ಸತ್ತ ಹೆಣವೇ ಕಳ್ಳತನ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ಕಳ್ಳಾಟ ಬಯಲು
ಒಂದಲ್ಲ ಒಂದು ವಿಷಯದಿಂದ ಹುಬ್ಬಳ್ಳಿ ಕಿಮ್ಸ್(Hubli Kims Hospital) ಸದಾ ಸುದ್ದಿಯಲ್ಲಿರುತ್ತದೆ. ಅದರಂತೆ ಇದೀಗ ಕಿಮ್ಸ್ ಆಸ್ಪತ್ರೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಹೌದು, ಕಿಮ್ಸ್ನಲ್ಲಿ ಸಾವನಪ್ಪಿದ ಮೃತದೇಹವೇ ನಾಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಮೃತನ ಸಂಬಂಧಿಕರು ಬಂದು ಕೇಳಿದರೂ ಸಿಬ್ಬಂದಿ ಶವ ನೀಡಿಲ್ಲ.
ಹುಬ್ಬಳ್ಳಿ, ಆ.04: ಒಂದಲ್ಲ ಒಂದು ವಿಷಯದಿಂದ ಹುಬ್ಬಳ್ಳಿ ಕಿಮ್ಸ್(Hubli Kims Hospital) ಸದಾ ಸುದ್ದಿಯಲ್ಲಿರುತ್ತದೆ. ಅದರಂತೆ ಇದೀಗ ಕಿಮ್ಸ್ನಲ್ಲಿ ಸಾವನಪ್ಪಿದ ಮೃತದೇಹವೇ ನಾಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಮೃತನ ಸಂಬಂಧಿಕರು ಬಂದು ಕೇಳಿದರೂ ಸಿಬ್ಬಂದಿ ಶವ ನೀಡಿಲ್ಲ. ಈ ಹಿನ್ನಲೆ ಅನುಮತಿ ಇಲ್ಲದೆ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಶವ ಬಳಸಿಕೊಂಡಿರುವ ಅನುಮಾನ ವ್ಯಕ್ತವಾಗಿದ್ದು, ಈ ಮೂಲಕ ಕಿಮ್ಸ್ ಆಸ್ಪತ್ರೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.
ತಪ್ಪು ಮುಚ್ಚಿಕೊಳ್ಳಲು ಮೃತದೇಹ ದಾನ ಮಾಡಿ ಎಂದು ಮೃತನ ಕುಟುಂಬಸ್ಥರಿಗೆ ಒತ್ತಡ
ಹೌದು, ತಪ್ಪು ಮುಚ್ಚಿಕೊಳ್ಳಲು ಮೃತದೇಹ ದಾನ ಮಾಡಿ ಎಂದು ಕಿಮ್ಸ್ ಅಧಿಕಾರಿಗಳು ಮೃತನ ಕುಟುಂಬಸ್ಥರಿಗೆ ಒತ್ತಡ ಹಾಕುತ್ತಿದ್ದಾರೆ. ಇನ್ನು ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹತಾವುಲ್ಲಾ, ಕಳೆದ 15 ದಿನದಿಂದ ಮನೆಗೆ ಬಂದಿರಲಿಲ್ಲ. ಇತ್ತ ಆತನ ಕುಟುಂಬ ನಾಪತ್ತೆಯಾಗಿದ್ದವನಿಗಾಗಿ ಹುಡುಕಾಟ ನಡೆಸಿದ್ದರು. ಅದರಂತೆ ಜುಲೈ 27 ರಂದು ವಿದ್ಯಾನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಉಣಕಲ್ನ ಸುಭಾನಿ ನಗರದ ಮೃತ ವ್ಯಕ್ತಿ ಹತಾವುಲ್ಲಾ ಖಾನ್ (40) ಪತ್ತೆಯಾಗಿದ್ದ.
ಇದನ್ನೂ ಓದಿ:ಹುಬ್ಬಳ್ಳಿ ಕಿಮ್ಸ್ನಲ್ಲಿ ರೋಗಿಯೊಬ್ಬನ ಹುಚ್ಚಾಟ; ಬೆಡ್ಗೆ ಬೆಂಕಿ ಹಚ್ಚಿಕೊಳ್ಳಲು ಯತ್ನ
ಶವ ನೀಡಲು ಹಿಂದೇಟು
ಬಳಿಕ ಆತನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಅಂದು ಸಂಜೆಯೇ ಹತಾವುಲ್ಲಾ ಮೃತಪಟ್ಟಿದ್ದ. ಈ ವಿಷಯವನ್ನು ಕಿಮ್ಸ್ ಮತ್ತು ಪೊಲೀಸ್ ಸಿಬ್ಬಂದಿ ಮನೆಯವರಿಗೆ ತಿಳಿಸಿಲ್ಲ. ಶನಿವಾರ ಕಿಮ್ಸ್ ಆಸ್ಪತ್ರೆಯಲ್ಲಿ ಪತಿ ಇರುವ ಬಗ್ಗೆ ಮಾಹಿತಿ ತಿಳಿದು ಆಸ್ಪತ್ರೆ ಬಂದಾಗ ಸಾವಿನ ಮಾಹಿತಿ ಲಭ್ಯವಾಗಿದೆ. ಆದರೆ, ಸಿಬ್ಬಂದಿ ಶವ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಮಾದ್ಯಮದವರು ಕಿಮ್ಸ್ ಗೆ ಹೋದ ಬಳಿಕ ಮೃತದೇಹ ನೀಡಿದ ಕಿಮ್ಸ್ ಸಿಬ್ಬಂದಿ
ಇನ್ನು ಈ ಕುರಿತು ಮಾದ್ಯಮದವರು ಕಿಮ್ಸ್ ಗೆ ಹೋದ ಬಳಿಕ ಸಿಬ್ಬಂದಿಗಳು ಮೃತದೇಹ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ಕಿಮ್ಸ್ ಆಸ್ಪತ್ರೆಯ ಮೆಡಿಕಲ್ ಕಾಲೇಜಿನಲ್ಲಿದ್ದ ಹತಾವುಲ್ಲಾ ಖಾನ್ ಮೃತದೇಹ ನೀಡಲಾಗಿದೆ. ಕೆಲಕಾಲ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