AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharwad: ಸಿನಿಮಾ ಶೈಲಿಯಲ್ಲಿ ಹೊಡೆದಾಟ! ಊರ ದೇವರ ಪೂಜೆ ನಾನೇ ಮಾಡುವೆ ಎಂದ ಅರ್ಚಕ, ಬೇಡವೆಂದ ಗ್ರಾಮಸ್ಥರು -ಕಾರಣ ಏನು?

ಈ ಪೂಜೆ ವಿವಾದ ಕೇವಲ ಮಠಕ್ಕೆ ಮಾತ್ರ ಸೀಮಿತವಾಗಿಲ್ಲ. ಮಠಕ್ಕೆ ಸೇರಿದ ಆಸ್ತಿ ಸಲುವಾಗಿಯೂ ಕೆಲ ವರ್ಷಗಳಿಂದ ಅರ್ಚಕ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ಇದ್ದೇ ಇದೆ. ದೇವಸ್ಥಾನಕ್ಕೆ ಸೇರಿದ 1 ಎಕರೆ ಭೂಮಿ ನನ್ನದೇ ಎಂದು ಅರ್ಚಕ ಪ್ರಕಾಶ್ ಮುಳುಗುಂದ ಮಠ ಪಟ್ಟು ಹಿಡಿದಿದ್ದಾರೆ.

Dharwad: ಸಿನಿಮಾ ಶೈಲಿಯಲ್ಲಿ ಹೊಡೆದಾಟ! ಊರ ದೇವರ ಪೂಜೆ ನಾನೇ ಮಾಡುವೆ ಎಂದ ಅರ್ಚಕ, ಬೇಡವೆಂದ ಗ್ರಾಮಸ್ಥರು -ಕಾರಣ ಏನು?
ಊರ ದೇವರ ಪೂಜೆ ನಾನೇ ಮಾಡುವೆ ಎಂದ ಅರ್ಚಕ
TV9 Web
| Updated By: ಸಾಧು ಶ್ರೀನಾಥ್​|

Updated on:Feb 21, 2023 | 3:03 PM

Share

ಆ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ ಪೂಜಾ ವಿವಾದವಿದೆ. ಒಂದು ಕಡೆ ಅರ್ಚಕ, ಮತ್ತೊಂದು ಕಡೆ ಗ್ರಾಮಸ್ಥರು. ಅರ್ಚಕನ ಬದಲಾವಣೆಗೆ ಗ್ರಾಮಸ್ಥರು ಪಟ್ಟು ಹಿಡಿದ್ರೆ, ಪೂಜೆ ನಾನೇ ಮಾಡ್ತೀನಿ ಅನ್ನೋದು ಅರ್ಚಕನ (Archak) ವಾದ. ಊರ ದೇವರ ಪೂಜೆಗಾಗಿ ಆ ಗ್ರಾಮದಲ್ಲಿ ನಡೆಯುತ್ತಿದ್ದ ಜಗಳವು ನಿನ್ನೆ ಸೋಮವಾರ ವಿಕೋಪಕ್ಕೆ ತಿರುಗಿತ್ತು. ದೇವಸ್ಥಾನದಲ್ಲಿ ಥೇಟ್​ ಸಿನಿಮಾ ಸ್ಟೈಲ್ ನಲ್ಲಿ ಹೊಡೆದಾಟ ನಡೆದಿದೆ. ಅಷ್ಟಕ್ಕೂ ಏನಿದು‌ ಪೂಜಾ ವಿವಾದ ಅಂತೀರಾ? ಈ ಸ್ಟೋರಿ ಓದಿ. ಒಂದು ಕಡೆ ದೇವಸ್ಥಾನದಲ್ಲಿ ಗ್ರಾಮಸ್ಥರು, ಅರ್ಚಕರ ನಡುವೆ ಸಿನಿಮಾ ಸ್ಟೈಲ್ ನಲ್ಲಿ ಹೊಡೆದಾಟ. ಮತ್ತೊಂದು ಕಡೆ ಗ್ರಾಮದಲ್ಲಿ ಪೊಲೀಸ್ ಭದ್ರತೆ… ಇನ್ನೊಂದು ಕಡೆ ದೇವಸ್ಥಾನದಲ್ಲಿ ಸೇರಿರೋ ಗ್ರಾಮಸ್ಥರು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ (hubballi) ತಾಲೂಕಿನ‌ ಕಂಪ್ಲಿಕೊಪ್ಪದಲ್ಲಿ (kamplikoppa). ಸೋಮವಾರ ದೇವಸ್ಥಾನವೇ ರಣರಂಗವಾಗಿತ್ತು. ಇದಕ್ಕೆಲ್ಲ ಕಾರಣ ಗ್ರಾಮದ ಬಸವಣ್ಣ ದೇವರು (Basavanna temple). ಕಳೆದ 50 ವರ್ಷಗಳಿಂದ ಈ ದೇವಸ್ಥಾನದ ಪೂಜೆಯನ್ನ ಮುಳಗುಂದ ಮಠ ಅನ್ನೋ ಕುಟುಂಬ ಮಾಡಿಕೊಂಡು ಬರ್ತಿದೆ. ಇದೀಗ ಅರ್ಚಕ ಪ್ರಕಾಶ್ ಮುಳುಗುಂದ ಮಠ ನಡುವೆ ಪೂಜೆ ವಿವಾದ ಆರಂಭವಾಗಿದ್ದು, ಗ್ರಾಮಸ್ಥರು ಅರ್ಚಕನ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಅರ್ಚಕ ಪ್ರಕಾಶ್ ಮುಳುಗುಂದ ಮಠ ಇನ್ಮುಂದೆ ಪೂಜೆ ಮಾಡಬಾರದು ಅನ್ನೋದು ಇಡೀ ಗ್ರಾಮಸ್ಥರ ವಾದ. ಆದ್ರೆ ನಾನು ಯಾವುದೇ ಕಾರಣಕ್ಕೆ ಪೂಜೆ ಮಾಡೋದು ಬಿಡಲ್ಲ ಅನ್ನೋದು ಅರ್ಚಕನ ವಾದ. ಇದೇ ಕಾರಣಕ್ಕೆ ಗ್ರಾಮಸ್ಥರು ಹಾಗೂ ಅರ್ಚಕ ನಡುವೆ ಗಲಾಟೆ ಆರಂಭವಾಗಿದ್ದು, ಸಿನಿಮಾ ಶೈಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಗ್ರಾಮಸ್ಥರು ಪೂಜೆ ಮಾಡಬೇಡಿ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಅರ್ಚಕ ಪ್ರಕಾಶ್ ಮುಳುಗುಂದಮಠ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ಈ ಪೂಜೆ ವಿವಾದ ಕೇವಲ ಮಠಕ್ಕೆ ಮಾತ್ರ ಸೀಮಿತವಾಗಿಲ್ಲ. ಮಠಕ್ಕೆ ಸೇರಿದ ಆಸ್ತಿ ಸಲುವಾಗಿಯೂ ಕೆಲ ವರ್ಷಗಳಿಂದ ಅರ್ಚಕ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ಇದ್ದೇ ಇದೆ. ದೇವಸ್ಥಾನಕ್ಕೆ ಸೇರಿದ 1 ಎಕರೆ ಭೂಮಿ ನನ್ನದೇ ಎಂದು ಅರ್ಚಕ ಪ್ರಕಾಶ್ ಮುಳುಗುಂದ ಮಠ ಪಟ್ಟು ಹಿಡಿದಿದ್ದಾರೆ. ಆದ್ರೆ ಅದು ದೇವಸ್ಥಾನದ ಆಸ್ತಿ ಎಂಬುದು ಗ್ರಾಮಸ್ಥರ ವಾದ.

