ಹುಬ್ಬಳ್ಳಿ: ನಕಲಿ ಬೀಜ (Fake seed)ಗಳ ಮಾರಾಟ ಹಿನ್ನೆಲೆ ಧಾರವಾಡ ಕೃಷಿ ಇಲಾಖೆ (Dharwad Department of Agriculture) ಅಧಿಕಾರಿಗಳು ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿರುವ ಬಿತ್ತನೆ ಬೀಜಗಳ ದಾಸ್ತಾನು ಮಳಿಗೆಗಳ ಮೇಲೆ ದಾಳಿ (Raid) ನಡೆಸಿ ಲಕ್ಷಾಂತರ ಮೌಲ್ಯದ ಅನಧಿಕೃತ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಿದ್ದಾರೆ. ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದ್ದು, 30.33 ಲಕ್ಷ ಮೌಲ್ಯದ ನಕಲಿ ಬೀಜಗಳನ್ನು ವಶಕ್ಕೆ ಪಡೆದು ಎರಡು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೈಬ್ರಿಡ್ ಮುಸುಕಿನ ಜೋಳ ಎಂಬ ಎಚ್ 14-5 ತಳಿಯ 32 ಕ್ವಿಂಟಲ್ ಬೀಜಗಳು, ಡೆಲ್ಟಾ 90 ವಿ 90 ತಳಿಯ 28 ಕ್ವಿಂಟಲ್ ಬೀಜಗಳು, ಹೈಬ್ರೀಡ್ ಮುಸುಕಿನ ಜೋಳ ಈಗಲ್ 10 ತಳಿಯ 22 ಕ್ವಿಂಟಲ್, ಹೈಬ್ರೀಡ್ ಮುಸುಕಿನಜೋಳ ಈಗಲ್ 20 ತಳಿಯ 24.4 ಕ್ವಿಂಟಲ್ ಮತ್ತು ಸೋಯಾಬಿನ್ 26.75 ಕ್ವಿಂಟಲ್ ಸೇರಿದಂತೆ ಒಟ್ಟು 30.33 ಲಕ್ಷ ಮೌಲ್ಯದ ಬೀಜಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೆ ಸಾರ್ವಜನಿಕರ ಮೇಲೆ ಗುಂಡಿನ ದಾಳಿ, ಓರ್ವ ಸಾವು, ಏಳು ಮಂದಿಗೆ ಗಾಯ
ಇಷ್ಟೊಂದು ಪ್ರಮಾಣದಲ್ಲಿ ಬೀಜಗಳು ಜಪ್ತಿಯಾಗಿದೆ ಎಂದರೆ, ಈಗಾಗಲೇ ಖರೀದಿಸಿ ಬಿತ್ತನೆ ಮಾಡಿದ ರೈತರ ಪಾಡು ಏನು? ಅಪಾರ ಪ್ರಮಾಣದ ನಕಲಿ ಬೀಜಗಳನ್ನು ನೋಡಿ ರೈತರು ಕಂಗಾಲಾಗಿದ್ದು, ಈ ಹಿಂದೆ ಇಲಾಖೆ ಎಚ್ಚೆತ್ತುಕೊಂಡಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ. ಈ ಬಗ್ಗೆ ಮುಂಚೆ ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನೇ ಕುಳಿತುಕೊಂಡಿದ್ದು ಏಕೆ? ಎಂದು ಆರೋಪಿಸಲಾಗುತ್ತಿದೆ.
ಲಂಚ ಸ್ವೀಕಾರ ಆರೋಪ, ದೇವರ ಸಮಜಾಯಿಷಿ
ವಿಜಯಪುರ: ಇಂಡಿ ತಾಲೂಕು ಆಸ್ಪತ್ರೆಯ ಕಚೇರಿ ಅಧೀಕ್ಷಕನ ಮೇಲೆ ಲಂಚ (Bribery) ಸ್ವೀಕಾರ ಆರೋಪ ಕೇಳಿಬಂದಿದ್ದು, ಸಿಬ್ಬಂದಿಗಳು ಅಧೀಕ್ಷಕನ ವಿರುದ್ಧ ತಾಲೂಕು ವೈದ್ಯಾಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ. ತಾಲೂಕು ಆಸ್ಪತ್ರೆಯ ಕಚೇರಿ ಅಧೀಕ್ಷಕ ಶಿವಾನಂದ ದೇವರ ಅವರು 2020-21 ರ ಕೊರೊನಾ ರಿಸ್ಕ್ ಅಲೌನ್ಸ್ ಹಣ ನೀಡಲು ಪ್ರತಿಯೊಬ್ಬ ಸಿಬ್ಬಂದಿಗಳಿಂದ 10ಸಾವಿರ ರೂ. ಪಡೆದಿದ್ದಾರೆ ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ. ಒಟ್ಟು 12 ಜನ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಹಣ ಪಡೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಜಾತಿನಿಂದನೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ.
ಸದ್ಯ ಶಿವಾನಂದ ದೇವರ ವಿರುದ್ಧ ಸಿಬ್ಬಂದಿ, ತಾಲೂಕು ವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಾನಂದ ದೇವರ, ನಾನು ಯಾರ ಬಳಿ ಲಂಚ ಸ್ವೀಕರಿಸಿಲ್ಲ. ಕೆಲವು ಸಿಬ್ಬಂದಿಗಳಿಗೆ ಸಾಲ ನೀಡಿದ್ದೆ. ಹೀಗಾಗಿ ಸಾಲದ ಹಣ ವಾಪಸ್ ಪಡೆದಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 am, Mon, 30 May 22