ಐದೇ ದಿನದಲ್ಲಿ ಮದ್ವೆಯಾಗಬೇಕಿದ್ದ ಯುವಕನ ಹತ್ಯೆ: ತೋಟದ ಮನೆಯಲ್ಲಿ ನಡೆಯಿತು ಘೋರ ಕೃತ್ಯ

ಐದೇ ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕನೋರ್ವನ ಕೊಲೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕ ದುರಂತ ಅಂತ್ಯಕಂಡಿದ್ದಾನೆ.

ಐದೇ ದಿನದಲ್ಲಿ ಮದ್ವೆಯಾಗಬೇಕಿದ್ದ ಯುವಕನ ಹತ್ಯೆ: ತೋಟದ ಮನೆಯಲ್ಲಿ ನಡೆಯಿತು ಘೋರ ಕೃತ್ಯ
ನಿಂಗಪ್ಪ, ಕೊಲೆಯಾದ ಯುವಕ

Updated on: Jun 02, 2023 | 1:32 PM

ಧಾರವಾಡ: ಇನ್ನು ಕೇವಲ ಐದೇ ದಿನದಲ್ಲಿ ಹಸೆ ಮಣೆ ಏರಿ ಹೊಸ ಜೀವನ ಆರಂಭಿಸಬೇಕಿದ್ದ ಯುವಕ ದುರಂತ ಅಂತ್ಯಕಂಡಿದ್ದಾನೆ. ಹೌದು..ಇದೇ ಜೂನ್ 7ರಂದು ಮದುವೆಯಾಗಬೇಕಿದ್ದ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಬೂದಪ್ಪ ನವಲೂರ(28) ಕೊಲೆಯಾದ ಯುವಕ. ನಿಂಗಪ್ಪನಿಗೆ ಇದೇ ಜೂನ್ 7ರಂದು ತಾವರಗೇರೆ ಗ್ರಾಮದ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಆದ್ರೆ, ಮದುವೆಗೆ ಕೇವಲ ಐದು ದಿನಗಳು ಬಾಕಿ ಇರುವಾಗಲೇ ದುಷ್ಕರ್ಮಿಗಳು ನಿಂಗಪ್ಪನನ್ನು ಕೊಂದು ಪರಾರಿಯಾಗಿದ್ದಾರೆ. ಇದರಿಂದ ಹಸೆ ಮಣೆ ಏರಬೇಕಿದ್ದ ಮದುಮಗ ಮಸಣ ಸೇರಿದ್ದು ಮನೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮದ ತೋಟದ ಮನೆಯಲ್ಲಿ ಮಧ್ಯರಾತ್ರಿ ನಿಂಗಪ್ಪನ ಕಣ್ಣಿಗೆ ಖಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಕಲಘಟಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ, ನಿಂಗಪ್ಪನ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಾಗೇ ಕೊಲೆ ಮಾಡಿದವರು ಯಾರು ಎನ್ನುವುದು ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಪೊಲಿಸರು ತನಿಖೆ ಕೈಗೊಂಡಿದ್ದಾರೆ.