AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರಿಂ ಕೋರ್ಟ್ ವರೆಗೂ ಹೋಗಿರುವ ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ: ಏನಿದು ಪ್ರಹಸನ?

ಧಾರವಾಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಅಧಿಕಾರಿ ಖುರ್ಚಿಗಾಗಿ ಇಬ್ಬರು ಹಿರಿಯ ಅಧಿಕಾರಿಗಳ ಮಧ್ಯೆ ನಡೆದಿರುವ ಫೈಟ್​ ಸುಪ್ರಿಂ ಕೋರ್ಟ್ ವರೆಗೂ ಹೋಗಿದೆ. ಜಿಪಂ ಸಿಇಒ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಕುರ್ಚಿಗಾಗಿ ನಡೆದಿರೋ ಈ ಕದನ ಎಲ್ಲಿಗೆ ಬಂದು ನಿಲ್ಲುತ್ತೆ ಕಾದು ನೋಡಬೇಕಿದೆ.

ಸುಪ್ರಿಂ ಕೋರ್ಟ್ ವರೆಗೂ ಹೋಗಿರುವ ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ: ಏನಿದು ಪ್ರಹಸನ?
ಸುಪ್ರಿಂ ಕೋರ್ಟ್ ವರೆಗೂ ಹೋಗಿರುವ ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​|

Updated on: Jan 23, 2024 | 5:34 PM

Share

ಅಧಿಕಾರದ ಕುರ್ಚಿಗಾಗಿ ನಾನಾ ಕಸರತ್ತುಗಳು ನಡೆಯೋದು ಸಾಮಾನ್ಯ. ರಾಜ್ಯ ಮಟ್ಟದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷನ ಕುರ್ಚಿಯಿಂದ ಸಿಎಂ ಕುರ್ಚಿಯವರೆಗೂ ಅನೇಕ ಕದನಗಳೇ ನಡೆದು ಹೋಗಿವೆ. ಆದರೆ ಧಾರವಾಡದಲ್ಲಿ ಇಲಾಖೆಯೊಂದರ ಜಿಲ್ಲಾಮಟ್ಟದ ಅಧಿಕಾರಕ್ಕೆ ಇಬ್ಬರು ಅಧಿಕಾರಿಗಳ ಮಧ್ಯೆ ಫೈಟ್ ನಡೆದಿದೆ. ಇಬ್ಬರೂ ನಾವೇ ಅಧಿಕಾರಿಗಳು ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ.

ಸಮಾಜದಲ್ಲಿರುವ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿಯೇ ಇರೋದು ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಇದೇ ಇಲಾಖೆಯ ಜಿಲ್ಲಾ ಅಧಿಕಾರಿ ಕುರ್ಚಿಗಾಗಿ ಈಗ ಧಾರವಾಡದಲ್ಲಿ ಇಬ್ಬರು ಅಧಿಕಾರಿಗಳ ಮಧ್ಯೆ ದೊಡ್ಡ ಫೈಟ್ ಶುರುವಾಗಿದೆ. ಒಬ್ಬರು ಕೋರ್ಟ್ ಆದೇಶ ಹಿಡಿದುಕೊಂಡು ಬಂದು ನಾನೇ ಜಿಲ್ಲಾ ಅಧಿಕಾರಿ ಅಂತಾ ಕುಳಿತುಕೊಂಡಿದ್ರೆ, ಇನ್ನೊಬ್ಬರು ಜಿಪಂ ಸಿಇಒ ಆದೇಶ ಹಿಡಿದುಕೊಂಡು ಬಂದು ನಾನೇ ಪ್ರಭಾರ ಜಿಲ್ಲಾ ಅಧಿಕಾರಿ ಅಂತಾ ಪಟ್ಟು ಹಿಡಿದಿದ್ದಾರೆ.

ಹೌದು; ಈ ದೃಶ್ಯದಲ್ಲಿರೋ ಮಹಿಳಾ ಅಧಿಕಾರಿ ಸರೋಜಾ ಹಳಕಟ್ಟಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಮಧ್ಯೆಯೇ ಈಗ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಹುದ್ದೆಗಾಗಿ ಫೈಟ್ ನಡೆದಿರುವುದು. ಈ ಹಿಂದೆ ಇಲ್ಲಿ ಜಿಲ್ಲಾ ಅಧಿಕಾರಿಯಾಗಿದ್ದ ಸರೋಜಾ ಹಳಕಟ್ಟಿಯವರನ್ನು ಹಾವೇರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ತಮ್ಮ ವರ್ಗಾವಣೆ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದರು. ಕೆಎಟಿ ಮತ್ತು ಹೈಕೋರ್ಟ್ ನಲ್ಲಿಯೂ ಇವರ ವರ್ಗಾವಣೆಗೆ ಸಿಕ್ಕ ತಡೆ ತದನಂತರದಲ್ಲಿ ತೆರವುಗೊಂಡಿತ್ತು.

