Ulavi Channabasavanna Circle | ಧಾರವಾಡದಲ್ಲಿ ಉಳವಿ ಚನ್ನಬಸವಣ್ಣ ವಿನೂತನ ವೃತ್ತ ನಿರ್ಮಾಣ; 17 ಲಕ್ಷ ರೂ. ವೆಚ್ಚದ ಯೋಜನೆ
Ulavi Channabasavanna Circle | ವೃತ್ತದಲ್ಲಿ 9 ಅಡಿ ಎತ್ತರದ ಚನ್ನಬಸವಣ್ಣನ ಕಂಚಿನ ಮೂರ್ತಿ ಸ್ಥಾಪಿಸುವ ಜೊತೆಗೆ ಅಷ್ಟಾವರಣ, ಪಂಚಾಚಾರ ಹಾಗೂ ಚನ್ನಬಸವಣ್ಣನವರು ಷಟ್‌ಸ್ಥಲ ಚಕ್ರವರ್ತಿ ಆದ್ದರಿಂದ ಷಟ್‌ಸ್ಥಲಗಳನ್ನು ರೂಪಿಸಲಾಗುತ್ತಿರುವುದು ವಿಶೇಷ. ವೃತ್ತದ ಅನತಿ ದೂರದಲ್ಲೇ ಉಳವಿ ಚನ್ನಬಸವೇಶ್ವರ ದೇವಸ್ಥಾನ ಇದೆ.
ಧಾರವಾಡ: ಧಾರವಾಡ ಅಂದ ಕೂಡಲೇ ನೆನಪಿಗೆ ಬರುವುದು ಉಳವಿ ಚನ್ನಬಸವೇಶ್ವರ ದೇವಸ್ಥಾನ (Ulavi Channabasaveshwara Temple). ಜಿಲ್ಲೆಯ ಪ್ರಸಿದ್ಧ ಸ್ಥಳಗಳ ಪೈಕಿ ಇದು ಹೆಚ್ಚು ಗಮನ ಸೆಳೆಯುವ ಸ್ಥಳ. ಇದೇ ಕಾರಣಕ್ಕೆ ಜಿಲ್ಲೆಯ ಪ್ರಮುಖ ವೃತ್ತವನ್ನು ದೇವಸ್ಥಾನದ ಆಡಳಿತ ಮಂಡಳಿ ಅಭಿವೃದ್ಧಿಪಡಿಸುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ವೃತ್ತಗಳಿದ್ದು, ಅವುಗಳಿಗೆ ಮಹಾನ್ ವ್ಯಕ್ತಿಗಳ ಹೆಸರುಗಳನ್ನು ಸಹ ನಾಮಕರಣ ಮಾಡಲಾಗಿದೆ. ಇಂಥಹ ವೃತ್ತಗಳ ಪೈಕಿ ಇನ್ನೊಂದು ವೃತ್ತ ಅಭಿವೃದ್ಧಿಗೊಳ್ಳುತ್ತಿದೆ. ಉಳವಿ ಚನ್ನಬಸವೇಶ್ವರ ಧರ್ಮಫಂಡ್ ಸಂಸ್ಥೆಯು ಹೊಸ ಮಾದರಿಯಲ್ಲಿ ವೃತ್ತ ನಿರ್ಮಿಸಲು ಕಾರ್ಯೋನ್ಮುಖವಾಗಿದೆ. (Ulavi Channabasavanna Circle)
ಸ್ಟೇಶನ್ ರಸ್ತೆಯ, ಬಾಸೆಲ್ ಮಿಶನ್ ಇಂಗ್ಲಿಷ್ ಮಾಧ್ಯಮ ಶಾಲೆ ಎದುರು, ಪ್ರಧಾನ ಅಂಚೆ ಕಚೇರಿ ಬಳಿ ಸ್ವಂತ ಖರ್ಚಿನಲ್ಲಿ ಚನ್ನಬಸವೇಶ್ವರ ವೃತ್ತವೊಂದನ್ನು ಉಳವಿ ಚನ್ನಬಸವೇಶ್ವರ ಧರ್ಮಫಂಡ್ ಸಂಸ್ಥೆ ನಿರ್ಮಿಸುತ್ತಿದೆ. ಈ ವೃತ್ತ ಹೆಸರಿಗೆ ಮಾತ್ರ ಇರದೇ ಜನರಿಗೆ ತಕ್ಕಮಟ್ಟಿಗಾದರೂ ಮಾಹಿತಿ ಸಿಗಲಿ ಎಂಬ ವಿಚಾರದಿಂದ ವಿನೂತನ ರೀತಿಯ ವೃತ್ತ ನಿರ್ಮಿಸಲಾಗುತ್ತಿದೆ.
