ವಿನಯ ಕುಲಕರ್ಣಿ, ಯೋಗೀಶ್ ಗೌಡ
ಧಾರವಾಡ, ಜೂನ್ 07: ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಸದಸ್ಯನಾಗಿದ್ದ ಯೋಗೀಶ್ ಗೌಡ (yogesh gowda) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ ಕುಲಕರ್ಣಿ (Vinay Kulkarni) ಮತ್ತೆ ಜೈಲು ಸೇರಲಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಮಾಜಿ ಸಚಿವ ಜೈಲು ಸೇರಲಿದ್ದಾರೆ. ಪ್ರಭಾವಿ ಶಾಸಕರಲ್ಲಿ ಒಬ್ಬರಾಗಿರುವ ವಿನಯ ಕುಲಕರ್ಣಿ, ಈ ಪ್ರಕರಣದಿಂದಾಗಿ ಅವರ ಇಮೇಜ್ಗೂ ಡ್ಯಾಮೇಜ್ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಸಾಕ್ಷಿಗಳಿಗೆ ಲಂಚ ನೀಡಿದ ಆರೋಪದ ಹಿನ್ನೆಲೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಗೊಳಿಸಿದೆ.
- 2016 ರ ಜೂ. 15 ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದ ಯೋಗೀಶಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು.
- ಕೊಲೆ ನಡೆದ ಬಳಿಕ ಆರೋಪಿ ಬಸವರಾಜ್ ಮುತ್ತಗಿ ಹಾಗೂ ಆತನ ತಂಡವನ್ನು ಪೊಲೀಸರು ಬಂಧಿಸಿದ್ದರು. ಆದರೆ ಯಾವಾಗ ಈ ಪ್ರಕರಣವನ್ನು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಸಿಬಿಐಗೆ ನೀಡಿದರೋ ಆಗ ನಿಜವಾದ ಕೊಲೆಗಾರರೇ ಬೇರೆ ಅನ್ನೋದು ಬಯಲಿಗೆ ಬಂದಿತ್ತು.
- ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಕೈವಾಡ ಇದೆ ಎಂದು ಆರೋಪಿಸಿ, ವಿನಯ ಕುಲಕರ್ಣಿ ಅವರನ್ನು 2020 ನವೆಂಬರ್ 5 ರಂದು ಸಿಬಿಐ ಬಂಧಿಸಲಾಗಿತ್ತು.
- 9 ತಿಂಗಳು ಜೈಲಿನಲ್ಲಿದ್ದ ವಿನಯ ಕುಲಕರ್ಣಿ ಸುಪ್ರೀಂ ಕೋರ್ಟ್ ನೀಡಿದ್ದ ಜಾಮೀನಿನ ಮೇಲೆ ಆಗಸ್ಟ್ 11, 2021 ರಂದು ಬೇಲ್ ಸಿಕ್ಕಿತ್ತು ಆಗಷ್ಟ್ 13ರಂದು ಹೊರಗೆ ಬಂದಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ ಅನೇಕ ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ವಿನಯ ಕುಲಕರ್ಣಿ ಧಾರವಾಡ ಜಿಲ್ಲೆ ಪ್ರವೇಶ ಮಾಡುವಂತಿಲ್ಲ ಅನ್ನೋ ಷರತ್ತು ಕೂಡ ಇತ್ತು. ಇಂಥದ್ದರಲ್ಲಿಯೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವಿನಯ ಭರ್ಜರಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಯೋಗೀಶ್ ಗೌಡರ್ ಕೊಲೆ ಕೇಸ್: ವಿನಯ್ ಕುಲಕರ್ಣಿ ಜಾಮೀನು ರದ್ದು, ಮತ್ತೆ ಜೈಲಿಗೆ ಹೋಗ್ತಾರಾ ಕೈ ಶಾಸಕ?
- ಸದ್ಯಕ್ಕೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿಯೇ ವಾಸವಾಗಿರುವ ವಿನಯ ಕುಲಕರ್ಣಿ ಅಲ್ಲಿಂದಲೇ ತಮ್ಮ ಧಾರವಾಡ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಸಾಕ್ಷಿಗಳಿಗೆ ಆಮಿಷವೊಡ್ಡಿದ ಆರೋಪ ಕೇಳಿ ಬಂತು. ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯಾಗಿರುವ ವಿನಯ ಕುಲಕರ್ಣಿ ಅವರ ಮಾವ ಚಂದ್ರಶೇಖರ ಇಂಡಿ ವಿಜಯಪುರ ಮೂಲದ ಸಾಕ್ಷಿಗಳಿಗೆ ಹಣದ ಆಮಿಷವೊಡ್ಡಿರೋದನ್ನು ಸಿಬಿಐ ಪತ್ತೆ ಹಚ್ಚಿತ್ತು.
