ಧಾರವಾಡ, ಆಗಸ್ಟ್.05: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಅಂಗನವಾಡಿ (Anganwadi) ಶಿಕ್ಷಕಿಯರಿಗೆ ಐದು ತಿಂಗಳಿನಿಂದ ಗೌರವ ಧನವೇ ಬಂದಿಲ್ಲ. ಅಂಗನವಾಡಿಯಿಂದ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೂರೈಕೆ ಮಾಡಲಾಗುವ ಮೊಟ್ಟೆಯನ್ನು (Egg) ಅಂಗನವಾಡಿ ಶಿಕ್ಷಕಿಯರೇ ತಮ್ಮ ಕೈಯಿಂದ ದುಡ್ಡು ಹಾಕಿ ಪೂರೈಕೆ ಮಾಡುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ತಮ್ಮ ಕೈಯಿಂದ ದುಡ್ಡು ಹಾಕಿ ತೆಗೆದುಕೊಂಡು ಬಂದ ಮೊಟ್ಟೆಯ ಬಿಲ್ ಕೂಡ ಬಾಕಿ ಇದೆ. ಇದರಿಂದ ಅಂಗನವಾಡಿ ಶಿಕ್ಷಕಿಯರು ಸರ್ಕಾರಕ್ಕೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 494 ಅಂಗನವಾಡಿ ಕೇಂದ್ರಗಳಿವೆ. ಅವುಗಳ ಬಾಡಿಗೆ ಕೂಡ ಕೊಡಲು ಸಾಧ್ಯವಾಗಿಲ್ಲ. ಇಲಾಖೆಯ ನಿರ್ದೇಶಕರಿಗೆ ಕೇಳಿದರೆ, ಅವರು ಪ್ರತಿ ತಿಂಗಳಿಗೆ ಎಷ್ಟು ಅನುದಾನ ಇದೆಯೋ, ಅದನ್ನು ಕೊಡುತ್ತಲೇ ಬಂದಿದ್ದೇವೆ ಅನ್ನುತ್ತಿದ್ದಾರೆ. ಹಾಗಾದರೆ ಅಂಗನವಾಡಿ ಶಿಕ್ಷಕಿಯರಿಗೆ ಏಕೆ ಹಣ ಮುಟ್ಟಿಲ್ಲ ಅನ್ನೋ ಪ್ರಶ್ನೆ ಎದ್ದಿದೆ. ಈ ಶಿಕ್ಷಕಿಯರು ಕೈಯಿಂದ ಹಣ ಹಾಕಿ ಮೊಟ್ಟೆ ತಂದು ಸುಸ್ತಾಗಿ ಹೋಗಿದ್ದಾರೆ. ಇತ್ತ ಮೊಟ್ಟೆಗೆ ಹಣವನ್ನೂ ಕೊಡಬೇಕು, ಅತ್ತ ಗೌರವ ಧನ ಇಲ್ಲದೆ ಕೆಲಸ ಮಾಡಬೇಕು. ಹೀಗಾಗಿ ಬೇಗ ಹಣ ಬಿಡುಗಡೆ ಮಾಡದೇ ಇದ್ದರೆ, ಅಂಗನವಾಡಿ ಬಂದ್ ಮಾಡಿ ಹೋರಾಟ ಮಾಡೋ ನಿರ್ಧಾರಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಕೊಡಗು: 104 ಕಡೆಗಳಲ್ಲಿ ಭೂಕುಸಿತದ ಭೀತಿ, 2,995 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್
ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿವೆ. ಕಳೆದ ಎರಡು ತಿಂಗಳಿನಿಂದ ಆ ಕಟ್ಟಡ ಬಾಡಿಗೆಯನ್ನೂ ನೀಡಿಲ್ಲ. ಇದನ್ನೂ ಕೂಡ ಅಂಗನವಾಡಿ ಶಿಕ್ಷಕಿಯರೇ ಭರಿಸಿದ್ದಾರೆ. ಸದ್ಯ ಅಂಗನವಾಡಿ ಶಿಕ್ಷಕಿಯರ ಹಾಗೂ ಸಹಾಯಕಿಯರ ಗೌರವ ಧನವೇ 4.19 ಕೋಟಿ ರೂಪಾಯಿ ಬಾಕಿ ಇದೆ. ಇನ್ನು ಮೊಟ್ಟೆಯ ಬಾಕಿ 1.58 ಕೋಟಿ ರೂಪಾಯಿ ಇದೆ. ಇದು ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಒಂದನೇ ಹಂತದ ಅನುದಾನ ಬಿಡುಗಡೆಯಾಗಿದೆ. ಆದರೆ ಅದು ಕೆಲ ತಾಂತ್ರಿಕ ಸಮಸ್ಯೆಯಿಂದ ಬಂದಿಲ್ಲ. ಇಷ್ಟರಲ್ಲಿಯೇ ತಾಂತ್ರಿಕ ಸಮಸ್ಯೆಗೆ ಪರಿಹಾರ ಸಿಕ್ಕು, ಶೀಘ್ರದಲ್ಲಿಯೇ ಎಲ್ಲ ಹಣ ಪಾವತಿಯಾಗಲಿದೆ ಅನ್ನುತ್ತಾರೆ.
ಈ ಮುಂಚೆಯಿಂದಲೂ ಅಂಗನವಾಡಿ ಶಿಕ್ಷಕಿಯರಿಗೂ ಒಂದಿಲ್ಲ ಒಂದು ಸಮಸ್ಯೆಯಿಂದ ಬಳಲುತ್ತಲೇ ಇದ್ದಾರೆ. ಆದರೆ ಇದೀಗ ಅವರ ಗೌರವ ಧನಕ್ಕೂ ಈ ಸಮಸ್ಯೆ ಬಂದಿರೋದ್ರಿಂದ ಮುಂದೇನು ಮಾಡಬೇಕು ಅನ್ನೋದು ಗೊತ್ತಾಗದೇ ಪರದಾಡುತ್ತಿದ್ದಾರೆ. ಕೂಡಲೇ ಈ ಸಮಸ್ಯೆ ಬಗೆ ಹರಿಸಿ ಅವರ ಸಮಸ್ಯೆಗೆ ಸರಕಾರ ಇತಿಶ್ರೀ ಹಾಡಬೇಕಿದೆ. ಇಲ್ಲವಾದಲ್ಲಿ ಅಂಗನವಾಡಿ ಕೇಂದ್ರಗಳು ಬಾಗಿಲು ಮುಚ್ಚೋದು ಗ್ಯಾರಂಟಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