ಬೈ ಒನ್​​ ಗೇಟ್​ ಒನ್​ ಆಫರ್​​​​: 703 ರೂ ವಸ್ತುಗೆ ಬರೋಬ್ಬರಿ 35 ಸಾವಿರ ರೂ ದಂಡ ತೆತ್ತ ಬ್ಲಿಂಕಿಟ್!

Blinkit fine: ಕೇವಲ 703 ರೂ ಬೆಲೆಯ ವಸ್ತುಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬ್ಲಿಂಕಿಟ್‌ ಕಂಪನಿಗೆ ಬರೋಬ್ಬರಿ 35 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ಬೈ ಒನ್​​ ಗೇಟ್​ ಒನ್​ ಆಫರ್ ನೀಡಿ ಗ್ರಾಹಕರಿಗೆ ಮೋಸ ಆರೋಪ ಕೇಳಿಬಂದಿದೆ.

ಬೈ ಒನ್​​ ಗೇಟ್​ ಒನ್​ ಆಫರ್​​​​: 703 ರೂ ವಸ್ತುಗೆ ಬರೋಬ್ಬರಿ 35 ಸಾವಿರ ರೂ ದಂಡ ತೆತ್ತ ಬ್ಲಿಂಕಿಟ್!
ಧಾರವಾಡ ಜಿಲ್ಲಾ ಗ್ರಾಹಕ ಆಯೋಗ
Image Credit source: google
Edited By:

Updated on: Jul 27, 2026 | 5:43 PM

ಮುಖ್ಯಾಂಶಗಳು

  • ಬ್ಲಿಂಕಿಟ್‌ಗೆ 35,000 ದಂಡ ಹಾಕಿದ ಧಾರವಾಡ ಗ್ರಾಹಕ ಆಯೋಗ
  • ಬ್ಲಿಂಕಿಟ್ ಸಂಸ್ಥೆಯ ಸೇವಾ ಲೋಪಕ್ಕೆ ಧಾರವಾಡದ ಗ್ರಾಹಕಿ ಗೆಲುವು
  • ಬೈ ಒನ್​​ ಗೇಟ್​ ಒನ್​ ಆಫರ್​​​​ ಹೆಸರಲ್ಲಿ ಮೋಸ ಆರೋಪ

ಧಾರವಾಡ, ಜುಲೈ 27: ಬೈ ಒನ್​​ ಗೇಟ್​ ಒನ್​ ಆಫರ್ ನೀಡಿ ಗ್ರಾಹಕರಿಗೆ ಮೋಸ ಆರೋಪ ಹಿನ್ನೆಲೆ  ಬ್ಲಿಂಕಿಟ್​​ಗೆ (Blinkit) ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೇವಲ 703 ರೂ ಬೆಲೆಯ ವಸ್ತುಗೆ ಬರೋಬ್ಬರಿ 35 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ಧಾರವಾಡದ (Dharwad)  ಸಾರಸ್ವತಪುರ ಬಡಾವಣೆಯ ನಿವಾಸಿ, ವಕೀಲೆ ಲಕ್ಷ್ಮಿ ಬಸವರಾಜ ನೇಗಿನಾಳ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಈಶಪ್ಪ ಭೂತೆ ಅವರಿಂದ ಪೀಠ ಈ ಪ್ರಮುಖ ತೀರ್ಪು ನೀಡಿದೆ.

ನಡೆದಿದ್ದೇನು?

ವಕೀಲೆ ಲಕ್ಷ್ಮಿ ಅವರು 2025ರ ಮೇ 20ರಂದು ತಮ್ಮ ಸಾಕುನಾಯಿಗಾಗಿ ಬ್ಲಿಂಕಿಟ್ ಆ್ಯಪ್ ಮೂಲಕ 703 ಬೆಲೆಯ ‘ವಿಲ್ಡರ್‌ನೆಸ್-ಚಿಕನ್ ಮತ್ತು ವೆಜಿಟೇಬಲ್’ ನಾಯಿ ಆಹಾರವನ್ನು ಆರ್ಡರ್ ಮಾಡಿದ್ದರು. ಆ ವೇಳೆ ಆ ಉತ್ಪನ್ನಕ್ಕೆ ‘ಒಂದಕ್ಕೆ ಇನ್ನೊಂದು ಉಚಿತ’ ಆಫರ್ ಚಾಲ್ತಿಯಲ್ಲಿತ್ತು. ಆದರೆ ಡೆಲಿವರಿ ಬಾಯ್ ಕೇವಲ ಒಂದು ಪ್ಯಾಕೆಟ್ ಆಹಾರವನ್ನು ಮಾತ್ರ ನೀಡಿದ್ದ.

ಇದನ್ನೂ ಓದಿ: ಉಳಿತಾಯ ಖಾತೆಯ ಹಣ ನೀಡದ ಸೊಸೈಟಿಗೆ ದಂಡ: ಹುಬ್ಬಳ್ಳಿ ಮಹಿಳೆಗೆ ಸಿಕ್ತು ನ್ಯಾಯ!

ಈ ಕುರಿತು ಲಕ್ಷ್ಮಿ ಅವರು ಬ್ಲಿಂಕಿಟ್ ಸಂಸ್ಥೆಯ ಕಸ್ಟಮರ್ ಕೇರ್‌ಗೆ ಹಲವಾರು ಬಾರಿ ಕರೆ ಮಾಡಿ ದೂರು ನೀಡಿದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಕಂಪನಿಯ ಸೇವಾ ಲೋಪ ಹಾಗೂ ಬೇಜವಾಬ್ದಾರಿಗೆ ಬೇಸತ್ತ ಅವರು ನ್ಯಾಯಕ್ಕಾಗಿ ಧಾರವಾಡದ ಜಿಲ್ಲಾ ಗ್ರಾಹಕರ ಆಯೋಗದ ಬಾಗಿಲು ತಟ್ಟಿದ್ದರು.

ಬಡ್ಡಿ ಸಮೇತ ಹಣ ಹಿಂತಿರುಗಿಸುವಂತೆ ಆಯೋಗ ಆದೇಶ

ಸೋಮವಾರ ಪ್ರಕರಣದ ವಿಚಾರಣೆ ಮಾಡಿದ ಗ್ರಾಹಕರ ಆಯೋಗವು ಬ್ಲಿಂಕಿಟ್ ಸಂಸ್ಥೆಯ ಲೋಪವನ್ನು ಎತ್ತಿಹಿಡಿದಿದ್ದು, ಗ್ರಾಹಕರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ. ದೂರುದಾರರು ಪಾವತಿಸಿದ್ದ 703 ರೂ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕು.

ಇದನ್ನೂ ಓದಿ: Gruha Jyothi Scheme: ಸರ್ವರ್ ಸಮಸ್ಯೆ, ಮೀಟರ್ ರೀಡರ್‌ಗಳ ಕೊರತೆ: ಗಡುವಿನೊಳಗೆ ಸಿಗಲ್ವಾ ಉಚಿತ ವಿದ್ಯುತ್ ಭಾಗ್ಯ?

ಜೊತೆಗೆ 25 ಸಾವಿರ ರೂ ಪರಿಹಾರ ಹಾಗೂ ಪ್ರಕರಣದ ಕಾನೂನು ವೆಚ್ಚವಾಗಿ 10 ಸಾವಿರ ರೂ ಸೇರಿದಂತೆ ಒಟ್ಟು 35 ಸಾವಿರ ರೂ ಮೊತ್ತವನ್ನು ದೂರುದಾರರಿಗೆ ಪಾವತಿಸುವಂತೆ ಬ್ಲಿಂಕಿಟ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us