ಧಾರವಾಡ: ಬಸವರಾಜ ಹೊರಟ್ಟಿ (Bsavaraj horatti) ಏಳು ಸಲ ಕ್ಷೇತ್ರ ಪ್ರತಿನಿಧಿಸಿದ್ದರು. 8ನೇ ಸಲ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಹೊರಟ್ಟಿ ಬಿಜೆಪಿಗೆ ಹೋಗುತ್ತಾರೆಂಬ ನಿರೀಕ್ಷೆ ಇರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಜೆಡಿಎಸ್‌ನಿಂದ ಏಳು ಸಲ ಆಗಿದ್ದಾರೆ. ಈಗ ಅಧಿಕಾರದ ಆಸೆಯಿಂದ ಬಿಜೆಪಿಗೆ ಹೋಗಿದ್ದಾರೆ. ಜೆಡಿಎಸ್‌ನಿಂದ ನಿಂತರೆ ಗೆಲ್ಲಿಸೋಲ್ಲ ಅಂತಾ ಭಯದಿಂದ ಬಿಜೆಪಿಗೆ ಹೋಗಿದ್ದಾರೆ. ಏಳು ಬಾರಿ ಸಾಕಲ್ವಾ ಅವರಿಗೆ? 42 ವರ್ಷ ಸತತ ಪರಿಷತ್ ಸದಸ್ಯರಾದವರು. ಗಿನ್ನೆಸ್ ದಾಖಲೆ ಮಾಡುತ್ತಾರಂತೆ. ಆ ದಾಖಲೆ ಮಾಡೋದು ಅವರಲ್ಲ. ಶಿಕ್ಷಕ ಮತದಾರರು ಆ ದಾಖಲೆ ಮಾಡಿಸೋದು ಎಂದು ಹೇಳಿದರು.
ಸಾಕು ಇನ್ನು ಅವರನ್ನು ಗೆಲ್ಲಿಸೋದು. 40 ವರ್ಷದಿಂದ ಹೊರಟ್ಟಿ ಪರಿಷತ್ ಸದಸ್ಯರಾಗಿದ್ದರು. ನಮ್ಮ ಅಭ್ಯರ್ಥಿ ಗುರಿಕಾರ 40 ವರ್ಷದಿಂದ ಶಿಕ್ಷಕರ ಹೋರಾಟಗಾರರಾಗಿದ್ದವರು. ಆದರೆ ಹೊರಟ್ಟಿ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದಾರೆ ಎಂದರು.
ಇದನ್ನು ಓದಿ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಆತಂಕ, ಜೆಡಿಎಸ್ ಶಾಸಕರ ಹೊಟೆಲ್ ವಾಸ್ತವ್ಯ
ಎಲ್ಲ ವೈರತ್ವ ಮರೆತು ಸಂಧಾನಕ್ಕೆ ಸಿದ್ಧ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಜೆಡಿಎಸ್ ಅಭ್ಯರ್ಥಿ ನಿವೃತ್ತಿ ಮಾಡಿಸೋದೇ ಈಗ ಸಂಧಾನ. ಬಿಜೆಪಿ ಸೋಲಿಸೋದು ಅನ್ನೋದಾದರೆ ನಮಗೆ ಬೆಂಬಲಿಸಲಿ. ಇನ್ನೂ ಟೈಮ್ ಇದೆ ಏನಾದರೂ ಆಗಬಹುದು ಎಂದು ಹೆಚ್ಡಿಕೆ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ನಾನೇ ಹೈ ಕಮಾಂಡ್ ರೀತಿ ಆಡುತ್ತಿದ್ದಾರೆ ಅನ್ನೋ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ. ಅವರಿಗೆ ಹೈಕಮಾಂಡ್ ಇಲ್ಲ. ಅವರ ಹೈಕಮಾಂಡ್ ಇರೋದೇ ಪದ್ಮನಾಭನಗರದಲ್ಲಿ. ನಮ್ಮ ಹೈಕಮಾಂಡ್ ಇರೋದು ದೆಹಲಿಯಲ್ಲಿ. ನಮ್ಮ ಹೈಕಮಾಂಡ್ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ ಎಂದು ಟಾಂಗ್ ಕೊಟರು.
