ಹುಬ್ಬಳ್ಳಿ, ಜ.22: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಲೋಕಾರ್ಪಣೆಯು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಮುಸ್ಲಿಂ ಸಮುದಾಯವೂ ಸಂಭ್ರಮಿಸುತ್ತಿದೆ. ಬಾಲರಾಮನ ಪ್ರತಿಷ್ಠಾಪನೆ ಪ್ರಯುಕ್ತ ಇಂದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಸೀದಿಯಲ್ಲಿ ಹೋಮ-ಹವನ ಮಾಡಲಾಗಿತ್ತು. ಇದೀಗ ಹುಬ್ಬಳ್ಳಿ (Hubballi) ತಾಲೂಕಿನ ಮಸೀದಿಗಳಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡುವ ಮೂಲಕ ಭಾವೈಕ್ಯತೆ ಸಾರಲಾಗಿದೆ.
ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದವರು ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಎರಡೂ ಮಸೀದಿಗಳು ಮತ್ತು ಸಯ್ಯದ್ ಅಲಿ ದರ್ಗಾದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯತು.
ಒಂದು ಮಸೀದಿಯ ಒಳಭಾಗದಲ್ಲಿ ಪ್ರಭು ಶ್ರೀರಾಮನ ಫೋಟೋ ಇಟ್ಟು ಪೂಜೆ ಸಲ್ಲಿಸಲಾಯಿತು. ಇನ್ನೊಂದು ಕಡೆ ಮಸೀದಿಯ ಆವರಣದಲ್ಲಿ ರಾಮನ ಪೋಟೋ ಇಟ್ಟು ಪೂಜೆ ನೆರವೇರಿಸಲಾಯಿತು. ಆ ಮೂಲಕ ಹಳ್ಯಾಳ ಗ್ರಾಮಸ್ಥರು ಭಾವೈಕತೆ ಸಾರಿದರು.
ಕೇವಲ ಪೂಜೆ ಅಲ್ಲದೇ ಅನ್ನ ಸಮರ್ಪಣೆಯೂ ನಡೆಯಿತು. ಸಂಭ್ರಮಾಚರಣೆಯಲ್ಲಿ ಕೆಲವು ಮುಸ್ಲಿಂ ಸಮುದಾಯದವರು ಕೇಸರಿ ಬಣ್ಣದ ಬಟ್ಟೆ ತೊಟ್ಟು, ಧ್ವಜ ಹಿಡಿದು ಶ್ರೀರಾಮನಿಗೆ ಭಕ್ತಿ ಅಪರ್ಣೆ ಮಾಡಿದರು.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಗದಗದ ಮಸೀದಿಯಲ್ಲಿ ಪೂಜೆ, ಹೋಮ
ಗದಗ ಗ್ರಾಮದ ಮಸೀದಿಯೊಂದರಲ್ಲೂ ಪೂಜೆ, ಹೋಮ ನೆರವೇರಿಸಲಾಗಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಸೀದಿಯಲ್ಲಿ ಹೋಮ-ಹವನ ಮಾಡುವ ಮೂಲಕ ಭಾವೈಕ್ಯತೆ ಮೆರೆಯಲಾಗಿದೆ. ಗ್ರಾಮದ ಹಿಂದೂ ಮುಸ್ಲಿಂ ಮುಖಂಡರು ಸೇರಿ ಪೂಜೆ ಮಾಡಿದ್ದಾರೆ.
ರುದ್ರಾಭಿಷೇಕ ಮಾಡಿ, ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ್ದಾರೆ. ರಂಜಾನ್ ತಿಂಗಳಲ್ಲಿ ಪೂಜಿಸುವ ಆಲಿ ದೇವರ ಸಮ್ಮುಖದಲ್ಲಿ ಭಾರತ ಮಾತೆ ಫೋಟೋಗೆ ಪೂಜೆ ಸಲ್ಲಿಸಲಾಗಿದೆ. ಭಾರತ ಮಾತೆ ಚಿತ್ರದ ಜೊತೆಗೆ ಕಳಸವಿಟ್ಟು ರುದ್ರಾಭಿಷೇಕ, ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಸೀದಿ ಕಮೀಟಿಯ ರಾಜೆಸಾಬ್, ರುತುಂ ಸಾಬ್ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೂ ಮುನ್ನ ಶ್ರೀರಾಮನ ಪ್ರಸಾದವಾಗಿ ಮಂತ್ರಾಕ್ಷತೆಯನ್ನು ಇಡೀ ದೇಶಾದ್ಯಂತ ಹಂಚಲಾಯಿತು. ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರು, ರಾಮ ಭಕ್ತರು ಮನೆಮನೆಗಳಿಗೆ ತೆರಳಿ ಮಂತ್ರಾಕ್ಷತೆ ಹಂಚಿಸಿದ್ದರು. ಇದೇ ವೇಳೆ ಮುಸಲ್ಮಾನರ ಮನೆಗಳಿಗೂ ಭೇಟಿ ನೀಡಿ ಮಂತ್ರಾಕ್ಷತೆಯನ್ನು ವಿತರಿಸಿ ಸಿಹಿ ಹಂಚಲಾಗಿತ್ತು. ಮುಸ್ಲಿಂ ಸಮುದಾಯದ ಮಂದಿ ಮಂತ್ರಾಕ್ಷತೆಯನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