ಧಾರವಾಡ: ರಂಗಾಯಣ ಧಾರವಾಡ ವತಿಯಿಂದ ಪಂಡಿತ ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ‘ರಂಗ ನವಮಿ ನಾಟಕೋತ್ಸವ’ ವನ್ನು ಫೆಬ್ರವರಿ 20 ರಿಂದ 28ರ ವರೆಗೆ ಪ್ರತಿದಿನ ಸಂಜೆ 6.30 ಕ್ಕೆ ಆಯೋಜಿಸಲಾಗಿದೆ. ಒಂಭತ್ತು ದಿನಗಳ ಕಾಲ ನಡೆಯುವ ಈ ನಾಟಕೋತ್ಸವದಲ್ಲಿ ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಬೆಳಗಾವಿ ಮತ್ತು ಉಡುಪಿ ತಂಡಗಳ ನಾಟಕಗಳು ಪ್ರತಿದಿನ ಪ್ರದರ್ಶನಗೊಳ್ಳಲಿವೆ.
ಮಂಡ್ಯ ರಮೇಶ್ರಿಂದ ಉದ್ಘಾಟನೆ
ಫೆಬ್ರವರಿ 20 ರಂದು ನಾಟಕೋತ್ಸವವನ್ನು ರಂಗ ನಿರ್ದೇಶಕ ಹಾಗೂ ಚಲನಚಿತ್ರ ನಟರಾದ ಮಂಡ್ಯ ರಮೇಶ್ ಉದ್ಘಾಟಿಸುತ್ತಾರೆ. ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ರಂಗಾಯಣದ ನಿರ್ದೇಶಕ ರಮೇಶ ಎಸ್. ಪರವಿನಾಯ್ಕರ ಅಧ್ಯಕ್ಷತೆ ವಹಿಸುತ್ತಾರೆ ಜೊತೆಗೆ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದೇರ್ಶಕ ಎಸ್.ರಂಗಪ್ಪ, ಹಿರಿಯ ಸಾಹಿತಿ ಡಾ.ಬಾಳಣ್ಣ ಶೀಗೀಹಳ್ಳಿ, ಧಾರವಾಡ ರಂಗಸಮಾಜದ ಸದಸ್ಯ ಹಿಪ್ಪರಗಿ ಸಿದ್ಧರಾಮ, ಬಳ್ಳಾರಿ ರಂಗಸಮಾಜದ ಶಿವೇಶ್ವರಗೌಡ ಆಗಮಿಸುತ್ತಾರೆ. ಅಲ್ಲದೇ ವೃತ್ತಿ ರಂಗಭೂಮಿ ಕೇಂದ್ರದ ನಿರ್ದೇಶಕ ಹಾಗೂ ಚಲನಚಿತ್ರ ನಟ ಯಶವಂತ ಸರದೇಶಪಾಂಡೆ, ರಂಗನಿರ್ದೇಶಕ, ನಟ ಮತ್ತು ಪತ್ರಕರ್ತರಾದ ರವಿ ಕುಲಕರ್ಣಿಯವರನ್ನು ಸನ್ಮಾನಿಸಲಾಗುತ್ತದೆ.
‘ಅಕಸ್ಮಾತ್ ಹಿಂಗಾದ್ರ’ ನಗೆ ನಾಟಕ ಪ್ರದರ್ಶನ
ರಂಗನವಮಿಯ ಮೊದಲನೆಯ ದಿನ ಫೆಬ್ರವರಿ 20 ರಂದು ಯಶವಂತ ಸರದೇಶಪಾಂಡೆ ಅನುವಾದಿಸಿ, ನಿರ್ದೇಶಿಸಿರುವ ಹಾಗೂ ರವಿ ಕುಲಕರ್ಣಿ ಅವರ ಸಹ ನಿರ್ದೇಶನವಿರುವ ‘ಅಕಸ್ಮಾತ್ ಹಿಂಗಾದ್ರ’ ನಗೆ ನಾಟಕ ಪ್ರದರ್ಶನಗೊಳ್ಳಲಿದೆ. ಜಿಲ್ಲೆಯ ರಂಗಾಯಣದ ರೆಪರ್ಟರಿ ಕಲಾವಿದರು ಈ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ.