ವಿನೂತನ ವೃತ್ತ ನಿರ್ಮಾಣ ಈ ವೃತ್ತದಲ್ಲಿ 9 ಅಡಿ ಎತ್ತರದ ಚನ್ನಬಸವಣ್ಣನ ಕಂಚಿನ ಮೂರ್ತಿ ಸ್ಥಾಪಿಸುವ ಜೊತೆಗೆ ಅಷ್ಟಾವರಣ, ಪಂಚಾಚಾರ ಹಾಗೂ ಚನ್ನಬಸವಣ್ಣನವರು ಷಟ್‌ಸ್ಥಲ ಚಕ್ರವರ್ತಿ ಆದ್ದರಿಂದ ಷಟ್‌ಸ್ಥಲಗಳನ್ನು ರೂಪಿಸಲಾಗುತ್ತಿರುವುದು ವಿಶೇಷ. ವೃತ್ತದ ಅನತಿ ದೂರದಲ್ಲೇ ಉಳವಿ ಚನ್ನಬಸವೇಶ್ವರ ದೇವಸ್ಥಾನ ಇದೆ. ಈ ವೃತ್ತಕ್ಕೆ ಮೊದಲಿನಿಂದಲೂ ಚನ್ನಬಸವಣ್ಣವರ ವೃತ್ತ ಎಂದೇ ಕರೆಯಲಾಗುತ್ತಿತ್ತು. ಇದೀಗ ವೃತ್ತಕ್ಕೆ ಹೊಸ ರೂಪ ನೀಡಲಾಗುತ್ತಿದೆ.
ಮಹಾನಗರ ಪಾಲಿಕೆ ಜಾಗ ನೀಡಲು ಒಪ್ಪಿದರೆ ಸ್ವಂತ ಖರ್ಚಿನಲ್ಲಿ ವೃತ್ತ ನಿರ್ಮಿಸುವುದಾಗಿ ಪಾಲಿಕೆಗೆ ದೇವಸ್ಥಾನದ ಸಮಿತಿ ಮನವಿ ಮಾಡಿತ್ತು. ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ 2004 ರಲ್ಲಿ ಅನುಮತಿ ಸಿಕ್ಕಿತ್ತು. ಇದೀಗ ಈ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಸುಮಾರು ಒಂದು ತಿಂಗಳಿನಿಂದ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಏಪ್ರಿಲ್ ತಿಂಗಳ ಹೊತ್ತಿಗೆ ಚೆನ್ನಬಸವಣ್ಣನವರ ನೂತನ ವೃತ್ತ ನಿರ್ಮಾಣವಾಗಲಿದೆ.
