ಧಾರವಾಡ, ಜುಲೈ 20: ಪ್ಲಾಟ್ ಖರೀದಿ (plot purchase) ಪತ್ರ ಮಾಡಿಕೊಡದ ನಿಸರ್ಗ ರಿಯಲ್ ವೆಲ್ತ್ ಸಲ್ಯೂಶನ್ಸ್‌ಗೆ ಗ್ರಾಹಕರ ಆಯೋಗ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಡಾ. ವಿನಯ ಸುಲ್ತಾನಪುರ ಎಂಬುವವರು ಹುಬ್ಬಳ್ಳಿಯ ನಿಸರ್ಗ ರಿಯಲ್ ವೆಲ್ತ್ ಸಲ್ಯೂಶನ್ಸ್‌ರವರು ಅಭಿವೃದ್ಧಿಪಡಿಸಿದ ನಿಸರ್ಗ ಸಿಲ್ವರ್ ಟೌನ್‌ನಲ್ಲಿ ಪ್ಲಾಟ್ ನಂ. 57ನ್ನು ರೂ. 38.28 ಲಕ್ಷಕ್ಕೆ 2014 ರ ಮಾರ್ಚ್ ತಿಂಗಳಲ್ಲಿ ಖರೀದಿಸಿದ್ದರು.
ಆ ಪೈಕಿ ಬೇರೆ ಬೇರೆ ದಿನಾಂಕಗಳಂದು ವಿನಯ ರೂ. 20 ಲಕ್ಷ ಮುಂಗಡ ಹಣವನ್ನು ನೀಡಿದ್ದರು. ಈ ಕುರಿತು ಖರೀದಿ ಕರಾರು ಪತ್ರ ಸಹ ಮಾಡಿಕೊಳ್ಳಲಾಗಿತ್ತು. ಬಾಕಿ ಮೊತ್ತವನ್ನು ತೆಗೆದುಕೊಂಡು ಖರೀದಿ ಪತ್ರ ನೋಂದಣಿ ಮಾಡಿಕೊಡುವಂತೆ ಹಲವಾರು ಬಾರಿ ವಿನಯ ಅವರು ನಿಸರ್ಗ ರಿಯಲ್ ವೆಲ್ತ್ ಸಲ್ಯೂಶನ್ ಮಾಲೀಕರಿಗೆ ಕೇಳಿಕೊಂಡರೂ ಖರೀದಿ ಪತ್ರ ನೋಂದಣಿ ಮಾಡಿ ಕೊಟ್ಟಿರಲಿಲ್ಲ. ಹೀಗಾಗಿ ವಿನಯ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ: Dharwad News: ಧಾರವಾಡದ ಕಾರ್ಖಾನೆಗಳಿಂದ ತೆರಿಗೆಯೇ ಬರುತ್ತಿಲ್ಲ: ಗ್ರಾಮ ಪಂಚಾಯತಿಗಳಿಗಿಲ್ಲ ಆದಾಯ
ಈ ದೂರಿನ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ದೂರುದಾರನಿಂದ ರೂ. 20 ಲಕ್ಷ ಮುಂಗಡ ಹಣ ಪಡೆದುಕೊಂಡು ಖರೀದಿ ಪತ್ರ ನೋಂದಣಿ ಮಾಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಸೇವಾ ನ್ಯೂನ್ಯತೆ ಎಂದು ಅಭಿಪ್ರಾಯಪಡಲಾಗಿದೆ.
ಇದನ್ನೂ ಓದಿ: ಧಾರವಾಡ: ಒಪ್ಪಂದದಂತೆ ನಿವೇಶನ ಅಭಿವೃದ್ಧಿ ಮಾಡದ ಬಿಲ್ಡರ್‌ಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ
ಮುಂಗಡ ಹಣ ರೂ. 20 ಲಕ್ಷ ಮತ್ತು ಅದರ ಮೇಲೆ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 1 ಲಕ್ಷ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚವೆಂದು ರೂ. 10 ಸಾವಿರ ನೀಡುವಂತೆ ನಿಸರ್ಗ ವೆಲ್ತ್ ಸಲ್ಯೂಷನ್‌ಗೆ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.