಿ ಅಧಿಕಾರಿಗಳ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮೆಣಸಿನಕಾಯಿ ಬೀಜದ ಡೀಲರ್ಸ್​ಗಳು ಪ್ರತಿ ಕೆಜಿ ಮೆಣಸಿನಕಾಯಿ ಬೀಜಕ್ಕೆ 80 ಸಾವಿರ ರೂಪಾಯಿ ಇದ್ದರೆ ಅದನ್ನು 1.30 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಬ್ಲಾಕ್​ನಲ್ಲಿ ಮೆಣಸಿನಕಾಯಿ ಬೀಜಗಳನ್ನು ಮಾರಾಟ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿ ಮೆಣಸಿನಕಾಯಿ ಬೀಜಗಳನ್ನು ಡೀಲರ್ಸ್​ಗಳಿಗೆ ಕೊಡುವ ಬದಲು ವಿತರಕರೇ ಕೊಡಲಿ, ಇಲ್ಲವೇ ಕೃಷಿ ಅಧಿಕಾರಿಗಳೇ ಕೊಡಲಿ ಎಂದು ಇಲ್ಲಿನ ರೈತರು ಪಟ್ಟು ಹಿಡಿದಿದ್ದಾರೆ.

ಕಳೆದ 8-10 ದಿನಗಳಿಂದಲೂ ನಿತ್ಯವೂ ಮೆಣಸಿನಕಾಯಿ ಬೀಜಕ್ಕಾಗಿ ರೈತರು ಅಲೆದಾಡುತ್ತಿದ್ದಾರೆ. ಆದರೆ ಎಲ್ಲಿಯೂ ಬೀಜ ಸಿಗುತ್ತಿಲ್ಲ. ಇನ್ನೂ ಈ ಬಗ್ಗೆ ಸಚಿವರಾದ ಈಶ್ವರಪ್ಪನವರ ಗಮನಕ್ಕೆ ತಂದಾಗ ಕೂಡಲೇ ಕೃಷಿ ಅಧಿಕಾರಿಗಳಿಗೆ ರೈತರ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ಜತೆಗೆ ನಿಗದಿ ಪಡಿಸಿದ ದರದಲ್ಲಿ ಬೀಜ ಮಾರಾಟವಾಗಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಜೂನ್ ತಿಂಗಳ ಆರಂಭದಲ್ಲಿಯೇ ಮೆಣಸಿನಕಾಯಿ ಸಸಿಗಳನ್ನು ಬೆಳೆಸಬೇಕು. ಹೀಗಾಗಿ ರೈತರು ಬೀಜಕ್ಕಾಗಿ ಪರದಾಡುತ್ತಿದ್ದಾರೆ. ವಿತರಕರು ಹಾಗೂ ಡೀಲರ್ಸ್​ಗಳ ಒಳ ಒಪ್ಪಂದದಿಂದಾಗಿ ರೈತರು ಈಗ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಕೃಷಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕಿದೆ.

ಇದನ್ನೂ ಓದಿ:

ರೈತರಿಗೆ ಕಳಪೆ ಈರುಳ್ಳಿ ಬೀಜ ಕೊಟ್ಟು ಮೋಸ ಮಾಡಿದ ಚಿತ್ರದುರ್ಗದ ಫರ್ಟಿಲೈಸರ್ಸ್‌ ಕಂಪನಿ

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಉಚಿತವಾಗಿ ನೀಡಲು ಒತ್ತಾಯ; ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