ಹುಬ್ಬಳ್ಳಿ, ಜು.31: ಹುಬ್ಬಳ್ಳಿಯ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ನೇಹಾ ಕೊಲೆ ಪ್ರಕರಣ(Neha Murder Case) ಕ್ಕೆ ಸಂಬಂಧಿಸಿದಂತೆ ‘ರಾಜಕೀಯ ಷಡ್ಯಂತ್ರದಿಂದ ನನ್ನ ಮಗಳ ಕೊಲೆಯಾಗಿದ್ದು, ನೂರಕ್ಕೆ ನೂರರಷ್ಟು ನಮ್ಮ ಪಕ್ಷದ ಮುಖಂಡರೇ ಹತ್ಯೆ ಮಾಡಿಸಿದ್ದಾರೆ ಎಂದು ನೇಹಾ ತಂದೆ ನಿರಂಜನಯ್ಯ ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಈ ಘಟನೆಯಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಷಡ್ಯಂತ್ರ ನಡೆಸುತ್ತಿದ್ದಾರೆ ಎಂದಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿ ಕೋರ್ಟ್ ಅವಶ್ಯಕತೆಯಿಲ್ಲವೆಂದು ಗೃಹಸಚಿವ ಪರಮೇಶ್ವರ್ ಹೇಳಿದ್ದು, ಇದಕ್ಕೆ ನಿರಂಜನಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು. ‘ಗೃಹಸಚಿವರ ಹೇಳಿಕೆ ನನಗೆ ಆಶ್ಚರ್ಯ ಎನಿಸಿದ್ದು, ಅಷ್ಟೆ ದುಃಖವಾಗಿದೆ. ಸರ್ಕಾರದ ಪತ್ರದ ಮೂಲಕ ತ್ವರಿತಗತಿ ಕೋರ್ಟ್ ಮಾಡುತ್ತೇವೆಂದಿತ್ತು. ಸಿಎಂ, ಕಾನೂನು ಸಚಿವರು ಬಂದು ಸರ್ಕಾರದ ಪತ್ರವನ್ನು ತೋರಿಸಿದ್ದರು. ‘ನನ್ನ ಮಗಳು ನೇಹಾ ಕೊಲೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಇಂತಹ ಪೈಶಾಚಿಕ ಕೃತ್ಯದ ಬಗ್ಗೆ ಗೃಹಸಚಿವರ ಹೇಳಿಕೆ ಸಮಂಜಸವಲ್ಲ. ಈ ಹೇಳಿಕೆಯಿಂದ ರಾಜ್ಯ ಸರ್ಕಾರಕ್ಕೆ ಕಳಂಕ ತರಲಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ನೇಹಾ ಕೊಲೆ: ಚಾರ್ಜ್ ಶೀಟ್ನಲ್ಲಿ ಲವ್ ಜಿಹಾದ್ ಉಲ್ಲೇಖವಿಲ್ಲ, ಮದುವೆಗೆ ನಿರಾಕರಿಸಿದ್ದಕ್ಕೆ ಹತ್ಯೆ
ನೇಹಾ ಹತ್ಯೆಯಾಗಿ 32 ದಿನದ ನಂತರ ಸಾಂತ್ವನ ಹೇಳಲು ಬಂದಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್, ನ್ಯಾಯಕೊಡಿಸುವ ಭರವಸೆ ನೀಡಿದ್ದರು. ಈಗ ತ್ವರಿತಗತಿ ಕೋರ್ಟ್ ಅಗತ್ಯವಿಲ್ಲವೆಂದು ಉಲ್ಟಾ ಹೊಡೆದಿದ್ದಾರೆ. ಈ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ಆರೋಪಿಗೆ ಸಹಾಯ ಮಾಡುವುದರಿಂದ ನಿಮಗೆ ಏನು ಲಾಭವಾಗುತ್ತದೆ. ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕೆಂಬುದು ನನ್ನ ಬೇಡಿಕೆ. ನಾನು ಕಾರ್ಪೊರೇಟರ್, ಕಾಂಗ್ರೆಸ್ ಕಾರ್ಯಕರ್ತನಿಗೆ ರಕ್ಷಣೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಮಗಳನ್ನು ಕೊಲೆ ಮಾಡಿಸುವುದಕ್ಕಿಂತ ಆರೋಪಿಗೆ ಮೊದಲು ಹೊರಗೆ ತರುತ್ತೇನೆಂದು ಮಾತು ಕೊಟ್ಟಿರುತ್ತಾರೆ. ಹೀಗಾಗಿ ಯಾರೂ ಮಾಡಿಸಿದ್ದು ಎಂದು ಹೇಳಿ ಬಿಟ್ಟರೆ ಎಂಬ ಭಯದಿಂದ ಆರೋಪಿಗೆ ಸಹಾಯ ಮಾಡುತ್ತಿದ್ದಾರೆ. ಕೊಲೆ ಆರೋಪಿಗೆ ಜಾಮೀನು ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಮಗಳು ನೇಹಾ ಕೊಲೆ ಪ್ರಕರಣದ ಚಾರ್ಜ್ಶೀಟ್ ಇನ್ನೂ ಸಿಕ್ಕಿಲ್ಲ.
ಒಂದು ಕಾಪಿ ಕೊಡಿ ಅಂದ್ರೂ ಸಿಐಡಿ ಅಧಿಕಾರಿಗಳು ನನಗೆ ಕೊಟ್ಟೇ ಇಲ್ಲ. ಮೇಲ್ನೋಟಕ್ಕೆ ಚಾರ್ಜ್ಶೀಟ್ನಲ್ಲಿ ಕೈಯಾಡಿಸಿರುವ ಅನುಮಾನವಿದೆ. ಕಾರ್ಯಕರ್ತರ ಬೆಳಿಬಾರದು, ಬೆಳೆದರೆ ನಮಗೆ ಸಮಸ್ಯೆ ಎಂಬ ಭೀತಿ ಎದುರಾಗಿದೆ. ಇವರು ತಪ್ಪು ಮಾಡಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಯ್ತು. ನಾನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