ನಿತ್ಯವೂ ಸಂಜೆ ಒಂದೊಂದು ನಾಟಕ
ಫೆಬ್ರವರಿ 21 ರಂದು ಕಲಬುರಗಿ ರಂಗಾಯಣ ಪ್ರಸ್ತುತಪಡಿಸುವ ಮತ್ತು ಮಹದೇವ ಹಡಪದ ನಿರ್ದೇಶಿಸಿರುವ ಸಿರಿಪುರಂದರ ನಾಟಕಕ್ಕೆ ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಚಾಲನೆ ನೀಡುತ್ತಾರೆ. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಜಿನದತ್ತ ಹಡಗಲಿ ಅತಿಥಿಗಳಾಗಿ ಆಗಮಿಸುವರು.
ಫೆಬ್ರವರಿ 22 ರಂದು ಕಲಬುರಗಿ ರಂಗಾಯಣ ಪ್ರಸ್ತುತಪಡಿಸುವ ಮತ್ತು ವಿಶ್ವರಾಜ್ ಪಾಟೀಲ್ ನಿರ್ದೇಶಿಸಿರುವ ತ್ರಯಸ್ಥ ನಾಟಕಕ್ಕೆ ಹಿರಿಯ ರಂಗಕರ್ಮಿ ಡಾ.ಪಾಂಡುರಂಗ ಪಾಟೀಲ ಚಾಲನೆ ನೀಡುವರು. ಜಿಲ್ಲಾ ಪಂಚಾಯತ್ ಸಿಇಓ ಡಾ. ಸುಶೀಲಾ ಬಿ. ಜಾನಪದ ತಜ್ಞ ಡಾ.ರಾಮು ಮೂಲಗಿ, ಪತ್ರಕರ್ತ ಡಾ.ಬಸವರಾಜ ಹೊಂಗಲ್ ಅತಿಥಿಗಳಾಗಿ ಆಗಮಿಸುತ್ತಾರೆ. ಕಲಬುರ್ಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿಯವರನ್ನು ಸನ್ಮಾನಿಸಲಾಗುವುದು.
ಫೆಬ್ರವರಿ 23 ರಂದು ಶಿವಮೊಗ್ಗ ರಂಗಾಯಣ ಪ್ರಸ್ತುತಿಪಡಿಸುವ ಬಿ.ಆರ್.ವೆಂಕಟರಮಣ ಐತಾಳ ನಿರ್ದೇಶಿಸಿರುವ ಚಾಣಕ್ಯ ಪ್ರಪಂಚ ನಾಟಕಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಚಾಲನೆ ನೀಡುವರು. ನಿವೃತ್ತ ಸಹಾಯಕ ಕುಲಸಚಿವ ನಾಗೇಂದ್ರ ದೊಡಮನಿ ಹಾಗೂ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಪರಿಮಳಾ ಕಲಾವಂತ ಅತಿಥಿಗಳಾಗಿ ಆಗಮಿಸುವರು. ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿಯವರನ್ನು ಸನ್ಮಾನಿಸಲಾಗುವುದು.
ಫೆಬ್ರವರಿ 24 ರಂದು ಶಿವಮೊಗ್ಗ ರಂಗಾಯಣ ಪ್ರಸ್ತುತಿಪಡಿಸುವ ಮತ್ತು ಗಣೇಶ್ ಮಂದಾರ್ತಿ ನಿರ್ದೇಶಿಸಿರುವ ಹಕ್ಕಿಕಥೆ ನಾಟಕಕ್ಕೆ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡುವರು. ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಈರಣ್ಣ ಜಡಿ ಮತ್ತು ಮಕ್ಕಳ ಸಾಹಿತಿ ಕೆ.ಎಚ್. ನಾಯಕ ಅತಿಥಿಯಾಗಿ ಆಗಮಿಸುವರು.
ಫೆಬ್ರವರಿ 25ರಂದು ಧಾರವಾಡ ರಂಗಾಯಣ ಪ್ರಸ್ತುತಪಡಿಸುವ ಹಾಗೂ ವೀಣಾ ಶರ್ಮಾ ಭೂಸನೂರಮಠ ನಿರ್ದೇಶಿಸಿರುವ ಸಾಮ್ರಾಟ್ ಅಶೋಕ ನಾಟಕಕ್ಕೆ ರಂಗಸಮಾಜದ ಸದಸ್ಯ ಡಾ.ಬಿ.ವಿ.ರಾಜಾರಾಮ ಚಾಲನೆ ನೀಡುವರು. ರಂಗಸಮಾಜದ ಸದಸ್ಯ ಪ್ರಭು ಕಪ್ಪಗಲ್, ರಂಗಕರ್ಮಿ ಡಾ.ಶಶಿಧರ ನರೇಂದ್ ಅತಿಥಿಗಳಾಗಿ ಆಗಮಿಸುವರು.