ಇದೇ ವಿಷಯಕ್ಕೆ ಗ್ರಾಮಸ್ಥರು ಎಲ್ಲರೂ ಒಂದು ಕಡೆಯಾದ್ರೆ ಅರ್ಚಕ ಪ್ರಕಾಶ್ ಮುಳುಗುಂದ ಮಠ ಮತ್ತೊಂದು ಕಡೆಯಾಗಿದ್ದಾರೆ. ಅವರ ವಿರುದ್ದವೇ ಪ್ರಕಾಶ್ ಮುಳುಗುಂದ ಮಠ ಕೆಲವು ಬಾರಿ ಜಗಳ ತಗೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇದು ಗ್ರಾಮಸ್ಥರ ಕಣ್ಣು ಕೆಂಪಾಗಿಸಿತ್ತು. ಇಂದು ತಹಶಿಲ್ದಾರ್ ಕಂಪ್ಲಿಕೊಪ್ಪ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅದೇ ವೇಳೆ ಅರ್ಚಕರು, ಗ್ರಾಮಸ್ಥರ ನಡುವೆ ಸಿನಿಮಾ ಶೈಲಿಯಲ್ಲಿ ಹೊಡೆದಾಟವಾಗಿದೆ.

ಒಟ್ಟಾರೆ ಮಠದ ವಿಚಾರವಾಗಿ ಕಂಪ್ಲಿಕೊಪ್ಪ ದೇವಸ್ಥಾನ ಅಕ್ಷರಶಃ ರಣರಂಗವಾಗಿದೆ. ಇಷ್ಟು ದಿನ ಪೂಜೆಗೆ ಬರದೇ ಇಂದು ಅಧಿಕಾರಿಗಳ ಗ್ರಾಮ ವಾಸ್ತವ್ಯ ಹಿನ್ನೆಲೆ ಬೇಕಂತಲೇ ಅರ್ಚಕ ಬಂದು ಪೂಜೆ ಮಾಡಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ..ಇದೀಗ ಅರ್ಚಕ ಗ್ರಾಮದ ಹಲವರ ವಿರುದ್ದ ದೂರು ಕೊಟ್ಟಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ವರದಿ: ಶಿವಕುಮಾರ್ ಪತ್ತಾರೆ, ಟಿವಿ 9, ಹುಬ್ಬಳ್ಳಿ

Published On - 3:00 pm, Tue, 21 February 23