- ಅಷ್ಟೇ ಅಲ್ಲ, ಸಾಕ್ಷಿಗಳೊಂದಿಗೆ ವಿನಯ ಕುಲಕರ್ಣಿ ಹಾಗೂ ಚಂದ್ರಶೇಖರ ಇಂಡಿ ಸಂಪರ್ಕ ಇಟ್ಟುಕೊಂಡಿರುವುದರ ದಾಖಲೆಯನ್ನು ಸಿಬಿಐ ಕಲೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಷರತ್ತನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇವರಿಬ್ಬರ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಿಬಿಐ ಕೋರ್ಟ್ ಮೆಟ್ಟಿಲೇರಿತ್ತು.
- ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಚಂದ್ರಶೇಖರ್ ಇಂಡಿ ಜಾಮೀನನ್ನು ರದ್ದು ಮಾಡಿತಾದರೂ ವಿನಯ ಕುಲಕರ್ಣಿ ಜಾಮೀನು ರದ್ದು ಮಾಡಲಿಲ್ಲ. ಏಕೆಂದರೆ ವಿನಯ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಹೀಗಾಗಿ ಈ ವಿಚಾರವಾಗಿ ನೀವು ಸುಪ್ರೀಂ ಕೋರ್ಟ್ಗೆ ಹೋಗಬಹುದು ಅಂತಾ ಸಿಬಿಐಗೆ ಕೋರ್ಟ್ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಟ್ಟುಬಿಡದ ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ರಿಟ್ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ವಿನಯ ಕುಲಕರ್ಣಿ ಅವರ ಜಾಮೀನನ್ನು ರದ್ದುಪಡಿಸಿದೆ. ಇದು ತಮ್ಮ ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವು ಅನ್ನೋದು ಪ್ರಕರಣದ ಪ್ರಮುಖ ದೂರುದಾರ ಹಾಗೂ ಕೊಲೆಯಾದ ಯೋಗೀಶ್ ಗೌಡನ ಸಹೋದರ ಗುರುನಾಥ ಗೌಡ ಹೇಳಿದ್ದಾರೆ.
- ಈ ಮೊದಲು ಕೂಡ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ ಮಾಫಿ ಸಾಕ್ಷಿ ಆಗಲು ಅನುಮತಿ ನೀಡಬಾರದು ಅಂತಾ ವಿನಯ ಪರ ವಕೀಲರು ಸಾಕಷ್ಟು ಹೋರಾಟ ಮಾಡಿದ್ದರು. ಆದರೆ ಕೊನೆಗೂ ಬಸವರಾಜ ಮುತ್ತಗಿಗೆ ಕೋರ್ಟ್ ಮಾಫಿ ಸಾಕ್ಷಿಯಾಗಲು ಅನುಮತಿ ನೀಡಿತ್ತು. ಇದು ವಿನಯ ಕುಲಕರ್ಣಿ ಪಾಲಿಗೆ ದೊಡ್ಡ ಆಘಾತವಾಗಿತ್ತು.
- ಅದಾದ ಬಳಿಕ ವಿನಯ ಕುಲಕರ್ಣಿ ಹಾಗೂ ಸಾಕ್ಷಿಗಳ ಮೇಲೆ ಸಿಬಿಐ ನಿರಂತವಾಗಿ ಕಣ್ಣಿಟ್ಟಿತ್ತು. ಇದೇ ವೇಳೆ ಸಾಕ್ಷಿ ನುಡಿಯಲು ಬರಲಿದ್ದ ವಿಜಯಪುರದ ಸುರೇಶ ಮತ್ತು ರಮೇಶ ಇಬ್ಬರು ಸಾಕ್ಷಿಗಳಿಗೆ ತಲಾ 50 ಸಾವಿರ ರೂ ನೀಡಿದ್ದರು. ಇದರಲ್ಲಿ ಯೋಗೀಶ್ ಗೌಡ ಕೊಲೆಯಾದ ದಿನ ಬಸವರಾಜ ಮುತ್ತಗಿಯನ್ನು ಸುರೇಶ ಬೆಂಗಳೂರಿಗೆ ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ನಡೆದಿದ್ದ ಬೆಳವಣಿಗೆಯನ್ನು ಈತ ಕಣ್ಣಾರೆ ಕಂಡಿದ್ದ.