ಇನ್ನು ಸರ್ಕಾರದ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇನೆ. ಸರ್ಕಾರ ಕಳೆದ 4 ವರ್ಷಗಳಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಸಚಿವರು ಮನೆ ಮಂಜೂರಾತಿ ಬಗ್ಗೆ ಆದೇಶ ಪ್ರತಿ ತೋರಿಸಲಿ. ಆಗ ನಾನು ನನ್ನ ಮಾತು ವಾಪಸ್ ಪಡೆಯುತ್ತೇನೆ. ಕುಮಾರಸ್ವಾಮಿ ಅವಧಿಯಲ್ಲಿಯೂ ಒಂದೇ ಒಂದು ಮನೆ ಕೊಟ್ಟಿಲ್ಲ. ನಾವು ಮನೆಗಳಿಗಾಗಿ 16,800 ಕೋಟಿ ಹಣ ಖರ್ಚು ಮಾಡಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಸೂರಿಲ್ಲದವರು 20 ಲಕ್ಷ ಜನರಿದ್ದಾರೆಂದು ಅವರೇ ಹೇಳುತ್ತಾರೆ. ಆದರೆ ಬಡವರಿಗೆ ಮನೆ ಕಟ್ಟಿಕೊಡುವ ಜವಾಬ್ದಾರಿ ಸರ್ಕಾರಕ್ಕಿಲ್ಲವೇ? ಕೆಲಸ ಮಾಡದವರಿಗೆ ಕಾಳಜಿ ಇಲ್ಲದವರಿಗೆ ವೋಟ್ ಹಾಕಬಾರದು. ನಮ್ಮ ಸರ್ಕಾರದಲ್ಲಿ 7 ಕೆಜಿ ಅಕ್ಕಿ ಕೊಡುವ ಕಾರ್ಯಕ್ರಮ ತಂದಿದ್ದೆ. ಅನ್ನಭಾಗ್ಯ ಯೋಜನೆ ಇಲ್ಲದಿದ್ದರೆ ಕೊರೊನಾ ಸಂದರ್ಭದಲ್ಲಿ ಸಂಕಷ್ಟ ಆಗುತ್ತಿತ್ತು. ಅನ್ನ ಆಹಾರವಿಲ್ಲದೆ ಇನ್ನೂ ಸಾಕಷ್ಟು ಜನರು ಸಾಯುತ್ತಿದ್ದರು. ಲಂಚ ಎಷ್ಟಿದೆ ಗೊತ್ತಾ? ಈಶ್ವರಪ್ಪ ಏಕೆ ರಾಜೀನಾಮೆ ಕೊಟ್ಟಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಜರ್ಮನಿಯ ರಾಜಧಾನಿಯಲ್ಲಿ ನಟಿ ಜಾನ್ವಿ ಕಪೂರ್; ಇಲ್ಲಿವೆ ಫೋಟೋ
ಕೆ.ಎಸ್.ಈಶ್ವರಪ್ಪ 40 ಪರ್ಸೆಂಟ್ ಲಂಚ ಹೊಡೆದು ಸಿಕ್ಕಿಬಿದ್ದಿದ್ದಾರೆ. ನಾವು ಹೋರಾಟ ಮಾಡಿದ ಮೇಲೆ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಮತ್ತೊಬ್ಬರ ಮನೆ ಹಾಳು ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ. ಇಂತಹ ಮಂತ್ರಿಗಳನ್ನು ಇಟ್ಟುಕೊಂಡಿದ್ದ ಸರ್ಕಾರ ಇರಬೇಕಾ? ನರೇಂದ್ರ ಮೋದಿ ನಾನು ತಿನ್ನಲ್ಲ ಬಿಡಲ್ಲ ಎಂದು ಹೇಳ್ತಿದ್ದರು. ಆದ್ರೆ ಗುತ್ತಿಗೆದಾರ ಸಂಘದವರು ಪತ್ರ ಬರೆದು ಒಂದು ವರ್ಷ ಆಯ್ತು. ಏನು ಮಾಡುತ್ತಿದ್ದೀರಿ ನೀವು? ನರೇಂದ್ರ ಮೋದಿ ಅಚ್ಚೇದಿನ್ ಅಂತಾರೆ. ಯಾರಿಗೆ ಅಚ್ಚೇದಿನ್ ಬಂದಿದೆ ಹೇಳಿ? ಗ್ಯಾಸ್ ದರ ಈಗ ಎಷ್ಟಿದೆ? ಎಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ, ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಸೇರಿ 3 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಹಣಕಾಸು ಮಂತ್ರಿಯಾದ್ರೆ ಎಲ್ಲಾ ಸರಿಮಾಡಲು 2 ವರ್ಷ ಬೇಕು. ನಾನು ಸುಮಾರು 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ಯಾವತ್ತಿಗೂ ಬಂದಿರಲಿಲ್ಲ ಸರಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಫೇಲ್ ಆಗಿದ್ದಾರೆ. ಸುಮ್ಮನೆ ಭಾಷಣ ಹೊಡೆದುಕೊಂಡು ಇದ್ದಾರೆ. ಕೊರೊನಾ ಸಂದರ್ಭದಲ್ಲಿ ಉದ್ಯಮಿಗಳ ಆದಾಯ ಹೆಚ್ಚಾಗಿದೆ. ಸುಮಾರು 100 ಉದ್ಯಮಿಗಳ ಆದಾಯ ಹೆಚ್ಚಾಗಿದೆ. 33 ಲಕ್ಷ ಕೋಟಿ ಆದಾಯ ಹೆಚ್ಚಾಯಿತು. ಪ್ರತಿ ರಾಜ್ಯಕ್ಕೆ ಬರುವ 1 ಲಕ್ಷ ಕೋಟಿ ಕಡಿಮೆಯಾಯ್ತು
ಎಂದು ಧಾರವಾಡದಲ್ಲಿ ಹೇಳಿದ್ದಾರೆ.