ಹೈಕೋರ್ಟ್ ನಲ್ಲಿ ವರ್ಗಾವಣೆಗೆ ತಡೆ ತೆರವುಗೊಂಡ ಬಳಿಕ, ಸರೋಜಾ ಅವರು ಕೆಲ ದಿನ ರಜೆಗೆ ಹೋಗಿದ್ದರಂತೆ. ಆ ವೇಳೆಯಲ್ಲಿಯೇ ಅವರನ್ನು ಹುದ್ದೆಯಿಂದ ಬಿಡುಗೊಳಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಸ್ವರೂಪ ಅವರು, ಆ ಜಾಗಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಗೋಪಾಲ ಲಮಾಣಿಯವರನ್ನು ಪ್ರಭಾರಿಯಾಗಿ ನಿಯೋಜಿಸಿ ಆದೇಶ ಹೊರಡಿಸಿದ್ದರು. ಆದರೆ ಇದರ ವಿರುದ್ಧ ಸುಪ್ರಿಂ ಕೋರ್ಟ್ ಗೆ ಹೋಗಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ ಸ್ಟೇಟಸ್ ಖೋ, ಅಂದರೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೇಳಿದೆ ಅಂತಾ ಹೇಳಿ ಇದೀಗ ಇಲ್ಲಿ ನಾನೇ ಜಿಲ್ಲಾ ಅಧಿಕಾರಿ ಅಂತಾ ಬಂದು ಚೇಯರ್ ಹಿಡಿದು ಕುಳಿತು ಬಿಟ್ಟಿದ್ದಾರೆ.

Also Read: ಧರೆಯ ಮೇಲಿನ ಭೂಕೈಲಾಸ! ಕೋಟಿಲಿಂಗೇಶ್ವರ ಸುಕ್ಷೇತ್ರದಲ್ಲಿ ಶಿವಲಿಂಗಗಳು ತಾಂಡವ! ಒಂದು ಪ್ರದಕ್ಷಿಣೆ ಹಾಕೋಣ ಬನ್ನಿ

ಆದರೆ ಜಿಪಂ ಸಿಇಒ ಆದೇಶದ ಪ್ರಕಾರ ನಾನೇ ಪ್ರಭಾರ ಅಧಿಕಾರಿ, ನನಗೇ ಎಲ್ಲ ಅಧಿಕಾರ ಇರೋದು ಅನ್ನೋ ವಾದ ಗೋಪಾಲ ಲಮಾಣಿ ಅವರದ್ದು. ಸರೋಜಾ ಅವರು ರಿಲೀವ್ ಆದ ಬಳಿಕವೇ ಸಿಇಒ ಅವರು ನನಗೆ ಆದೇಶ ಮಾಡಿದ್ದಾರೆ. ಹೀಗಾಗಿ ಈಗಲೂ ನಾನೇ ಬಿಸಿಎಂ ಜಿಲ್ಲಾ ಅಧಿಕಾರಿಯಾಗಿದ್ದೇನೆ. ಆದರೂ ಅವರು ಕೋರ್ಟ್ ಆದೇಶ ಹಿಡಿದುಕೊಂಡು ಬಂದು ಕುಳಿತಿದ್ದಾರೆ. ಹೀಗಾಗಿ ನಾನು ಅಲ್ಲಿರೋ ಫೈಲ್ ಗಳನ್ನೆಲ್ಲ ನನ್ನ ಕಚೇರಿಗೆ ತರಿಸಿಕೊಂಡು ಸಹಿ ಮಾಡುತ್ತಿದ್ದೇನೆ. ಸಹಿ ಮಾಡುವ ಎಲ್ಲ ಅಧಿಕಾರ ಈಗಲೂ ನನಗೆ ಇದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಅವರಿಗೆ ಕೋರ್ಟ್ ನೀಡಿರುವ ಆದೇಶದಲ್ಲಿ ಸ್ಟೇಟಸ್ ಖೋ ಅಂತಾ ಹೇಳಲಾಗಿದ್ದು, ಹಾಗಾದರೆ ಅವರು ಬಿಡುಗಡೆಯಾಗಿದ್ದರೆ ಅಲ್ಲಿಗೆ ಸ್ಪಷ್ಟವಾಗಿ ಹೋಗುತ್ತದೆ.

ಇದನ್ನೂ ಓದಿ: ಶ್ರೀರಾಮ ಮೆರವಣಿಗೆ ವೇಳೆ ಗಲಾಟೆ: ಕಲಬುರಗಿ ಜಿಲ್ಲೆ ವಾಡಿ ಪಟ್ಟಣದಲ್ಲಿ ನಿಷೇದಾಜ್ಞೆ ಜೊತೆಗೆ ಮದ್ಯ ಮಾರಾಟ ನಿಷೇಧ

ಈ ಎಲ್ಲ ಗೊಂದಲಗಳಿಂದ ಅಧಿಕೃತ ಅಧಿಕಾರಿ ಯಾರು ಅನ್ನೋ ಪ್ರಶ್ನೆ ಉದ್ಭವಿಸಿದೆ. ಈ ಸಂಬಂಧ ಜಿಪಂ ಸಿಇಒ ರೂಪಾ ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಬರುವ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಕುರ್ಚಿಗಾಗಿ ನಡೆದಿರೋ ಈ ಕದನ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