ಇದನ್ನೂ ಓದಿ: ಜಾಮೀನು ಆದೇಶಕ್ಕೆ ಕಾಯುತ್ತಿರುವ ಹಿಂಡಲಗ ಜೈಲು ಸಿಬ್ಬಂದಿ: ಧಾರವಾಡದಲ್ಲಿ ವಿನಯ್ ಕುಲಕರ್ಣಿ ಬೆಂಬಲಿಗರ ಸಂಭ್ರಮಾಚರಣೆ
- ಇನ್ನು ರಮೇಶ ಕೂಡ ಅವತ್ತು ಮುತ್ತಗಿ ಜೊತೆಗೆ ಇದ್ದ. ಹೀಗಾಗಿ ಇವರಿಬ್ಬರು ತಮ್ಮ ಹೇಳಿಕೆಯನ್ನು ಬದಲಿಸಲು ಇವರಿಬ್ಬರಿಗೆ ಪದೇ ಪದೇ ವಿನಯ ಕುಲಕರ್ಣಿ ಆಪ್ತರ ಹಾಗೂ ಚಂದ್ರಶೇಖರ ಇಂಡಿ ಫೋನ್ಗಳು ಹೋಗಿವೆ. ಇದನ್ನು ಗಮನಿಸಿದ್ದ ಸಿಬಿಐ ಇವರಿಬ್ಬರ ಬೆನ್ನು ಬಿದ್ದಿತ್ತು. ಅವರಿಗೆ ಹಣ ನೀಡಿರುವ ಬಗ್ಗೆ ಹಾಗೂ ಫೋನ್ ಕಾಲ್ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೋರ್ಟ್ಗೆ ಒದಗಿಸಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್ ಇದೇ ವರ್ಷದ ಏಪ್ರಿಲ್ 25 ರಂದು ಚಂದ್ರಶೇಖರ ಇಂಡಿಯ ಜಾಮೀನನ್ನು ರದ್ದುಪಡಿಸಿತ್ತು.
- ಇನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ವಿನಯ ಕುಲಕರ್ಣಿಗೆ ಜಾಮೀನು ನೀಡಿರೋದ್ರಿಂದ ನೀವು ಅಲ್ಲಿಯೇ ಅರ್ಜಿ ಸಲ್ಲಿಸಬಹುದು ಅಂತಾ ಸಲಹೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆನ್ನುಬಿಡದ ಸಿಬಿಐ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಇದೀಗ ಮಹತ್ವದ ತೀರ್ಪು ಹೊರಬಿದ್ದಿದೆ. ಆ ಮೂಲಕ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಸುಪ್ರಿಂ ಕೋರ್ಟ್ ರದ್ದುಪಡಿಸಿದೆ. ಒಂದು ವಾರದೊಳಗೆ ಸಿಬಿಐ ಮುಂದೆ ಕುಲಕರ್ಣಿ ಶರಣಾಗಬೇಕು ಅಂತಾ ಆದೇಶಿಸಿದೆ. ಇದು ಪ್ರಕರಣದ ಪ್ರಮುಖ ಹೋರಾಟಗಾರ ಹಾಗೂ ಯೋಗೀಶ್ ಆಪ್ತ ಬಸವರಾಜ ಕೊರವರ್ ಅವರಿಗೆ ಸಂತಸವನ್ನು ತಂದಿದೆ.
ಹಲವಾರು ಬಾರಿ ಸಾಕಷ್ಟು ಕಾರಣಗಳನ್ನು ನೀಡಿ ವಿನಯ ಕುಲಕರ್ಣಿ ಹಾಗೂ ಇತರ ಆರೋಪಿಗಳು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುತ್ತಲೇ ಬಂದಿದ್ದರು. ಇದರಿಂದಾಗಿ ಈ ಪ್ರಕರಣದ ವಿಚಾರಣೆಗೂ ತೊಂದರೆಯಾಗುತ್ತಲೇ ಇತ್ತು. ಆದರೆ ಇದೀಗ ಸಾಕ್ಷಿಗಳಿಗೆ ಆಮಿಷವೊಡ್ಡಿರುವುದು ಸುಪ್ರೀಂ ಕೋರ್ಟ್ ಗಮನಕ್ಕೂ ಬಂದಿದ್ದರಿಂದ ವಿನಯ್ ಕುಲಕರ್ಣಿಗೆ ಕೋರ್ಟ್ ಭಾರೀ ಶಾಕ್ ನೀಡಿದೆ. ಈ ತೀರ್ಪು ಮುಂಬರುವ ದಿನಗಳಲ್ಲಿ ಉಳಿದ ಸಾಕ್ಷಿಗಳಿಗೆ ಕೂಡ ಎಚ್ಚರಿಕೆ ಗಂಟೆಯಾಗೋದು ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.