ನಾನು ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿದ್ದೇನೆ. ಅವಕಾಶಗಳಿಂದ ವಂಚಿತರಾದವರ ಪರ ಹೋರಾಟ ನಮ್ಮ ಬದ್ಧತೆ. ಕಾಂಗ್ರೆಸ್ ಪಕ್ಷ ಎಲ್ಲ ಜಾತಿಗಳ ಪರವಾಗಿದೆ. ಬಿಜೆಪಿಯವರು ಹಿಂದುಗಳು ನಾವೆಲ್ಲ ಒಂದು ಅಂತಾ ಹೇಳುತ್ತಾರೆ. ಪಠ್ಯಪುಸ್ತಕ ಇಟ್ಟುಕೊಂಡು ಬದಲಾವಣೆ ಮಾಡಿದಿರಲ್ವಾ? ಕುವೆಂಪು, ಭಗತ್ ಸಿಂಗ್, ನಾರಾಯಣಗುರು ಹಿಂದುಗಳಲ್ವಾ. ಬಿಜೆಪಿ ಸರ್ಕಾರ ಪಠ್ಯದಲ್ಲಿ ಎಲ್ಲವನ್ನು ತಿರುಚಿದೆ ಎಂದರು.
ಹಾವೇರಿ: ಹೆಚ್.ಡಿ ಕುಮಾರಸ್ವಾಮಿ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಲಿ. ಮೊದಲೇ ನಾವು ಅಭ್ಯರ್ಥಿ ಹಾಕಿದ್ದೇವೆ. ನಾವು ಹಾಕಿದ್ಮೇಲೆ ಜೆಡಿಎಸ್ನವರು ಅಭ್ಯರ್ಥಿ ಹಾಕಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಿವೃತ್ತಿ ಮಾಡಿಸಿ ನಮಗೆ ಮತ ಹಾಕಿಸಿ ಎಂದು ಹಾವೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ದೇವೇಗೌಡರು ಸ್ಪರ್ಧಿಸಿದ್ದಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ. ನಾವು ಹೆಚ್.ಡಿ.ಕುಮಾರಸ್ವಾಮಿ ಅವರನ್ನ ಸಿಎಂ ಮಾಡಿದ್ದೇವೆ. ಈಗ ನಮಗೆ ಸಹಕಾರ ನೀಡಲಿ. ನಾವು ಅಭ್ಯರ್ಥಿ ಹಾಕಿದ್ಮೇಲೆ ಅವರು ಸುಮ್ಮನಿರಬೇಕಿತ್ತು. ಈಗ ಅಭ್ಯರ್ಥಿ ಹಾಕಿ ಸುರ್ಜೇವಾಲ ಜೊತೆ ಮಾತಾಡಿದೆ. ಸೋನಿಯಾ ಗಾಂಧಿ ಜತೆ ಮಾತಾಡಿದೆ ಎಂದರೆ ಏನು ಪ್ರಯೋನ. ಇವರ ಪಾಡಿಗೆ ಇವರು ಹೇಳಿಕೊಂಡ್ರೆ ನಾನೇನು ಮಾಡಲಿ. ಅವರು ಸಹಕಾರ ನೀಡಲಿ, ನಾವು ತೆಗೆದುಕೊಳ್ಳುತ್ತೇವೆ. ಜೆಡಿಎಸ್ನವರ ಮತಗಳನ್ನೆಲ್ಲ ನಮ್ಮ ಅಭ್ಯರ್ಥಿಗೆ ಹಾಕಬೇಕು ಎಂದು ಹೆಚ್ಡಿಕೆ ವಿರುದ್ದ ಸಿದ್ದಾರಾಮಯ್ಯ ಹರಿಹಾಯ್ದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:11 pm, Wed, 8 June 22