ಫೆಬ್ರವರಿ 26 ರಂದು ಬೆಳಗಾವಿ ಯುವರಂಗ ಸಾಂಸ್ಕೃತಿಕ ಸಂಸ್ಥೆ ಪ್ರಸ್ತುತಪಡಿಸುವ ಹಾಗೂ ಬಾಬಾಸಾಹೇಬ ಕಾಂಬಳೆ ನಿರ್ದೇಶಿಸಿರುವ ‘ವಿದೂಷಕ’ ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶೇಖರ್ ಮಾಸ್ತರ ಚಾಲನೆ ನೀಡುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಅತಿಥಿಗಳಾಗಿ ಆಗಮಿಸುವರು.
ಫೆಬ್ರವರಿ 27 ರಂದು ಉಡುಪಿಯ ಸ್ನೇಹಜೀವಿ ಕಲಾತಂಡ ಪ್ರಸ್ತುತಪಡಿಸುವ ಹಾಗೂ ಗಣೇಶ ರಾವ್ ಎಲ್ಲೂರು ನಿರ್ದೇಶಿಸಿರುವ ‘ಅಣ್ಣಾವಾಲಿ’ ನಾಟಕಕ್ಕೆ ರಂಗನಟ ಹಾಗೂ ಹಿರಿಯ ಪತ್ರಕರ್ತ ಡಾ.ಬಂಡು ಕುಲಕರ್ಣಿ ಚಾಲನೆ ನೀಡುವರು. ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ಮತ್ತು ರಂಗಸಮಾಜದ ಸದಸ್ಯ ಶ್ರೀಧರ ಹೆಗಡೆ ಅತಿಥಿಗಳಾಗಿ ಆಗಮಿಸುವರು.
ಫೆಬ್ರವರಿ 28 ರಂದು ಮೈಸೂರಿನ ನಟನರಂಗ ಶಾಲೆ ಪ್ರಸ್ತುತಪಡಿಸುವ ಹಾಗೂ ಮಂಡ್ಯ ರಮೇಶ್ ಅವರು ನಿರ್ದೇಶಿಸಿರುವ ‘ಚೋರ ಚರಣದಾಸ್’ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕ ಪ್ರದರ್ಶನ ಪೂರ್ವದಲ್ಲಿ ರಂಗನವಮಿ ನಾಟಕೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕ.ವಿ.ವಿ. ಕುಲಪತಿ ಡಾ.ಕೆ.ಬಿ.ಗುಡಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಬಾಳಣ್ಣ ಶೀಗಿಹಳ್ಳಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ರಂಗಸಮಾಜದ ಸದಸ್ಯರಾದ ಶ್ರೀಧರ ಹೆಗಡೆ, ಹಿಪ್ಪರಗಿ ಸಿದ್ಧರಾಮ ಉಪಸ್ಥಿತರಿರುವರು.
ರಂಗನವಮಿ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಪ್ರತಿದಿನದ ನಾಟಕಗಳ ಚಾಲನಾ ಕಾರ್ಯಕ್ರಮದಲ್ಲಿ ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪ್ರವಿನಾಯ್ಕರ್ ಅಧ್ಯಕ್ಷತೆ ವಹಿಸಲಿದ್ದು, ಪ್ರಭಾರ ಆಡಳಿತಾಧಿಕಾರಿ ಮಂಜುನಾಥ ಡೊಳ್ಳಿನ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ:
S.L. Bhyrappa | 7.5 ಗಂಟೆಗಳ ಕಾಲ ಅರಮನೆ ನಗರಿಯಲ್ಲಿ ಮೇಳೈಸಲಿದೆ.. ಎಸ್. ಎಲ್. ಭೈರಪ್ಪನವರ ‘ಪರ್ವ’ ನಾಟಕ ವೈಭವ!
ಇದನ್ನೂ ಓದಿ: Ulavi Channabasavanna Circle | ಧಾರವಾಡದಲ್ಲಿ ಉಳವಿ ಚನ್ನಬಸವಣ್ಣ ವಿನೂತನ ವೃತ್ತ ನಿರ್ಮಾಣ; 17 ಲಕ್ಷ ರೂ. ವೆಚ್ಚದ ಯೋಜನೆ