ಸುಮಾರು 17 ಲಕ್ಷ ರೂಪಾಯಿ ವೆಚ್ಚದ ಯೋಜನೆ ಸುಮಾರು 50 ಚದರ ಅಡಿ ಜಾಗದಲ್ಲಿ ಸುಮಾರು ಅಂದಾಜು ರೂ. 17 ಲಕ್ಷ ವೆಚ್ಚದಲ್ಲಿ ವೃತ್ತ ನಿರ್ಮಾಣವಾಗುತ್ತಿದೆ. ಬೇಸ್ಮೆಂಟ್ ಮೇಲೆ ಅಷ್ಟ ಕೋನಾಕಾರದ ಕಟ್ಟೆ ನಿರ್ಮಿಸಿ ಪ್ರತಿ ಕಟ್ಟೆ ಮೇಲೆ ಅಷ್ಟಾವರಣಗಳನ್ನು ನಮೂದಿಸಲಾಗುತ್ತದೆ. ಇದರ ಮೇಲಿನ 5 ಕೋನಾಕಾರದ ಕಟ್ಟೆ ಮೇಲೆ ಪಂಚಾಚಾರ ಹಾಗೂ 6 ಮೆಟ್ಟಿಲುಗಳನ್ನು ನಿರ್ಮಿಸಿ ಅವುಗಳ ಮೇಲೆ ಷಟ್‌ಸ್ಥಲಗಳನ್ನು ನಮೂದಿಸಲಾಗುವುದು. ಇವುಗಳ ಮೇಲೆ ಚನ್ನಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇದರ ಸುತ್ತ ಗಿಡಗಳನ್ನು ಸಹ ನೆಡಲಾಗುತ್ತದೆ ಎಂದು ದೇವಸ್ಥಾನದ ಟ್ರಸ್ಟಿ ಟಿ.ಎಲ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
11 ಲಕ್ಷ ವೆಚ್ಚದ ಕಂಚಿನ ಮೂರ್ತಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಪ್ಪಿಗೆ ಮೇರೆಗೆ ಚೆನ್ನಬಸವಣ್ಣನವರ ಮೂರ್ತಿಯನ್ನು ಉಳವಿ ಚನ್ನಬಸವೇಶ್ವರ ಧರ್ಮಫಂಡ್ ಸಂಸ್ಥೆಯು ದೇವಸ್ಥಾನದ ವೆಚ್ಚದಲ್ಲಿ ವಿಶೇಷ ವೃತ್ತವೊಂದನ್ನು ನಿರ್ಮಿಸುತ್ತಿದೆ. ಕೊಲ್ಲಾಪುರದಲ್ಲಿ 11 ಲಕ್ಷ ರೂಪಾಯಿ ವೆಚ್ಚದ ಕಂಚಿನ ಮೂರ್ತಿ ಸಿದ್ಧವಾಗುತ್ತಿದೆ. ಮೂರ್ತಿ ಸ್ಥಾಪನೆ, ಸಣ್ಣ ಉದ್ಯಾನವನ ನಿರ್ಮಿಸುವ ಉದ್ದೇಶವೂ ಇದ್ದು, ಏಪ್ರಿಲ್ ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಯುವ ಸಾಧ್ಯತೆ ಹೆಚ್ಚಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರಾಗಿರುವ ಡಾ.ಎಸ್.ಎಸ್.ರಾಮನಗೌಡರ್ ಹೇಳಿದರು.
ಸಾಮಾನ್ಯವಾಗಿ ಎಲ್ಲೆಡೆ ವೃತ್ತಗಳು ಇರುತ್ತವೆ. ಆದರೆ ಅವುಗಳ ಪ್ರಯೋಜನ ಅಷ್ಟಕಷ್ಟೇ. ಈ ಹಿನ್ನೆಲೆಯಲ್ಲಿ ಚನ್ನಬಸವಣ್ಣವರ ಬಗ್ಗೆ ಮಾಹಿತಿ ಸೇರಿದಂತೆ ಈ ವೃತ್ತದಲ್ಲಿ ಸಂಚರಿಸುವವರಿಗೆ ಚನ್ನಬಸವಣ್ಣವರು ಪ್ರೇರಣೆ ಆಗಲಿ ಎನ್ನುವ ಉದ್ದೇಶದಿಂದ ದೇವಸ್ಥಾನ ಸಮಿತಿ ವೃತ್ತವನ್ನು ನಿರ್ಮಿಸುತ್ತಿದ್ದು, ಸಾರ್ವಜನಿಕರಲ್ಲಿ ಸಂತಸ ಮೂಡಿದೆ.
ಇದನ್ನೂ ಓದಿ: Fatherhood; ಅಪ್ಪನಾಗುವುದೆಂದರೆ: ಉಡಾಳ ಆಗಬೇಕಂತ ಎಷ್ಟ ಪ್ರಯತ್ನ ಮಾಡಿದೆ ಅಂತೀರಿ…
ಇದನ್ನೂ ಓದಿ: Inspiration; ನಾನೆಂಬ ಪರಿಮಳದ ಹಾದಿಯಲಿ: ಆರು ರೂಪಾಯಿಗೆ ದಿನಗೂಲಿ ಅರವತ್ತರ ನಂತರ ಬರೆವಣಿಗೆ
Published On - 11:10 am, Fri, 19 February 21